ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ
ನೀರು ನಿಗೂಢತೆ ಕುರಿತು ಉಪಯುಕ್ತ ಕೃತಿಯನ್ನು ಡಾ.ಡಿ.ಎಂ.ಸಾಗರ್ ರಚಿಸಿದ್ದು, ವೈಜ್ಞಾನಿಕವಾಗಿ ಲೇಖಕರು ನೀರನ್ನು ವಿಶ್ಲೇಷಣೆ ಮಾಡಿದ್ದಾರೆ ಎಂದು ಪರಿಸರವಾದ ಅಖಿಲೇಶ್ ಚಿಪ್ಳಿ ಹೇಳಿದರು.ಪಟ್ಟಣದ ಭಾರತೀತೀರ್ಥ ಸಭಾಭವನದಲ್ಲಿ ದೊಡ್ಡೇರಿ ಮಹಾಬಲಗಿರಿ ರಾವ್, ಡಾ.ಡಿ.ಎಂ.ಸಾಗರ್, ರಜನಿ ದೊಡ್ಡೇರಿ ಕುಟುಂಬಸ್ತರು, ಅಭಿನಯ ಸಾಗರ ಮತ್ತು ಜೋಷಿ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ.ಡಿ.ಎಂ.ಸಾಗರ್ ಬರೆದಿರುವ ವಿಲಕ್ಷಣ ಜಲಜಾಲ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿ ಕುರಿತು ಅವರು ಮಾತನಾಡಿದರು.
ನೀರಿಗೆ ಹರಿವು ಇದೆ, ಹರವೂ ಇದೆ. ನೀರು ಬಳಕೆ ಮಾಡುವಾಗ ಹೆಚ್ಚು ಜಾಗೃತೆ ವಹಿಸದೆ ಇರುವುದು ದುರದೃಷ್ಟಕರ. ನೀರು ಎಲ್ಲದರ ಜೊತೆ ಬೆರೆಯುತ್ತದೆ. ನೀರಿನ ಬಗ್ಗೆ ಕೆಲವು ವೈಜ್ಞಾನಿಕ ಸತ್ಯವನ್ನು ಇಂತಹ ಪುಸ್ತಕಗಳ ಮೂಲಕ ಮಾತ್ರ ತಿಳಿದುಕೊಳ್ಳಲು ಸಾಧ್ಯ. ಇಂತಹ ಕೃತಿಯನ್ನು ಯುವ ಪೀಳಿಗೆ ಓದುವ ಜೊತೆಗೆ ನೀರಿನ ಬಳಕೆ ಬಗ್ಗೆ ಅರಿವು ಹೊಂದಬೇಕು ಎಂದು ತಿಳಿಸಿದರು.ವೇದ, ಪುರಾಣ ಕಾಲದಲ್ಲಿ ನೀರಿನ ಉಪಯೋಗ, ಬಳಕೆ ಕುರಿತು ವಹಿಸುತ್ತಿದ್ದ ಮುತುವರ್ಜಿ, ನೀರನ್ನು ಅಪವ್ಯಯ ಮಾಡಿದರೆ ಶಿಕ್ಷೆ ಇತ್ತು ಎನ್ನುವುದನ್ನು ಕೃತಿಕಾರರು ಕಟ್ಟಿಕೊಟ್ಟಿದ್ದಾರೆ. ಅಲ್ಲದೆ ವೇದ ಕಾಲದಲ್ಲಿ ಒಂಬತ್ತು ರೀತಿಯ ನೀರು ಇತ್ತು ಎನ್ನುವುದು ಕೃತಿ ತಿಳಿಸಿಕೊಡುತ್ತದೆ. ಒಟ್ಟಾರೆ ನೀರಿನ ಬಗ್ಗೆ ನಾವು ಹೆಚ್ಚು ತಿಳಿದುಕೊಳ್ಳುವ ಜೊತೆಗೆ ಅಗತ್ಯ ಇರುವಷ್ಟು ಮಾತ್ರ ಬಳಸುವ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್, ನೀರಿನ ಕುರಿತು ಹಲವು ಮಾಹಿತಿಯನ್ನು ಒಳಗೊಂಡಿರುವ ಸಮಗ್ರ ಕೃತಿಯನ್ನು ಡಾ.ಡಿ.ಎಂ.ಸಾಗರ್ ನೀಡಿದ್ದಾರೆ. ನೀರು ಅತ್ಯಮೂಲ್ಯವಾಗಿದ್ದು ಅದನ್ನು ನಾವು ಹೇಗೆಬೇಕೋ ಹಾಗೆ ಬಳಕೆ ಮಾಡುವುದರಿಂದ ಮುಂದಿನ ಪೀಳಿಗೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ನೀರಿನ ಬಗ್ಗೆ ಅರಿವು ಮೂಡಿಸಲು ಇಂತಹ ಕೃತಿಗಳ ಪಾತ್ರ ಮಹತ್ವದ್ದು ಎಂದು ಹೇಳಿದರು.ದೊಡ್ಡೇರಿ ಮಹಾಬಲಗಿರಿರಾವ್ ಪುಸ್ತಕ ಬಿಡುಗಡೆ ಮಾಡಿದರು. ಟಿ.ವಿ.ಪಾಂಡುರಂಗ, ಬಿ.ಎಚ್.ಲಿಂಗರಾಜ್, ನಾರಾಯಣಮೂರ್ತಿ ಕಾನುಗೋಡು ಇನ್ನಿತರರು ಉಪಸ್ಥಿತರಿದ್ದರು. ಮ.ಸ.ನಂಜುಂಡಸ್ವಾಮಿ ಸ್ವಾಗತಿಸಿದರು. ಕೃತಿಕಾರ ಡಾ.ಡಿ.ಎಂ.ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗಭೂಷಣ ಹೆಗಡೆ ವಂದಿಸಿದರು. ಕೌಶಿಕ್ ಕಾನುಗೋಡು, ಸಂದೀಪ್ ಶೆಟ್ಟಿ ನಿರೂಪಿಸಿದರು. ಇದಕ್ಕೂ ಮೊದಲು ಹೆಸರಾಂತ ಕಲಾವಿದರಿಂದ ಸುಭದ್ರ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.