ಕನ್ನಡಪ್ರಭ ವಾರ್ತೆ ಮೈಸೂರು

ಜಾತಿ, ಮತ, ಕುಲ, ಲಿಂಗ, ವರ್ಗ ಭೇದಗಳಿರದ ವಿಶ್ವಮಾನವ ಧರ್ಮವನ್ನು 12ನೇ ಶತಮಾನದಲ್ಲೇ ಕಟ್ಟ ಹೊರಟಿದ್ದ ಬಸವಣ್ಣನವರ ಆರಾಧಕರಲ್ಲೇ, 21 ನೇ ಶತಮಾನದಲ್ಲೂ ಅನೇಕ ಜಾತಿ ಒಳಜಾತಿಗಳಿರುವುದು ಅತ್ಯಂತ ದುಃಖಕರ ವಿಚಾರ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷ ಕವಿ ಜಯಪ್ಪ ಹೊನ್ನಾಳಿ ಹೇಳಿದರು.

ನಗರದ ಕದಳಿ ಮಹಿಳಾ ವೇದಿಕೆಯು ಮೈಸೂರು ಜಿಲ್ಲೆಯ ಸುತ್ತೂರಿನ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಶಿಕ್ಷಣ ಸಮಚ್ಛಯದಲ್ಲಿರುವ ಅಲ್ಲಮ ಪ್ರಭು ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರೀ ಬಸವೇಶ್ವರ ಜಯಂತಿ ಹಾಗೂ ಅಕ್ಕಮಹಾದೇವಿ ಜಯಂತಿ ಸಮಾರಂಭದಲ್ಲಿ ಬಸವಣ್ಣನವರ ಕುರಿತು ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಮನುಧರ್ಮ ಸಿದ್ಧಾಂತ ಅಲ್ಲಗಳೆದು , ಕಾಯಕ ಸಿದ್ಧಾಂತ ಕಾರ್ಯಗತಗೊಳಿಸಿದ ಬಸವಣ್ಣ, ಜಾತಿಯ ವಿಷದ ಕಳೆಯನ್ನು ಬೇರು ಸಮೇತ ಕಿತ್ತೊಗೆಯಲು ಅಂತರ್ಜಾತಿ ವಿವಾಹವೇರ್ಪಡಿಸಿ, ಆ ಮೂಲಕ ಜಾತಿ ರಹಿತ ಸಮಾಜದ ಸೃಷ್ಟಿಗೆ ಮುಂದಾಗಿದ್ದರು, ಆದರಿಂದು ಅವರ ಅನುಯಾಯಿಗಳಾದ ನಮ್ಮಲ್ಲೇ ಜಾತಿ ಒಳಜಾತಿ ಭೇದಗಳಿರುವುದು ತುಂಬಾ ಬೇಸರದ ವಿಚಾರ, ಈಗಲಾದರೂ ಆತ್ಮಾವಲೋಕನ ಮಾಡಿಕೊಂಡು, ಅಂತರ್ಜಾತಿ ವಿವಾಹಗಳಿಗೆ ಅವಕಾಶ ಕಲ್ಪಿಸಿ, ನಾವೆಲ್ಲರೂ ಒಂದಾಗಬೇಕಿದೆ ಎಂದರು.

ದೀಪ ಬೆಳಗುವ ಮೂಲಕ ಜೆಎಸ್ಎಸ್ ಸಂಸ್ಥೆಗಳ ಸಹಾಯಕ ಆಡಳಿತಾಧಿಕಾರಿ ಜಿ.ಎಲ್. ತ್ರಿಪುರಾಂತಕ ಸಮಾರಂಭ ಉದ್ಘಾಟಿಸಿ, ಸಭಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಸವ ಜಯಂತಿಯ ಹಾಗೂ ಅಕ್ಕಮಹಾದೇವಿ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.


ಕರ್ನಾಟಕ ರಾಜ್ಯ ಮುಕ್ತ ವಿವಿ ಅಕ್ಕಮಹಾದೇವಿ ಸಂಶೋಧನೆ ಮತ್ತು ವಿಸ್ತರಣಾ ಪೀಠದ ನಿರ್ದೇಶಕ ಪ್ರೊ. ಕವಿತಾ ರೈ, ಅಕ್ಕಮಹಾದೇವಿಯ ಸಾಧನೆ ಸಿದ್ಧಿಯ ಕುರಿತು ಉಪನ್ಯಾಸ ನೀಡಿದರು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಶೋಭಾರಾಣಿ ಅಧ್ಯಕ್ಷತೆ ವಹಿಸಿದ್ದರು. ಜೈಪ್ರಕಾಶ್ ಸ್ವಾಗತಿಸಿದರು. ಆರ್‌.ಎಂ. ಶ್ರುತಿ ಹಾಗೂ ಕುಮಾರಿ ವಿನ್ಮಯಿ ಪ್ರಾರ್ಥಿಸಿದರು.

ಕದಳಿ ವೇದಿಕೆಯ ಕಾರ್ಯದರ್ಶಿ ಭವಾನಿ ನಟರಾಜ್, ಖಜಾಂಚಿ ಸುಜಾತ ಬಸವರಾಜ್, ಕಲ್ಯಾಣಿ ನಟರಾಜ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಬಿ.ಎಡ್. ಕಾಲೇಜಿನ ಪ್ರಶಿಕ್ಷಣಾರ್ಥಿಗಳು, ಕಾಲೇಜು ಗುರುಬಳಗದವರು, ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.