ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮೇರು ಮೌಲ್ಯಗಳ ವಿಶಿಷ್ಟ ಘನತೆ ಹೊಂದಿರುವ ಭಾರತದ ಧಾರ್ಮಿಕ ಮತ್ತು ಚಾರಿತ್ರಿಕ ಉತ್ಕೃಷ್ಟ ಪರಂಪರೆಯು ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ. ಹಾಗಾಗಿ ರಾಷ್ಟ್ರದ ಸಂಸ್ಕೃತಿ ಸಂವರ್ಧನೆ ಧರ್ಮಪೀಠಗಳ ಪರಮ ಕರ್ತವ್ಯವಾಗಿದೆ ಎಂದು ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯರು ಹೇಳಿದರು.ತಮಿಳುನಾಡಿನ ರಾಮನಾಡು ಜಿಲ್ಲೆಯ ರಾಮೇಶ್ವರ ಜ್ಯೋತಿರ್ಲಿಂಗ ಕ್ಷೇತ್ರದ ಬಸ್ ನಿಲ್ದಾಣದ ಹತ್ತಿರ ಕಾಶಿ ಪೀಠದ ಶಾಖಾ ಜಂಗಮವಾಡಿಮಠದ ನಿರ್ಮಾಣಕ್ಕಾಗಿ ಭಾನುವಾರ ನಡೆದ ಭೂಮಿಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಭಾರತದ ಅನೇಕ ಸಂತ-ಮಹಾಂತ ತಪಸ್ವಿಗಳು ದೇಶದ ಉನ್ನತ ಆಧ್ಯಾತ್ಮಿಕ ತನ್ಮಯತೆಯನ್ನು ಉಳಿಸಬೇಕೆಂಬ ಉದ್ದೇಶದಿಂದ ನದಿ, ಬೆಟ್ಟ, ಸರೋವರ, ಸಮುದ್ರಗಳ ತಟಗಳಲ್ಲಿ ಧರ್ಮಕ್ಷೇತ್ರಗಳ ಮತ್ತು ಮಠ-ಪೀಠಗಳ ಸ್ಥಾಪನೆಗೆ ಮುಂದಾಗಿದ್ದು, ಪ್ರಸ್ತುತ ಅವುಗಳನ್ನು ಸಂವರ್ಧನೆಗೊಳಿಸಿ ಮುಂದಿನ ಜನಾಂಗಕ್ಕೆ ಉಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತದ ದಕ್ಷಿಣದ ತುದಿಯಲ್ಲಿ ಕಾಶಿ ಜಗದ್ಗುರು ಪೀಠದ ಶಾಖಾ ಜಂಗಮವಾಡಿಮಠದ ನಿರ್ಮಾಣ ಕಾರ್ಯಕ್ಕೆ ಈಗ ಚಾಲನೆ ಕೊಡಲಾಗಿದೆ ಎಂದರು.ಹೊಸ ಕಟ್ಟಡದ ಭೂಮಿಪೂಜೆ ನೆರವೇರಿಸಿದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, ದಕ್ಷಿಣಧಾಮ ಎಂದೇ ಪ್ರಸಿದ್ಧಿಯಾಗಿರುವ ರಾಮೇಶ್ವರ ಜ್ಯೋತಿರ್ಲಿಂಗ ಕ್ಷೇತ್ರ ರಾಮಾಯಣದಷ್ಟೇ ಪ್ರಾಚೀನವಾದುದು. ಇಂತಹ ಪವಿತ್ರ ಕ್ಷೇತ್ರದಲ್ಲಿ ಭಕ್ತ ಸಮೂಹದ ಅನುಕೂಲಕ್ಕಾಗಿ ಕಾಶಿ ಪೀಠದ ಜಗದ್ಗುರುಗಳು ತಮ್ಮ ಪೀಠದ ಶಾಖೆ ಆರಂಭಿಸುತ್ತಿರುವುದು ಅತ್ಯಂತ ಸೂಕ್ತವಾಗಿದ್ದು, ತಾವು ಅತ್ಯಂತ ಭಕ್ತಿಪೂರ್ಣವಾಗಿ ಭೂಮಿಪೂಜೆ ನೆರವೇರಿಸಿರುವುದಾಗಿ ಹೇಳಿದರು.
ಶ್ರೀಶೈಲ ಪೀಠದ ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿದರು. ಕಾಶಿ ಜ್ಞಾನ ಪೀಠದ ಕಿರಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು, ಸೊಲ್ಲಾಪುರ ಸಂಸದ ಡಾ. ಜಯಸಿದ್ಧೇಶ್ವರ ಶಿವಾಚಾರ್ಯರು, ಬೆಂಗಳೂರು ವಿಭೂತಿಪುರಮಠದ ಡಾ. ಮಹಾಂತಲಿಂಗ ಶಿವಾಚಾರ್ಯರು, ಶಿವಗಂಗಾಕ್ಷೇತ್ರದ ಡಾ. ಮಲಯ ಶಾಂತಮುನಿ ಶಿವಾಚಾರ್ಯರು, ಕಡಗಂಚಿ, ಜೈನಾಪುರ, ಅಕ್ಕಿಆಲೂರ, ಕೊಣ್ಣೂರು, ಚೆನ್ನಗಿರಿ, ಗುಳೇದಗುಡ್ಡ, ಔಸಾದ ಗುರುಮಹಾರಾಜರು ಸೇರಿದಂತೆ ವಿವಿಧ ರಾಜ್ಯಗಳ ಅನೇಕ ಮಠಾಧೀಶರು ಪಾಲ್ಗೊಂಡಿದ್ದರು.ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿಮಠ, ಬಾಗಲಕೋಟೆಯ ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ, ಸೊಲ್ಲಾಪುರ ಮಾಜಿ ಶಾಸಕ ವಿಶ್ವನಾಥ ಚಾಕೋಟೆ, ಗದಗದ ಶಿವಯೋಗಿ ತೆಗ್ಗಿನಮಠ, ರಾಮೇಶ್ವರ ಕ್ಷೇತ್ರದ ವಿವಿಧ ರಾಜಕೀಯ ಮುಖಂಡರು ಹಾಗೂ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಭಕ್ತರು ಪಾಲ್ಗೊಂಡಿದ್ದರು.