ಚನ್ನಮ್ಮ, ರಾಯಣ್ಣ ಕಿತ್ತೂರು ನಾಡಿಗೆ ಸಿಮೀತವಾಗಿರುವುದು ದುರ್ದೈವ

| Published : Jan 26 2024, 01:49 AM IST

ಚನ್ನಮ್ಮ, ರಾಯಣ್ಣ ಕಿತ್ತೂರು ನಾಡಿಗೆ ಸಿಮೀತವಾಗಿರುವುದು ದುರ್ದೈವ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಮ್ಮ, ರಾಯಣ್ಣ ಕಿತ್ತೂರು ನಾಡಿಗೆ ಮಾತ್ರ ಸಿಮೀತ ಆಗಿರುವುದು ನಮ್ಮೆಲ್ಲರ ದುರ್ದೈವವಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಹೊರಪೇಟೆ ಮಲ್ಲೇಶಪ್ಪ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಉತ್ತರ ಭಾರತದಲ್ಲಿ ಜನ್ಮ ತಾಳಿದಿದ್ದರೆ ವಿಶ್ವ ಮಟ್ಟದಲ್ಲಿ ಇವತ್ತು ಪ್ರಖ್ಯಾತಿ ಪಡೆಯುತ್ತಿದ್ದರು. ಆದರೆ ಚನ್ನಮ್ಮ, ರಾಯಣ್ಣ ಕಿತ್ತೂರು ನಾಡಿಗೆ ಮಾತ್ರ ಸಿಮೀತ ಆಗಿರುವುದು ನಮ್ಮೆಲ್ಲರ ದುರ್ದೈವವಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಹೊರಪೇಟೆ ಮಲ್ಲೇಶಪ್ಪ ಕಳವಳಗೊಂಡರು.

ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಅಕ್ಕಮಹಾದೇವಿ ಮಹಿಳಾ ಪದವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಕಿತ್ತೂರ ರಾಣಿ ಚನ್ನಮ್ಮ ಸಂಶೋಧನ ಸಂಸ್ಥೆ ಕಿತ್ತೂರ, ಪ್ರಾದೇಶಿಕ ಪತ್ರಾಗಾರ ಇಲಾಖೆ ಧಾರವಾಡ ವತಿುಂದ ಗುರುವಾರ ನಡೆದ ಸಂಗೊಳ್ಳಿ ರಾಯಣ್ಣನ ಚರಿತ್ರೆ ಕುರಿತು ರಾಜ್ಯಮಟ್ಟದ ವಿಚಾರ ಸಂಕೀರ್ಣ ಸಮಾರಂಭದ ಮುಖ್ಯಅತಿಥಿಯಾಗಿ ಮಾತನಾಡಿದರು.

ಶಾಸಕ ಮಹಾಂತೇಶ ಕೌಜಲಗಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ’ಈ ದೇಶದ ಸ್ವಾತಂತ್ರ್ಯಕ್ಕೆ ಅನೇಕ ವೀರರು ತ್ಯಾಗ, ಬಲಿದಾನ ಮಾಡಿದ್ದಾರೆ. ಅವರೆಲ್ಲರ ಸ್ಮರಣೆ ಪ್ರತಿನಿತ್ಯವಾಗಬೇಕು. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಪ್ರತಿಯೊಬ್ಬರು ಮುನ್ನಡೆಯಬೇಕು ಎಂದರು.

ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜನಪದ ಕಲಾವಿದ ಸಿ.ಕೆ.ಮೆಕ್ಕೇದ, ಹಿರಿಯ ಪತ್ರಕರ್ತ ಈಶ್ವರ ಹೋಟಿ ಮಾತನಾಡಿದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ವಿಶ್ರಾಂತ ಪ್ರಾಧ್ಯಾಪಕ ಡಾ.ಈರಣ್ಣ ಪತ್ತಾರ ಆಶಯ ನುಡಿ ಮಂಡಿಸಿದರು.

ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಬಿ.ಬಿ.ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪೂರ, ಧಾರವಾಡದ ಪ್ರಾದೇಶಿಕ ಪತ್ರಾಗಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ರಾಯಣ್ಣ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ರಾಜು ಸೊಗಲ, ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ ಎಂ.ಎಚ್.ಪೆಂಟೇದ ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.