ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಆಧುನಿಕ ತಂತ್ರಜ್ಞಾನ ಮತ್ತು ವಿದೇಶಿ ಸಂಸ್ಕೃತಿಯ ಪ್ರಭಾವದಿಂದ ದೇಸಿಯತೆ ಮಾಯವಾಗುತ್ತಿದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರವು ರೂಪುಗೊಳ್ಳಲು ಅವರಲ್ಲಿ ಜನಪದದ ನೆರಳು ಬಿಳಬೇಕು. ಜನಪದವನ್ನು ಉಳಿಸುವುದು ತಾಯಂದಿರ ಜವಾಬ್ದಾರಿಯಾಗಿದೆ ಎಂದು ಡಾ.ಎಸ್.ಜಿ.ಸಜ್ಜನ ಹೇಳಿದರು.ಸಮೀಪದ ಹಿಡಕಲ್ ಡ್ಯಾಂನ ಕೆ.ಆರ್.ಇ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂಕೇಶ್ವರದ ಅಕ್ಕಮಹಾದೇವಿ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಗಳು ಸಂಯುಕ್ತವಾಗಿ ಸಂಘಟಿಸಿದ್ದ ಘಟಪ್ರಭೆ ಜಾನಪದ ಕಲಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿರುವ ಜನಪದ ಕಲೆ ಉಳಿಸಿ, ಬೆಳೆಸುವ ಕೆಲಸವನ್ನು ಸಾಂಸ್ಕೃತಿಕ ಸಂಘಟನೆಗಳು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ನೈಜ ಕಲಾವಿದರನ್ನು ಗುರುತಿಸುವ ಕೆಲಸ ಇಂದಿನ ತುರ್ತ ಅಗತ್ಯವಾಗಿದೆ ಎಂದು ತಿಳಿಸಿದರು.ಹಿರಿಯ ಸಾಹಿತಿ ಎಸ್.ಎಂ.ಶಿರೂರು ಮಾತನಾಡಿ, ಮನುಷ್ಯ ಬದುಕಿನ ಪ್ರತಿ ಹಂತದಲ್ಲಿಯೂ ಜನಪದದ ಛಾಪು ಇದ್ದು, ಅದರ ಸೊಗಡನ್ನು ಪ್ರತಿಯೊಬ್ಬರು ಆಸ್ವಾದಿಸಬೇಕು ಎಂದರು.ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತಿನ ಹುಕ್ಕೇರಿ ತಾಲೂಕು ಘಟಕದ ಅಧ್ಯಕ್ಷ ಡಾ.ಪ್ರಕಾಶ ಹೊಸಮನಿ ಮಾತನಾಡಿ, ಇಂದಿನ ಯುವ ಪೀಳಿಗೆ ಮೊಬೈಲ್ ದಾಸರಾಗದೇ ಗ್ರಾಮೀಣ ಭಾಗದಲ್ಲಿರುವ ಜನಪದ ಮೂಲ ತಿರಳನ್ನು ತಿಳಿದುಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.ಕೆ.ಆರ್.ಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಖಡಕಭಾವಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಮೂಲವಾಗಿರುವ ಜಾನಪದ ಕಲೆ ಇಂದು ನಶಿಸಿ ಹೋಗುತ್ತಿರುವುದು ವಿಷಾದದ ಸಂಗತಿಯಾಗಿದ್ದು, ಅದನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ಎಲ್ಲರೂ ಮಾಡಬೇಕಾಗಿದೆ ಎಂದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿವಾನಂದ ಬಡಿಗೇರ ಮತ್ತು ತಂಡದಿಂದ ಸುಗಮ ಸಂಗೀತ, ಸೃಷ್ಟಿ ಬಂಡಿವಡ್ಡರ ತಂಡದಿಂದ ಜಾನಪದ ನೃತ್ಯ, ಕು.ಶಾಂತಲಾ ಉದೋಶಿ ಅವರಿಂದ ಭರತ ನಾಟ್ಯ, ಪರುಶರಾಮ ಮಾದರ ತಂಡದಿಂದ ಜಾನಪದ ಗೀತೆ, ಸತ್ಯವ್ವ ಹೊಸಮನಿ ತಂಡದಿಂದ ಸೋಬಾನ ಪದಗಳು, ಸುಗಂಧಾ ಮಾದರ ತಂಡದಿಂದ ಭಕ್ತಿ ಗೀತೆ, ಸುಶೇವ್ವ ಮಾದರ ತಂಡದಿಂದ ಜಾನಪದ ಹಾಡು, ಕಲ್ಲಪ್ಪ ಸೊಡ್ಡನ್ನವರ ತಂಡದಿಂದ ಶಿವಭಜನೆ, ಗೋಪಾಲ ಪಾಟೀಲ ಸಂಗಡಿಗರಿಂದ ರಾಧಾಕೃಷ್ಣ ಸಣ್ಣಾಟ, ಅಶೋಕ ಪಾಟೀಲ ಸಂಗ್ಯಾಬಾಳ್ಯಾ ಸಣ್ಣಾಟ, ಅಲ್ಲಪ್ಪ ಚೌಗಲಾ ತಂಡದಿಂದ ಹಂತಿ ಪದ, ದ್ರಾಕ್ಷಾಯಿಣಿ ಗುಗ್ಗರಿ ತಂಡದಿಂದ ತತ್ವಪದ, ಮೀನಾಕ್ಷಿ ನಾಯಿಕ ಅವರಿಂದ ನಾಡು-ನುಡಿ, ಶೋಭಾ ಸೊಡನ್ನವರ ಅವರಿಂದ ದೇಶ ಭಕ್ತಿ ಗೀತೆ ಕಾರ್ಯಕ್ರಮಗಳು ನಡೆದು ಜನರ ಮನ ರಂಜಿಸಿದವು.ಸಮಾರಂಭದಲ್ಲಿ ಹಣುಮಂತರಾವ ನಾಗಪ್ಪಗೋಳ, ಬಿ.ಎಸ್.ಮಾನೆ, ವಿಜಯಕರ್ನಾಟಕ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಜಯಶ್ರೀ ಮತ್ತಿಕೊಪ್ಪ, ಬಸವರಾಜ ಗುಗ್ಗರಿ ಮುಂತಾದವರು ಉಪಸ್ಥಿತರಿದ್ದರು. ಪ್ರೊ.ಎ.ವೈ.ಸೋನ್ಯಾಗೋಳ ಸ್ವಾಗತಿಸಿದರು. ಅಕ್ಕಮಹಾದೇವಿ ಕಲಾ, ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಸುಜಾತಾ ಮಂಜರಗಿ ವಂದಿಸಿದರು. ಕಸ್ತೂರಿ ಚೌಗಲಾ ಕಾರ್ಯಕ್ರಮ ನಿರ್ವಹಿಸಿದರು.