ಹಿಂದುಸ್ತಾನಿ ಸಂಗೀತ ಭಾರತೀಯ ಕಲಾಪರಂಪರೆಯ ಅಮೂಲ್ಯ ಕೊಡುಗೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಹುಬ್ಬಳ್ಳಿ:

ಹಿಂದುಸ್ತಾನಿ ಸಂಗೀತ ಭಾರತೀಯ ಕಲಾಪರಂಪರೆಯ ಅಮೂಲ್ಯ ಕೊಡುಗೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸ್ವರ್ಣ ಸಮೂಹ ಸಂಸ್ಥೆ ವ್ಯವಸ್ಥಾಪದ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.

ಅವರು ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶನಿವಾರ ಗಾನಗಂಧರ್ವ ಪಂ. ಅರ್ಜುನಸಾ ನಾಕೋಡ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕ್ಷಮತಾ ಸೇವಾ ಸಂಸ್ಥೆ ಹಾಗೂ ಸ್ವರ್ಣ ಗ್ರೂಪ್ ಆಫ್ ಕಂಪನೀಸ್ ಆಶ್ರಯದಲ್ಲಿ ಆಯೋಜಿಸಿದ್ದ ಪಂ. ಅರ್ಜುನಸಾ ನಾಕೋಡ ಸಂಗೀತ ಮಹೋತ್ಸವದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಸಂಗೀತ ಎಲ್ಲ ವಯೋಮಾನದವರಿಗೂ ಆನಂದ ನೀಡುವ ಶಕ್ತಿಯುತ ಮಾಧ್ಯಮವಾಗಿದೆ. ಇಂದಿನ ದಿನಗಳಲ್ಲಿ ಹಿಂದುಸ್ತಾನಿ ಸಂಗೀತದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜತೆಗೆ ಅದರ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಕ್ಷಮತಾ ಸೇವಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ ಮಾತನಾಡಿ, ಹುಬ್ಬಳ್ಳಿ-ಧಾರವಾಡ ಸಂಗೀತ ಕ್ಷೇತ್ರದ ಅನೇಕ ದಿಗ್ಗಜರನ್ನು ನಾಡಿಗೆ ನೀಡಿದ ನೆಲವಾಗಿದೆ. ಹಿಂದುಸ್ತಾನಿ ಸಂಗೀತ ನಮ್ಮ ಭಾರತೀಯ ಕಲೆಯ ಹೆಮ್ಮೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಿಂದಲೇ ಆಗಬೇಕು. ಸ್ವಾತಂತ್ರ್ಯಾನಂತರ ಸಂಗೀತ ಕ್ಷೇತ್ರಕ್ಕೆ ನಿರೀಕ್ಷಿತ ಮಟ್ಟದಲ್ಲಿ ರಾಜಾಶ್ರಯ ದೊರೆತಿಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದ ನಡುವೆ ನಮ್ಮ ಸಾಂಪ್ರದಾಯಿಕ ಸಂಗೀತ ಕಲೆ ಕಳೆಗುಂದದಂತೆ ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಪಂ. ಅರ್ಜುನಸಾ ನಾಕೋಡ ಅವರ ಹೆಸರಿನಲ್ಲಿ ಕುಟುಂಬಸ್ಥರು ಸಂಗೀತ ಮಹೋತ್ಸವ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ವಿಪ ಸದಸ್ಯ ಲಿಂಗರಾಜ ಪಾಟೀಲ, ಕೆಎಲ್‌ಇ ಸಂಸ್ಥೆ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಮುಖಂಡರಾದ ರಂಗಾ ಬದ್ದಿ, ಸತೀಶ ಮೆಹರವಾಡೆ, ಸಂತೋಷ ಶೆಟ್ಟಿ, ಅಮಿತ್ ಮಹಾಜನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಮೀರಾ ಮೆಹರವಾಡೆ, ಧೀರನ್ ಠಕ್ಕರ್, ಸಾಯಿ ನಾಕೋಡ, ಪಂ. ಬಾಲಚಂದ್ರ ನಾಕೋಡ ಸೇರಿದಂತೆ ಹಲವರಿದ್ದರು.