ನಕಲಿ ಕಾರ್ಮಿಕರ ಕಾರ್ಡ್ ಮಾಡಿಸಿಕೊಳ್ಳುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಎಚ್ಚರಿಸಿದರು.
ಸಾಗರ: ನಕಲಿ ಕಾರ್ಮಿಕರ ಕಾರ್ಡ್ ಮಾಡಿಸಿಕೊಳ್ಳುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಎಚ್ಚರಿಸಿದರು.
ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಭಾನುವಾರ ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪದಾಧಿಕಾರಿಗಳ ಪದಗ್ರಹಣ, ಟೀಶರ್ಟ್ ವಿತರಣೆ, ಹಿರಿಯ ಕಾರ್ಮಿಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೈಜ ಕಾರ್ಮಿಕರಿಗೆ ವಂಚನೆಯಾಗುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.ಸಂತೋಷ್ ಲಾಡ್ ಕಾರ್ಮಿಕ ಸಚಿವರಾದ ಮೇಲೆ ಕಾರ್ಮಿಕ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕಾರ್ಮಿಕರ ಪರವಾದ ಅನೇಕ ಯೋಜನೆಗಳು ಜಾರಿಗೆ ತರಲಾಗಿದೆ. ಸಾಗರ ತಾಲೂಕು ಒಂದರಲ್ಲಿಯೇ ಸುಮಾರು ೧೦ ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಇದ್ದು, ನೀವು ಸಂಘಟಿತರಾಗಿ ನಿಮ್ಮ ಹಕ್ಕುಗಳನ್ನು ಸಂಘಟನೆ ಮೂಲಕ ಪಡೆಯುವಂತಾಗಬೇಕು. ಸರ್ಕಾರ ಕಾರ್ಮಿಕರಿಗೆ ನೀಡುತ್ತಿದ್ದ ವಿಮಾ ಪರಿಹಾರ ಮೊತ್ತವನ್ನು ಐದರಿಂದ ಎಂಟು ಲಕ್ಷ ರು.ಗೆ ಹೆಚ್ಚಿಸಿದೆ. ಪ್ರತಿಯೊಬ್ಬ ಕಾರ್ಮಿಕರು ವಿಮೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸಂಘದ ಅಧ್ಯಕ್ಷ ರಾಮಚಂದ್ರ ಮೇಸ್ತ್ರೀ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಗಣಪತಿ ಮಂಡಗಳಲೆ, ಲಲಿತಮ್ಮ, ಸೈಯದ್ ಜಾಕೀರ್, ರಮೇಶ್ ಕೆಳದಿಪುರ, ರಾಮಪ್ಪ, ಮೈಲಪ್ಪ, ಕೃಷ್ಣಮೂರ್ತಿ, ಹೊಸಂತೆ ಗಣಪತಿ, ಕೆರೆಯಪ್ಪ ಇನ್ನಿತರರು ಹಾಜರಿದ್ದರು. ಅಣ್ಣಪ್ಪ ಮೇಸ್ತ್ರೀ ಸ್ವಾಗತಿಸಿದರು. ಸತೀಶ್ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್ ನಿರೂಪಿಸಿದರು.