ಸಮಾಜದ ಜನರನ್ನು ಸನ್ಮಾರ್ಗದತ್ತ ಕರೆದುಕೊಂಡು ಹೊಗುವುದರ ಜೊತೆಗೆ ಅವರಲ್ಲಿ ಧರ್ಮ ಸಂಸ್ಕಾರಗಳ ಬಗ್ಗೆ ಜ್ಞಾನ ನೀಡಿ ಧರ್ಮ ಸಂಸ್ಕಾರವನ್ನು ಜಾಗೃತಗೊಳಿಸಿ ಆತ್ಮ ಕಲ್ಯಾಣದ ಜೊತೆಗೆ ಸಮಾಜಕಲ್ಯಾಣ ಕಾರ್ಯ ಮಾಡುವದೇ ಮಠಾಧೀಶರ ಆದ್ಯ ಕರ್ತವ್ಯವಾಗಿದೆ ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗುತ್ತಲ: ಸಮಾಜದ ಜನರನ್ನು ಸನ್ಮಾರ್ಗದತ್ತ ಕರೆದುಕೊಂಡು ಹೊಗುವುದರ ಜೊತೆಗೆ ಅವರಲ್ಲಿ ಧರ್ಮ ಸಂಸ್ಕಾರಗಳ ಬಗ್ಗೆ ಜ್ಞಾನ ನೀಡಿ ಧರ್ಮ ಸಂಸ್ಕಾರವನ್ನು ಜಾಗೃತಗೊಳಿಸಿ ಆತ್ಮ ಕಲ್ಯಾಣದ ಜೊತೆಗೆ ಸಮಾಜಕಲ್ಯಾಣ ಕಾರ್ಯ ಮಾಡುವದೇ ಮಠಾಧೀಶರ ಆದ್ಯ ಕರ್ತವ್ಯವಾಗಿದೆ ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಗುಯಿಲಗುಂದಿ ಗ್ರಾಮದಲ್ಲಿ ಜರುಗಿದ ಪರಿವರ್ತನೆಯಡೆಗೆ ಧರ್ಮ ಜಾಗೃತಿ ಪ್ರವಚನ ಕಾರ್ಯಕ್ರಮದ ಮಂಗಲ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆರ್ಶೀವಚನ ನೀಡಿದರು.ರಾಜಕೀಯದಿಂದ ಮಠಾಧಿಪತಿಗಳು ದೂರ ಇರಬೇಕು. ಆಗ ಮಠ-ಮಾನ್ಯಗಳು ಸಮಾಜಮುಖಿಯಾಗಿರುತ್ತವೆ. ಆ ನಿಟ್ಟಿನಲ್ಲಿ ನೆಗಳೂರಿನ ಸಂಸ್ಥಾನ ಹಿರೇಮಠ ಕೇವಲ ಧರ್ಮಾಚರಣೆ, ಧರ್ಮ ಸಂಸ್ಕಾರಗಳನ್ನು ಸಮಾಜದಲ್ಲಿ ಪಸರಿಸುವದೇ ಮೂಲಧ್ಯೇಯವಾಗಿಸಿಕೊಂಡು ಸಾಗುತ್ತಿದೆ ಎಂದರು.ತುಂಬಾ ಕಷ್ಟದ ಸಂದರ್ಭದಲ್ಲಿ ಚಿಕ್ಕ ವಯೋಮಾನದಲ್ಲಿ ಶ್ರೀಮಠದ ಜವಾಬ್ದಾರಿಯನ್ನು ವಹಿಸಿಕೊಂಡು ಶ್ರದ್ಧೆ ಭಕ್ತಿ ಹಾಗೂ ಗುರುಗಳ ಆರ್ಶೀವಾದದಿಂದ ಸಮಾಜ ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು ಸೇವೆ ಸಲ್ಲಿಸುತ್ತಿದ್ದೇವೆ. ನಾವು ಪಟ್ಟಾಧಿಕಾರಿಗಳಾಗಿ 17 ವರ್ಷಗಳಾಗಿದ್ದು 17 ದಿನಗಳಂತೆ ಕಳೆದು ಹೋಗಿವೆ. ಇನ್ನೂ ಅನೇಕ ಯೋಜನೆಗಳು ಸಾಕಾರಗೊಳ್ಳಬೇಕಾಗಿರುವುದರಿಂದ ನಮಗೆ ತೃಪ್ತಿ ತಂದಿಲ್ಲ, ಸಮಾಜಕ್ಕೆ ಇನ್ನೂ ಹಲವಾರು ಕೊಡುಗೆಗಳನ್ನು ನೀಡಿ ಉತ್ತಮ ಕಾರ್ಯವನ್ನು ಮಾಡುವ ಉದ್ದೇಶದಿಂದ ಕಳೆದ 1 ತಿಂಗಳಿನಿಂದ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಶ್ರೀಮಠದ ನೂತನ ಮಹಾ ರಥದ ಲೋಕಾರ್ಪಣೆ ನಿಮಿತ್ತ ಪರಿವರ್ತನೆಯಡೆಗೆ ಧರ್ಮ ಜಾಗೃತಿ ಕಾರ್ಯಕ್ರಮ ಜರುಗಿಸಿ ಶ್ರೀಮಠದ ಮಹಾ ರಥೋತ್ಸವಕ್ಕೆ ಆಗಮಿಸುವಂತೆ ಭಕ್ತಾಧಿಗಳಿಗೆ ಆಮಂತ್ರಣವನ್ನು ಈ ಮೂಲಕ ನೀಡುತ್ತಿದ್ದೇವೆ ಎಂದರು.ಧರ್ಮ ಎಂದರೇ ಕೇವಲ ಹೇಳುವುದಕ್ಕೆ ಅಲ್ಲ, ಅದು ಆಚರಿಸುವದಕ್ಕೆ, ಪರೋಪಕಾರ ಹಾಗೂ ಸಮಾಜಕ್ಕೆ ಒಳಿತು ಮಾಡುವದೇ ನಿಜವಾದ ಧರ್ಮ, ನೆಗಳೂರಿನ ಶ್ರೀಮಠದ ಆಸ್ತಿಯೇ ಭಕ್ತರು, ಭಕ್ತರ ಭಕ್ತಿಯೇ ಶ್ರೀಮಠದ ಶಕ್ತಿಯಾಗಿದೆ. ಗುಯಿಲಗುಂದಿ ಗ್ರಾಮಕ್ಕೂ ನೆಗಳೂರಿನ ಶ್ರೀಮಠಕ್ಕೂ ಗುರು ಶಿಷ್ಯರ ಸಂಬಂಧವನ್ನು ಹೊಂದಿದೆ. ಶ್ರೀಮಠದ ಗುರು ಪರಂಪರೆಯ ಶಿವಾಚಾರ್ಯರೊಂದಿಗೆ ಗ್ರಾಮದ ಜನತೆ ಶ್ರದ್ಧೆ, ಭಕ್ತಿಯನ್ನು ಹೊಂದಿದ್ದು ಗ್ರಾಮದ ಕಾರ್ಯಗಳಿಗೆ ಶ್ರೀಮಠದ ಮಾರ್ಗದರ್ಶನದ ಮೂಲಕ ನೆರವೇರಿಸುತ್ತಾ ಬಂದಿರುವುದು ನೆಗಳೂರ ಶ್ರೀಮಠದ ಮೇಲಿರುವ ಅಭಿಮಾನವನ್ನು ತೋರುತ್ತದೆ ಎಂದರು.ಜಲ್ಲಾಪುರದ ಡಾ. ಗುರುಮಹಾಂತಯ್ಯ ಶಾಸ್ತ್ರಿ ಆರಾಧ್ಯಮಠ ಅವರಿಂದ ಪ್ರವಚನ ಹಾಗೂ ಸಂಗೀತ ಜರುಗಿತು. ಷಣ್ಮುಖಪ್ಪ ಕಮ್ಮಾರ ತಬಲಾಸಾಥ್ ನೀಡಿದರು. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಇನ್ನೂ ಕಾರ್ಯಕ್ರಮದಲ್ಲಿ ನೆಗಳೂರ, ಬೆಳವಿಗಿ, ಮೇವುಂಡಿ, ನೀರಲಗಿ ಗ್ರಾಮಗಳ ಭಕ್ತಾಧಿಗಳು ಭಾಗಿಯಾಗಿದ್ದರು.