ಪ್ರತಿಭಾನ್ವಿತರನ್ನು ಕ್ರೀಡಾ ಜಗತ್ತಿಗೆ ಪರಿಚಯಿಸುವ ಜವಾಬ್ದಾರಿ ಸರ್ಕಾರದ್ದು

| Published : Oct 11 2023, 12:45 AM IST

ಪ್ರತಿಭಾನ್ವಿತರನ್ನು ಕ್ರೀಡಾ ಜಗತ್ತಿಗೆ ಪರಿಚಯಿಸುವ ಜವಾಬ್ದಾರಿ ಸರ್ಕಾರದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯೋಗದ ಭರವಸೆ ಸಿಗದ ಬಹಳಷ್ಟು ಕಬಡ್ಡಿ ಕ್ರೀಡಾಪಟುಗಳು ಭವಿಷ್ಯ ರೂಪಿಸಿಕೊಳ್ಳದೇ ನೇಪಥ್ಯಕ್ಕೆ ಸರಿದಿದ್ದಾರೆ. ಮೂಲ ಸೌಕರ್ಯದ ಜೊತೆಗೆ ಪ್ರತಿಭಾನ್ವಿತರನ್ನು ಕ್ರೀಡಾ ಜಗತ್ತಿಗೆ ಪರಿಚಯಿಸುವ ಗುರುತರ ಜವಾಬ್ದಾರಿ ಇದೀಗ ಸರ್ಕಾರದ ಮೇಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಉದ್ಯೋಗದ ಭರವಸೆ ಸಿಗದ ಬಹಳಷ್ಟು ಕಬಡ್ಡಿ ಕ್ರೀಡಾಪಟುಗಳು ಭವಿಷ್ಯ ರೂಪಿಸಿಕೊಳ್ಳದೇ ನೇಪಥ್ಯಕ್ಕೆ ಸರಿದಿದ್ದಾರೆ. ಮೂಲ ಸೌಕರ್ಯದ ಜೊತೆಗೆ ಪ್ರತಿಭಾನ್ವಿತರನ್ನು ಕ್ರೀಡಾ ಜಗತ್ತಿಗೆ ಪರಿಚಯಿಸುವ ಗುರುತರ ಜವಾಬ್ದಾರಿ ಇದೀಗ ಸರ್ಕಾರದ ಮೇಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಪಟ್ಟಣದ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ತಾಲೂಕಾಡಳಿತ, ತಾಪಂ ಹಾಗೂ ಹಾವೇರಿ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಇವುಗಳ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ವಿಭಾಗಮಟ್ಟದ 14 ಮತ್ತು 17 ವರ್ಷದೊಳಗಿನ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಕ್ರೀಡಾ ಪ್ರತಿಭೆ ಅವಕಾಶ ವಂಚಿತರಾದರೆ ದೇಶದ ಕ್ರೀಡಾ ಜಗತ್ತಿಗೆ ಅದು ತುಂಬಲಾರದ ನಷ್ಟ. ಗ್ರಾಮೀಣ ಪ್ರದೇಶದಲ್ಲಿ ಪ್ರಸಿದ್ಧಿಯಾಗಿದ್ದ ಕಬಡ್ಡಿ ಕ್ರೀಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಮನ್ನಣೆ ಪಡೆಯುವ ಮೂಲಕ ಕ್ರೀಡಾಸಕ್ತಿ ಹೆಚ್ಚಿಸಿದೆ. ಶಾಲಾ-ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಕ್ರೀಡೆಗೆ ಹೆಚ್ಚು ಮನ್ನಣೆ ನೀಡಬೇಕಾಗಿದೆ ಎಂದರು.

ಕ್ರೀಡೆ ಜೊತೆ ಶಿಕ್ಷಣವೂ ಅವಶ್ಯಕತೆ ಇರುವುದರಿಂದ ಕ್ರೀಡಾಪಟುಗಳಿಗೆ ಕಬಡ್ಡಿ ತರಬೇತಿ ಸೇರಿದಂತೆ ಶಿಕ್ಷಣಕ್ಕೆ ಅವಶ್ಯವಿರುವ ಸಕಲ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಸದಾ ಸಿದ್ಧವಿರಬೇಕಾಗಿದೆ. ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿರುವ ಕಬಡ್ಡಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿದ್ದು ಬರಿಗಾಲಲ್ಲಿ ಮಣ್ಣಿನ ಅಂಕಣದಲ್ಲಿ ಆಡುತ್ತಿದ್ದ ಕ್ರೀಡಾ ಪಟುಗಳು ಈಗ ಶೂ ಧರಿಸಿ ಮ್ಯಾಟ್‌ಗಳ ಮೇಲೆ ಆಟವಾಡಲಾರಂಭಿಸಿದ್ದಾರೆ. ಕ್ರೀಡಾ ಜಗತ್ತಿನಲ್ಲಿ ಇದೊಂದು ಕ್ರಾಂತಿಕಾರಿ ಬದಲಾವಣೆಯಾಗಿದೆ. ಅಂತಹ ವ್ಯವಸ್ಥೆಯನ್ನು ಇಲ್ಲಿಯೂ ಕಲ್ಪಿಸಲಾಗಿದೆ ಎಂದರು.

ಕರ್ನಾಟಕ ರಾಜ್ಯ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಎಂ.ಹನುಮಂತೇ ಗೌಡ ಮಾತನಾಡಿ, ಎಲ್ಲ ರೀತಿಯಲ್ಲಿ ಬಲಿಷ್ಟವಾದ ಸಮಿತಿಯೊಂದನ್ನು ರಚಿಸಿಕೊಂಡು ಬಡ ಕಬಡ್ಡಿ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವ ಮೂಲಕ ಬದುಕಿನ ಮಾರ್ಗ ತೋರಿಸುವ ನಿರ್ದಿಷ್ಟ ಗುರಿ ಕಬಡ್ಡಿ ಸಂಸ್ಥೆಗಳಿಗೆ ಇದೆ. ಈ ನಿಟ್ಟಿನಲ್ಲಿ ಯಶಸ್ಸನ್ನು ಕಂಡಿರುವ ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಸಂಸ್ಥೆಯು ಕಳೆದ 22 ವರ್ಷದಿಂದ ಹಾವೇರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಜಿಲ್ಲೆಯ ನೂರಾರು ಕ್ರೀಡಾಪಟುಗಳ ಏಳಿಗೆಗೆ ಸಹಕರಿಸಿದ್ದು ಕಬಡ್ಡಿ ಕ್ರೀಡೆಯನ್ನು ಉತ್ತುಂಗಕ್ಕೇರಿಸಿದೆ ಎಂದರು.

ಡಿಡಿಪಿಐ ಗಿರೀಶ್ ಪದಕಿ ಮಾತನಾಡಿ, ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕನ ಜೊತೆ ನಿತ್ಯವೂ ರನ್ನಿಂಗ್ ಮಾಡುತ್ತಿದ್ದ ಪಶುಪತಿ ಹಾಳದ ಶೋಭಾ ಜಾವೂರ (ಜೆ.ಜೆ. ಶೋಭಾ) ಒಲಿಂಪಿಕ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ (ಹೆಪಾಥ್ಲಾನ್) ಕ್ರೀಡಾಪಟುವಾಗಿ ದೇಶದ ಕೀರ್ತಿ ಹೆಚ್ಚಿಸಿದ್ದಲ್ಲದೇ ಅತ್ಯುನ್ನತ ಅರ್ಜುನ ಪ್ರಶಸ್ತಿ ಭಾಜನಳಾಗಿದ್ದಾಳೆ. ಹೀಗಾಗಿ ದೈಹಿಕ ಶಿಕ್ಷಕರು ಆರಂಭದಲ್ಲಿ ಕ್ರೀಡಾಪಟುಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಸಲಹೆ ನೀಡಿದರು. ಇದಕ್ಕೂ ಮುನ್ನ ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ಶಿವಾನಂದ ಮಲ್ಲನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಷ್ಟ್ರೀಯ ಕ್ರೀಡಾಪಟು ಮೌನೇಶ ಬಡಿಗೇರ ಕ್ರೀಡಾಜ್ಯೋತಿ ಬರಮಾಡಿಕೊಂಡರು.

ಸಂಶೋಧನಾ ಗ್ರಂಥ ಬಿಡುಗಡೆ:

ಬ್ಯಾಡಗಿ ಕಬಡ್ಡಿ ಇತಿಹಾಸ ಕುರಿತು ಶಿಕ್ಷಕ ಜಮೀರ್ ರಿತ್ತಿ ರಚಿಸಿದ ‘ಕಬಡ್ಡಿ ಮಿಂಚಿ ಮರೆಯಾದವರು’.. ಸಂಶೋಧನಾ ಗ್ರಂಥವನ್ನು ಮುಖಂಡ ಎಸ್.ಆರ್. ಪಾಟೀಲ ವೇದಿಕೆಯಲ್ಲಿ ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ಕಬಡ್ಡಿ ಅಸೋಸಿಯೇಶನ್ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಅಂಗಡಿ, ಮಲ್ಲಿಕಾರ್ಜುನ ಬಳ್ಳಾರಿ, ಕೋಶಾಧ್ಯಕ್ಷ ಗಂಗಣ್ಣ ಎಲಿ, ಚೇರಮನ್ ಸಿ.ಜಿ. ಚಕ್ರಸಾಲಿ, ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಆನಂದಸ್ವಾಮಿ ಗಡ್ಡದೇವರಮಠ, ತಹಸೀಲ್ದಾರ ಎಸ್.ಎ. ಪ್ರಸಾದ, ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ, ಪುರಸಭೆ ಸ್ಥಾಯಿ ಸಮಿತಿ ಚೇರಮನ್ ಬಾಲಚಂದ್ರ ಪಾಟೀಲ, ಮುಖ್ಯಾಧಿಕಾರಿ ವಿನಯಕುಮಾರ ಹಾಗೂ ಸರ್ವ ಸದಸ್ಯರು ಸಿಪಿಐ ಮಹಾಂತೇಶ ಲಂಬಿ, ಪಿಎಸ್‌ಐ ಮಂಜುನಾಥ ಕುಪ್ಪೇಲೂರ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಸ್ವಾಗತಿಸಿದರು. ಶಿಕ್ಷಕರಾದ ಜೆ.ಎಚ್. ಛತ್ರದ, ಎಂ.ಎಫ್. ಕರಿಯಣ್ಣನವರ, ಮಾಲತೇಶ ಚಳಗೇರಿ ನಿರೂಪಿಸಿ, ಮಲ್ಲಪ್ಪ ಕರೆಣ್ಣನವರ ವಂದಿಸಿದರು.

ಆಕರ್ಷಕ ಮೆರವಣಿಗೆ:

ಇದಕ್ಕೂ ಮುನ್ನ ಅತಿಥಿಗಳು ಮತ್ತು ವಿವಿಧ ಜಿಲ್ಲೆಗಳ 36 ಕ್ರೀಡಾಪಟುಗಳನ್ನು ನೆಹರು ನಗರದ ಶ್ರೀ ದಾನಮ್ಮದೇವಿ ದೇವಸ್ಥಾನದಿಂದ ಮುಖ್ಯರಸ್ತೆ ಮೂಲಕ ವಿವಿಧ ವಾದ್ಯಮೇಳ ಹಾಗೂ ನೃತ್ಯಕಲಾ ತಂಡಗಳೊಂದಿಗೆ ಎಸ್‌ಜೆಜೆಎಂ ತಾಲೂಕಾ ಕ್ರೀಡಾಂಗಣದಲ್ಲಿನ ಕಬಡ್ಡಿಯ ಭವ್ಯ ವೇದಿಕೆಗೆ ಕರೆ ತರಲಾಯಿತು. ಕ್ರೀಡಾಧಿಕಾರಿ ಎಚ್.ಬಿ. ದಾಸರ ಒಲಿಂಪಿಕ್ ಧ್ವಜಾರೋಹಣ ನಡೆಸಿಕೊಟ್ಟರು.