ಸಾರಾಂಶ
ಲಕ್ಷ್ಮೇಶ್ವರ:ಮಗುವಿಗೆ ಗುರುವಿನ ಆಶೀರ್ವಾದ ಹಾಗೂ ತಂದೆ ತಾಯಿಗಳ ಸಂಸ್ಕಾರ ಅಗತ್ಯವಾಗಿ ಬೇಕಾಗಿದೆ. ಗುರುಗಳು ನೀಡುವ ಮಾರ್ಗದರ್ಶನ ಹಾಗೂ ಅಕ್ಷರ ಜ್ಞಾನವು ಅಗತ್ಯವಾಗಿದೆ ಎಂದು ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರ ಸ್ವಾಮಿಗಳು ಹೇಳಿದರು.
ಸಮೀಪದ ಹೂವಿನ ಶಿಗ್ಲಿಯ ವಿರಕ್ತಮಠದಲ್ಲಿ ಆರಂಭವಾಗಿರುವ ಶಿರಹಟ್ಟಿಯ ಫಕೀರಸ್ವಾಮಿಗಳ ಜೀವನ ಚರಿತ್ರೆಯ ಪುರಾಣದಲ್ಲಿ ಬಾಲ ಫಕೀರಸ್ವಾಮಿಗಳ ತೊಟ್ಟಿಲು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ಮಕ್ಕಳಿಗೆ ಬಾಲ್ಯದಲ್ಲಿ ನೀಡುವ ಸಂಸ್ಕಾರಗಳು ಅವರ ಜೀವನದ ಉದ್ದಕ್ಕೂ ಹೆಚ್ಚಿನ ಮಹತ್ವ ಹಾಗೂ ಮಾರ್ಗದರ್ಶನ ಮಾಡುತ್ತವೆ.
ಅದಕ್ಕಾಗಿ ಬಾಲ್ಯದಲ್ಲಿ ಮಗುವಿಗೆ ಉತ್ತಮ ಸಂಸ್ಕಾರ ಹಾಗೂ ಪರಿಸರ ಕಲ್ಪಿಸುವ ಮೂಲಕ ಅವರ ಬಾಲ್ಯಕ್ಕೆ ದಾರಿದೀಪವಾಗಿ ಪಾಲಕರು ನಿಲ್ಲಬೇಕು. ಬಾಲ್ಯದಲ್ಲಿ ಮಕ್ಕಳಿಗೆ ನಮ್ಮ ನಾಡಿನ ಉತ್ತಮ ಚರಿತ್ರೆ ಹಾಗೂ ನಮ್ಮ ಆಚಾರ ವಿಚಾರಗಳ ಹೇಳಿಕೊಡುವ ಮೂಲಕ ಅವರಲ್ಲಿ ಉತ್ತಮ ಗುಣಗಳು ಬೆಳೆಯುವಂತೆ ಮಾಡುವ ಕಾರ್ಯ ಅಗತ್ಯವಾಗಿದೆ ಎಂದು ಹೇಳಿದ ಅವರು, ಫಕೀರ ಸ್ವಾಮಿಗಳು ಬಾಲ್ಯದಲ್ಲಿ ಹೆಚ್ಚು ಜಾಣರಾಗಿದ್ದರು.
ಅವರ ಚರಿತ್ರೆ ಪರಸ್ಪರ ಬಾಂಧವ್ಯ ಬೆಸೆಯುವ ಕಾರ್ಯಕ್ಕೆ ಮುನ್ನುಡಿಯಾಗಿದೆ ಎಂದು ಹೇಳಿದರು. ಈ ವೇಳೆ ಪುಟ್ಟರಾಜ ಚುರ್ಚಿಹಾಳ ಫಕ್ಕೀರಸ್ವಾಮಿಗಳ ಪುರಾಣ ಪ್ರವಚನ ನಡೆಸಿಕೊಟ್ಟರು. ಶಿವಲಿಂಗಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಜೋಗುಳ ಹಾಡುವ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ ಮಾಡಿದರು. ಈ ವೇಳೆ ನಿಂಗಪ್ಪ ಹೆಬಸೂರ, ದೇವಪ್ಪ ಸಣ್ಣಬಾಳಪ್ಪನವರ, ನಿಂಗಪ್ಪ ರಾಯಮ್ಮನವರ ಹಾಗೂ ಗವಿ ಸಿದ್ದೇಶ್ವರ ಸ್ವಾಮಿಗಳು ಇದ್ದರು.