ಮಾತೃಭಾಷೆ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ

| Published : Nov 25 2024, 01:02 AM IST

ಸಾರಾಂಶ

ಪಟ್ಟಣದಲ್ಲಿ ಶನಿವಾರ ರಾತ್ರಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವದ ಮಲ್ಲಕಂಬದ ಕಸರತ್ತು.

ಕನ್ನಡಪ್ರಭವಾರ್ತೆ ತೀರ್ಥಹಳ್ಳಿ

ಜಾಗತಿಕ ಮಟ್ಟದಲ್ಲಿ ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಅನಿವಾರ್ಯವಾಗಿದ್ದರೂ ಮಾತೃಭಾಷೆಯನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಆರ್.ಎಂ.ಮಂಜುನಾಥಗೌಡ ಹೇಳಿದರು.

ಪಟ್ಟಣ ಪಂಚಾಯಿತಿ ವತಿಯಿಂದ ಸುವರ್ಣ ಕರ್ನಾಟಕ ಸಂಭ್ರಮಾಚರಣೆಯ ಅಂಗವಾಗಿ ಶನಿವಾರ ರಾತ್ರಿ ಪಟ್ಟಣದ ಸಂಸ್ಕೃತಿ ಮಂದಿರದ ಆವರಣದಲ್ಲಿ ಕನ್ನಡರಾಜ್ಯೋತ್ಸವ ಅಂಗವಾಗಿ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಸ್ತ್ರೀಯ ಭಾಷೆಯ ಗೌರವವನ್ನೂ ಪಡೆದಿರುವ ಕನ್ನಡ ಭಾಷೆಗೆ ತಾಂತ್ರಿಕವಾಗಿ ಮುಂದುವರೆದಿರುವ ಈ ಕಾಲಘಟ್ಟದಲ್ಲೂ ಕಂಪ್ಯೂಟರ್ ಬಳಕೆಗೆ ಕನ್ನಡ ತಂತ್ರಾಂಶವನ್ನು ಕಂಡು ಹಿಡಿಯಲು ಸಾಧ್ಯವಾಗದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದರು.

ಜಗತ್ತಿನ ಜ್ಞಾನಿಗಳ ಹೇಳಿಕೆಯಂತೆ ಒಂದು ದೇಶ ಸೂಪರ್ ಪವರ್ ಎನಿಸಿಕೊಳ್ಳುವುದು ಆ ನೆಲದ ಸಾಂಸ್ಕೃತಿಕ ಸಾಹಿತ್ಯಕ ಚಟುವಟಿಕೆ ಮತ್ತು ಶಾಂತಿ ನೆಮ್ಮದಿಯ ಬದುಕಿನಿಂದಾಗಿ. ಡಾ.ಮೋಹನ್ ಆಳ್ವಾ ನಿರ್ದೇಶನದಲ್ಲಿ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿಧ್ಯಾರ್ಥಿಗಳು ಇಂದಿಲ್ಲಿ ನೀಡಿರುವ ಸಾಂಸ್ಕೃತಿಕ ವೈಭವ ಮುದ ನೀಡಿರುವುದಲ್ಲದೇ ಮುಂದಿನ ಪೀಳಿಗೆಗೆ ಮಾದರಿಯಾಗುವಂತಿದೆ ಎಂದೂ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್ ಮತ್ತು ಸದಸ್ಯರು, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ನಾಬಳ ಶಚ್ಚೀಂದ್ರ ಹೆಗ್ಡೆ, ತಹಸೀಲ್ದಾರ್ ಎಸ್.ರಂಜಿತ್ ಮುಂತಾದವರು ಉಪಸ್ಥಿತರಿದ್ದರು.