ಕನ್ನಡ ಬಳಕೆ ಕಡಿಮೆಯಾಗುತ್ತಿರುವುದು ದುಃಖಕರ

| Published : Nov 11 2024, 11:50 PM IST

ಸಾರಾಂಶ

ಕನ್ನಡ ತಾಯಿ ಭಾಷೆ ಎಂಬುದು ಎಲ್ಲಿಯವರೆಗೂ ಜನರ ಮನಸ್ಸಿನಲ್ಲಿ ಬರುವುದಿಲ್ಲವೋ ಅಲ್ಲಿಯವರೆಗೂ ಎಷ್ಟು ಕನ್ನಡ ರಾಜ್ಯೋತ್ಸವ ಆಚರಿಸಿದರೂ ಪ್ರಯೋಜನವಿಲ್ಲ ಎಂದು ಬೆಂಗಳೂರಿನ ಪ್ರಸಿದ್ಧ ಬರಹಗಾರ ಹಾಗೂ ಭಾಷಣಕಾರ ಡಾ.ನಾ.ಸೋಮೇಶ್ವರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಕನ್ನಡ ತಾಯಿ ಭಾಷೆ ಎಂಬುದು ಎಲ್ಲಿಯವರೆಗೂ ಜನರ ಮನಸ್ಸಿನಲ್ಲಿ ಬರುವುದಿಲ್ಲವೋ ಅಲ್ಲಿಯವರೆಗೂ ಎಷ್ಟು ಕನ್ನಡ ರಾಜ್ಯೋತ್ಸವ ಆಚರಿಸಿದರೂ ಪ್ರಯೋಜನವಿಲ್ಲ ಎಂದು ಬೆಂಗಳೂರಿನ ಪ್ರಸಿದ್ಧ ಬರಹಗಾರ ಹಾಗೂ ಭಾಷಣಕಾರ ಡಾ.ನಾ.ಸೋಮೇಶ್ವರ್ ತಿಳಿಸಿದರು.

ನಗರದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಬಯಲುಸೀಮೆ ಸಾಮಾಜಿಕ, ಸಾಂಸ್ಕಂತಿಕ ಸಂಘದ 23ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಭಾವಗೀತ ಗಾಯನ, ಸಾಹಿತ್ಯ ಕಲ್ಪತರು ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ನಾಡಿನಲ್ಲಿ ಜನಿಸಿದಂತಹ ಪ್ರತಿಯೊಬ್ಬರು ಕನ್ನಡ ಸಾಹಿತ್ಯ, ಭಾಷೆಯನ್ನು ಉಳಿಸಿ ಬೆಳೆಸುವಂತಹ ಕಾಯಕವನ್ನು ಮಾಡಬೇಕಿದೆ. ದಿನಕಳೆದಂತೆ ಇತರ ಭಾಷೆಗಳ ಮೇಲಿನ ವ್ಯಾಮೋಹ ಹೆಚ್ಚಾದಂತೆಲ್ಲಾ ಕನ್ನಡದ ಬಳಕೆ ಕಡಿಮೆಯಾಗುತ್ತಿರುವುದು ದುಃಖದ ಸಂಗತಿಯಾಗಿದೆ ಎಂದರು.

ಎರಡು ಸಾವಿರ ವರ್ಷಕ್ಕೂ ಹಳೆಯ ಕನ್ನಡ ಭಾಷೆ ಕನ್ನಡಿಗನ ಹೆಮ್ಮೆಯ ಸಂಕೇತವಾಗಿದೆ. ಅದ್ದರಿಂದ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕರ್ನಾಟಕದಲ್ಲಿ ಕನ್ನಡಿಗರ ಸಂಖ್ಯೆ ಶೇ.65 ರಷ್ಟು ಇದೆ. ಆದರೆ ಶಾಲೆಯಲ್ಲಿ ಕನ್ನಡ ಮಾತನಾಡಿದರೆ ದಂಡ ಹಾಕುವ, ಮನೆಯಲ್ಲಿ ಕನ್ನಡವನ್ನು ಮಾತನಾಡದೇ ಇರುವಂತಹ ಅದೆಷ್ಟೋ ಕುಟುಂಬಗಳಿವೆ ಎಂದರು.

ಇಂಗ್ಲೀಷ್‍ನ್ನು ಭಾಷೆಯಾಗಿ ಮಾತ್ರ ಕಲಿಸಿ, ಅದನ್ನೇ ಮಾತೃಭಾಷೆಯನ್ನಾಗಿಸಬೇಡಿ. ನಾನು ಇಂಗ್ಲೀಷ್ ಭಾಷೆಯ ವಿರೋಧಿಯಲ್ಲ, ಹೊಟ್ಟೆಪಾಡಿಗೆ ಯಾವ ಭಾಷೆ ಬೇಕಾದರೂ ಬಳಸಿ ಮನೆಗಳಲ್ಲಿ ಕನ್ನಡ ಭಾಷೆ ಸಾರ್ವಭೌಮತೆಯನ್ನು ಮೆರೆಯಬೇಕು ಎಂದರು.

ಸಂಯುಕ್ತ ಕರ್ನಾಟಕ ಸಹ ಸಂಪಾದಕ ಕೆ.ವಿ.ಪರಮೇಶ್ ಮಾತನಾಡಿ, ಯಾವುದೇ ಒಂದು ಸಂಘಟನೆ ಸ್ಥಾಪನೆಯಾಗಿ ಸತತ 23 ವರ್ಷಗಳಿಂದ ಸಮಾಜಮುಖಿ ಕಾರ್ಯನಿರ್ವಹಿಸುತ್ತಿದೆ ಎಂದರೆ ಸಾಮಾನ್ಯದ ಸಂಗತಿಯಲ್ಲ. ಸಂಘಟನೆಗಳ ಪ್ರಾರಂಭವಾದಷ್ಟು ವೇಗವಾಗಿ ಕಣ್ಮರೆಯಾಗುವುದನ್ನು ನೋಡಿದ್ದೇವೆ. ಇಂದಿನ ಪೋಷಕರು ಮಕ್ಕಳು ವೈದ್ಯರು, ಎಂಜಿನಿಯರ್‌ಗಳಾಗಿ ಹೊರಹೊಮ್ಮಲಿ ಎಂಬ ಆಸೆ ಪಡುತ್ತಿದ್ದಾರೆ. ಆದರೆ ವಿದ್ಯಾರ್ಥಿ ದಿಸೆಯಲ್ಲಿ ಅವರಿಗೆ ಇಷ್ಟವಿರುವ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಪೋಷಕರು ಅವಕಾಶ ನೀಡುವಂತಹ ಮನಸ್ಥಿತಿ ಮೈಗೂಡಿಸಿಕೊಳ್ಳಬೇಕು. ಇದರಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಅನುಕೂಲವಾಗುತ್ತದೆ ಎಂದರು.

ಮಾಜಿ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಕನ್ನಡ ಪರ ಸಂಘಟನೆಗಳು ನಾಡು, ಭಾಷೆ, ಸಂಸ್ಕಂತಿಯ ಬಗ್ಗೆ ಅಭಿಮಾನ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ದೂರದರ್ಶನದ ಥಟ್ ಅಂತ ಹೇಳಿ ಕಾರ್ಯಕ್ರಮ ಖ್ಯಾತಿಯ ಡಾ.ನಾ.ಸೋಮೇಶ್ವರ್‌ ಅವರಿಗೆ ಸಾಹಿತ್ಯ ಕಲ್ಪತರು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಆಲದಹಳ್ಳಿ ಗ್ರಾಮದ ಚಿತ್ರಕಲಾವಿದ ಎ.ಸಿ.ಹೊನ್ನಪ್ಪರಿಗೆ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿಯ ಕನ್ನಡದಲ್ಲಿ ನೂರಿಪ್ಪತೈದು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ತಹಸೀಲ್ದಾರ್ ಪವನ್ ಕುಮಾರ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ಸುದರ್ಶನ್, ಹಿರಿಯ ಪರ್ತಕರ್ತ ಶಿವರಾಜ್, ಕೇಂದ್ರ ಸಾಹಿತ್ಯ ಪುರಸ್ಕೃತ ಮಕ್ಕಳ ಸಾಹಿತಿ ನಾಗರಾಜಶೆಟ್ಟಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮನಮೋಹನ್, ಸಂಘದ ಅಧ್ಯಕ್ಷ ಎಚ್.ಸಿ.ನಾಗರಾಜು, ಪ್ರಧಾನ ಕಾರ್ಯದರ್ಶಿ ಎನ್.ಬಾನು ಪ್ರಶಾಂತ್, ವೈದ್ಯಾಧಿಕಾರಿ ರವಿಕುಮಾರ್ ಇದ್ದರು.