ಸಾರಾಂಶ
- ನಾಯಕರಾದವರು ಮತ್ತೊಬ್ಬರನ್ನು ಬೆಳೆಸಬೇಕು, 35 ವರ್ಷ ರಾಜಕೀಯದಲ್ಲಿ ಇರುತ್ತೇನೆ, ಭಯವಿಲ್ಲ ಎಂದ ಅಭ್ಯರ್ಥಿ
- - - ಕನ್ನಡಪ್ರಭ ವಾರ್ತೆ, ದಾವಣಗೆರೆರಾಜಕಾರಣದಲ್ಲಿ ನಾಯಕ ಅನಿಸಿಕೊಂಡವರು ಮತ್ತೊಬ್ಬರನ್ನು ಬೆಳೆಸಬೇಕು. ಆದರೆ, ನನ್ನ ವಿರುದ್ಧ ನಾಯಕರು ಎನಿಸಿಕೊಂಡವರು ಮಾತನಾಡುತ್ತಿರುವುದು ದುರಾದೃಷ್ಟಕರ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಬೇಸರ ವ್ಯಕ್ತಪಡಿಸಿದರು.
ನಗರದ ಉತ್ತರ ಕ್ಷೇತ್ರದಲ್ಲಿ ರೋಡ್ ಶೋ ಮೂಲಕ ಮತಯಾಚಿಸಿ ಮತನಾಡಿದ ಅವರು, ನಾನು ಇನ್ನೂ 30-35 ವರ್ಷಗಳ ಕಾಲ ಇಲ್ಲೇ ಇದ್ದು, ಜನರ ಸೇವೆ ಮಾಡಬೇಕು ಎಂದುಕೊಂಡಿದ್ದೇನೆ. ನನಗೂ ನೂರಾರು ಯುವಕರು, ನಾಯಕರನ್ನು ಬೆಳೆಸುವ ಕನಸಿದೆ. ಹೊಸ ನಾಯಕರು ಬೆಳೆದರೆ ಮತ್ತೊಬ್ಬರಿಗೆ ಅವಕಾಶ ಸಿಗುತ್ತದೆ. ಆಗ ಅಭಿವೃದ್ಧಿಯೂ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದರು.ಪ್ರತಿಯೊಂದು ಕಡೆಗೂ ಹೊಸ ನಾಯಕತ್ವ ಬರಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದೇನೆ. ಈಗಲೂ ನಗರ, ಗ್ರಾಮೀಣ ಪ್ರದೇಶದಲ್ಲಿ ಅಸಮಾನತೆ ತಾಂಡವವಾಡುತ್ತಿದೆ. ಎರಡೇ ಕುಟುಂಬಕ್ಕೆ ಅಧಿಕಾರ ಸೀಮಿತವಾದರೆ ಪ್ರಜಾಪ್ರಭುತ್ವ, ಅಭಿವೃದ್ಧಿಗೂ ಒಳ್ಳೆಯದಲ್ಲ. ನನ್ನ ಹೋರಾಟ ಜನರಿಗೋಸ್ಕರ. ಪ್ರಾಮಾಣಿಕತೆ, ಶ್ರದ್ಧೆಯಿಂದ ಜನರ ಬಳಿ ಹೋಗಿ ಪ್ರಜಾಸತ್ತಾತ್ಮಕವಾಗಿ ನನ್ನ ಹಕ್ಕು ಮಂಡಿಸಿದ್ದೇನೆ. ನೀವೆಲ್ಲರೂ ಆಶೀರ್ವಾದ ಮಾಡಬೇಕು. ನಾಯಕರು ನನ್ನನ್ನು ಕೈಬಿಟ್ಟಿದ್ದಾರೆ. ಸಾಮಾನ್ಯ ಜನರು ಕೈಹಿಡಿದು ಬೆಳೆಸಬೇಕು. ಅವಕಾಶ ಕೊಟ್ಟರೆ ಉಜ್ವಲ ಭವಿಷ್ಯ ಸಿಗುತ್ತದೆ. ನಿಮ್ಮ ಭರವಸೆಯ ಮೇಲೆಯೇ ರಾಜಕಾರಣದಲ್ಲಿ ಮುಂದುವರಿಯುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ನನಗೆ ಯಾವುದೇ ಭಯ ಇಲ್ಲ, ಯಾರ ಬಗ್ಗೆ ಅಂಜಿಕೆಯೂ ಇಲ್ಲ. ಧೈರ್ಯದಿಂದ ಚುನಾವಣಾ ಕಣದಲ್ಲಿದ್ದೇನೆ. ಜನರ ಸಮಸ್ಯೆಗಳ ಅರಿತಿದ್ದೇನೆ. ನನ್ನ ಗ್ಯಾರಂಟಿ ಅಭಿವೃದ್ಧಿ. ಸಮೀಕ್ಷೆಗಳಲ್ಲಿ ಗೆಲುವು ನನ್ನ ಪರವಿದೆ ಎಂಬುದು ಗೊತ್ತಾಗುತ್ತಿದ್ದಂತೆ ನನ್ನನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.ನನಗೂ ಭಾಷಾ ನೈಪುಣ್ಯತೆ ಇದೆ. ಜಿಲ್ಲೆಯ ಜ್ವಲಂತ ಸಮಸ್ಯೆ ಬಗ್ಗೆ ಲೋಕಸಭೆಯಲ್ಲಿ ಸಮರ್ಥವಾಗಿ ಮಂಡಿಸುತ್ತೇನೆ. ಸಂಬಂಧಿಸಿದ ಸಚಿವರ ಜೊತೆ ಸಂಹವನಕ್ಕೆ ಭಾಷೆ ತೊಡಕಾಗದು. ಸಾವಿರಾರು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳನ್ನು ನಮ್ಮ ಇನ್‌ಸೈಟ್ಸ್ ಕೋಚಿಂಗ್ ಸೆಂಟರ್ ನೀಡಿದೆ. ಹಾಗಾಗಿ, ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿ ಕೈಗಾರಿಕೆಗಳು, ಹೊಸ ಯೋಜನೆಗಳನ್ನು ಇಲ್ಲಿ ಕಾರ್ಯಗತಗೊಳಿಸುತ್ತೇನೆ. ಒಂದೇ ಒಂದು ಬಾರಿ ಅವಕಾಶ ಕೊಡಿ, ಮನೆ ಮಗನ ಸ್ವಾಭಿಮಾನ ಗೆಲ್ಲಿಸಿಕೊಡಿ ಎಂದು ವಿನಯಕುಮಾರ ಮನವಿ ಮಾಡಿದರು.
- - -ಬಾಕ್ಸ್ ಸಿದ್ದರಾಮಯ್ಯ ಬೈಯ್ದರೂ ಆಶೀರ್ವಾದವೆಂದು ಭಾವಿಸುವೆ ಸಿಎಂ ಸಿದ್ದರಾಮಯ್ಯ ನನಗೆ ಮತ ನೀಡದಂತೆ ಕರೆ ನೀಡಿದ್ದಾರೆ. ದಾವಣಗೆರೆ, ಹೊನ್ನಾಳಿ, ಹರಿಹರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ನನ್ನ ಬಗ್ಗೆ ಏನೇ ಹೇಳಿದರೂ, ಬೈಯ್ದರೂ ಆಶೀರ್ವಾದವೆಂದು ಭಾವಿಸುವೆ. ರಾಜಕಾರಣದಲ್ಲಿ ನನಗೆ ಸಿದ್ದರಾಮಯ್ಯ ಸ್ವಾಭಿಮಾನವೇ ಸ್ಫೂರ್ತಿ. ಎಐಸಿಸಿ ಮಟ್ಟದಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿಕೆಗೆ ಚರ್ಚೆಯಾಗುವ ಹಂತಕ್ಕೆ ಹೋಗಲು ಸಿದ್ದರಾಮಯ್ಯನವರೇ ಕಾರಣ ಎಂದು ಅವರು ತಿಳಿಸಿದರು.
- - - -5ಕೆಡಿವಿಜಿ8: ದಾವಣಗೆರೆ ಕೆ.ಬಿ. ಬಡಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ ಮತಯಾಚಿಸಿದರು.