ಚಿಂತಕ ಚಟ್ನಳ್ಳಿ ಮಹೇಶ್ ಆತಂಕ
ಕನ್ನಡಪ್ರಭ ವಾರ್ತೆ ಕಡೂರುನಾಗರೀಕ ಜೀವನದ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಮುಂದುವರಿಯುತ್ತಿದೆ. ಅದರಲ್ಲೂ ಎಐ ಆಧುನಿಕ ತಂತ್ರಜ್ಞಾನದ ಅತಿಯಾದ ಬಳಕೆಯಿಂದ ಗುರುವಿನ ಮಹತ್ವ ಮರೆಯಾಗುತ್ತಿರುವುದು ಶೋಚನೀಯ ಸಂಗತಿ ಎಂದು ಚಿಂತಕ ಚಟ್ನಳ್ಳಿ ಮಹೇಶ್ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ವೈ.ಮಲ್ಲಾಪುರ ಗ್ರಾಮದಲ್ಲಿ ಎಂ.ಆರ್. ಪ್ರಕಾಶ್ ಮನೆ ಅಂಗಳದಲ್ಲಿ ಐಸಿರಿ ಫೌಂಡೇಶನ್, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ, ಲಯನ್ಸ್ ಕ್ಲಬ್ ಚಿಕ್ಕಮಗಳೂರು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆದ ಬೆಳದಿಂಗಳು ಕಾರ್ಯಕ್ರಮದಲ್ಲಿ ಆಷಾಢ–ಶ್ರಾವಣ ಮಾಸದ ಪ್ರವಚನ ಮಾಲಿಕೆ ಆರನೇ ದಿನ ಉಪನ್ಯಾಸ ನೀಡಿದರು.ಅರಿವೇ ಗುರು ಎಂಬ ಬಸವಣ್ಣನವರ ವಾಕ್ಯದಂತೆ, ಅರಿವು ಮೂಡಿಸುವ ಪ್ರತಿಯೊಂದು ಕ್ಷಣ ಗುರುವಿಗೆ ಸಮಾನ. ಅದು ಸಣ್ಣದೋ ದೊಡ್ಡದೋ ಎಂಬುದು ಮುಖ್ಯವಲ್ಲ. ವಿದ್ಯೆ ಎಂಬುದೇ ಮುಖ್ಯ. ಪ್ರಕೃತಿ ಪ್ರತಿಯೊಬ್ಬ ಮನುಷ್ಯನಿಗೆ ಗುರು ವಾಗುತ್ತದೆ ಎಂದರು.
ವಿದ್ಯೆಗೆ ವಿನಯವೇ ಭೂಷಣ ಆಗಬೇಕಾದ ಕಾಲ ಘಟ್ಟದಲ್ಲಿ, ಅಲ್ಪವಿದ್ಯೆಯೇ ಅಹಂಕಾರಕ್ಕೆ ಕಾರಣವಾಗುತ್ತಿರುವುದು ವಿಷಾದನೀಯ. ಪ್ರತಿಯೊಬ್ಬರಲ್ಲೂ ಸೌಜನ್ಯ, ಸರಳತೆ ಮತ್ತು ವಿನಯ ಬೆಳೆಯಬೇಕಿದೆ ಎಂದರು.
ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ ಇಂದಿನ ಜನರಲ್ಲಿ ದುರಾಸೆ ಹೆಚ್ಚಾಗುತ್ತಿದೆ. ಅದನ್ನು ಕಡಿಮೆ ಮಾಡಿಕೊಂಡರೆ ಸಂತೋಷವಾಗಿ ಜೀವನ ನಡೆಸಬಹುದು. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಜಿಲ್ಲಾ ಸರಿಗನ್ನಡ ವೇದಿಕೆ ಅಧ್ಯಕ್ಷ ಎಂ. ಪ್ರಕಾಶ್ ಮಾತನಾಡಿ, ಗಿಡ ಮರಗಳಿರುವ ಕೃತಜ್ಞತಾ ಮನೋಭಾವ ಮನುಷ್ಯರಿಗಿಲ್ಲ ಎಂಬ ಕವಿಯ ಕವನದ ಸಾಲುಗಳನ್ನು ವಾಚಿಸಿ, ಸಮ ಸಮಾಜದ ನಿರ್ಮಾಣದ ಮಹತ್ವ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಎಂ. ರಂಗಪ್ಪ ಮಾತನಾಡಿ ಮನೆಯಂಗಳದ ಕಾರ್ಯಕ್ರಮಗಳಿಂದ ಮನಸ್ಸು ಒಂದಿಷ್ಟು ಪರಿವರ್ತನೆ ಗೊಳ್ಳುತ್ತದೆ. ಸಮಾಜದಲ್ಲಿ ಮುಖ್ಯವಾಗಿ ಮನುಷ್ಯ ಮನುಷ್ಯತ್ವ ಪರಿಪಾಲಿಸುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಶೆಟ್ಟಿಹಳ್ಳಿ ರಾಮಪ್ಪ, ಕಡೂರು ತಾಲೂಕು ಶರಣ ಸಾಹಿತ್ಯ ಪರಿಷತ್‌ನ ಶ್ರಾವಣ ಸಂಜೆ ಆಹ್ವಾನ ಪತ್ರಿಕೆ ಯನ್ನು ಬಿಡುಗಡೆಗೊಳಿಸಿದರು.ಹೊಸೂರು ಪುಟ್ಟರಾಜು, ಕುರುಬರಹಳ್ಳಿ ಮಠದ ರಾಮಗುರೂಜಿ, ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನ್ ಭಾರ್ಗವ್‌ಪುರಿ, ಕದಳಿ ವೇದಿಕೆ ಅಧ್ಯಕ್ಷೆ ಸುಜಾತಾ, ಬಿ.ಕೆ. ನಾಗರಾಜಪ್ಪ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ, ಗಂಗಾಧರ ಶಿವಪುರ, ಉಮಾಮಹೇಶ್ವರಪ್ಪ, ನಾಗರಾಜು, ಪ್ರಭುಲಿಂಗಶಾಸ್ತ್ರಿ, ರವಿಪ್ರಕಾಶ್, ಜಿ.ಬಿ. ಆನಂದ್‌ಮೂರ್ತಿ, ಶೀಲಾ ನಂಜುಂಡಪ್ಪ, ಎಸ್.ವಿ. ಮರಳಸಿದ್ದಪ್ಪ, ಬಿ.ಪಿ. ದೇವಾನಂದ ಮತ್ತಿತರಿದ್ದರು.
9ಕೆಕೆಡಿಯು2 .ಕಡೂರು ತಾಲೂಕಿನ ವೈ.ಮಲ್ಲಾಪುರ ಗ್ರಾಮದ ಎಂ.ಆರ್.ಪ್ರಕಾಶ್ ಮನೆಯಂಗಳದಲ್ಲಿ ಆಯೋಜಿಸಿದ್ದ ಆಷಾಢ–ಶ್ರಾವಣ ಮಾಸದ ಪ್ರವಚನ ಮಾಲಿಕೆಯನ್ನು ಚಿಂತಕ ಚಟ್ನಳ್ಳಿ ಮಹೇಶ್ ಉದ್ಘಾಟಿಸಿದರು. ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಕೆ.ವಿರೂಪಾಕ್ಷಪ್ಪ, ಎಂ.ರಂಗಪ್ಪ, ಪುಟ್ಟರಾಜು ಮತ್ತಿತರಿದ್ದರು.