ಸಾರಾಂಶ
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಡೆಂಘೀ ಜ್ವರ ವಿರೋಧಿ ಮಾಸಾಚರಣೆ । ಮಕ್ಕಳಿಗೆ ರಸ ಪ್ರಶ್ನೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಡೆಂಘೀ ಜ್ವರ ಬಾರಂದತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿದೆ ಎಂದು ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್ ತಿಳಿಸಿದರು.
ಮಂಗಳವಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತಾಲೂಕು ಕಸಾಪ, ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ,ಕಡಹಿನಬೈಲು ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ನಡೆದ ಡೆಂಘೀ ವಿರೋಧಿ ಮಾಸಾಚರಣೆ ಹಾಗೂ ಮಕ್ಕಳಿಗೆ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಲೆನಾಡು ಭಾಗದಲ್ಲಿ ಡೆಂಘೀ ಜ್ವರ ಹರಡದಂತೆ ವಿದ್ಯಾರ್ಥಿಗಳು ಗಮನ ನೀಡಬೇಕು. ಕಾಯಿಲೆ ಬಂದ ನಂತರ ಔಷಧಿ ಪಡೆಯುವುದಕ್ಕಿಂತ ಕಾಯಿಲೆ ಬಾರದಂತೆ ಎಲ್ಲರೂ ಮುನ್ನೆಚ್ಚರಿಕೆ ವಹಿಸೋಣ. ಈಡೀಸ್ ಈಜಿಪ್ಟ್ ಎಂಬ ಹೆಣ್ಣು ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಈ ಕಾಯಿಲೆ ಹರಡುತ್ತದೆ ಎಂದರು.ಸಭೆ ಅಧ್ಯಕ್ಷತೆವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕನ್ನಡದ ಕಂಪು ಸಮಾಜದ ಕಟ್ಟ ಕಡೆ ವ್ಯಕ್ತಿ ಗಳಿಗೂ ತಲಪಬೇಕು ಎಂಬುದೇ ಕಸಾಪ ಉದ್ದೇಶ. ಕಸಾಪ ಸಾಹಿತ್ಯ, ಕಲೆ ಜೊತೆಗೆ ಆರೋಗ್ಯ ಕ್ಷೇತ್ರಕ್ಕೂ ಗಮನ ನೀಡುತ್ತಿದೆ. ಒಂದು ಮಗುವಿಗೆ ಉತ್ತಮ ಜ್ಞಾನ ನೀಡುವುದರಿಂದ ಸಾವಿರಾರು ಉತ್ತಮ ಬೀಜಗಳನ್ನು ಭೂಮಿಗೆ ಬಿತ್ತಿ ಸಾವಿರಾರು ಗಿಡಗಳು ಬೆಳೆಯುವುದಕ್ಕೆ ಸಮನಾಗುತ್ತದೆ. ಆರೋಗ್ಯದ ಬಗ್ಗೆ ಮಗುವಿಗೆ ಮೂಡಿಸಿದ ಅರಿವು ಮಕ್ಕಳಿಗೆ ಮುಂದಿನ ಜೀವನದಲ್ಲಿ ಅನುಕೂಲವಾಗುತ್ತದೆ. ಆರೋಗ್ಯದ ಅರಿವನ್ನು ಮನೆ, ಮನೆಗಳಿಗೆ ತಲುಪಿಸಿ ರೋಗ ಮುಕ್ತ ಜೀವನ ನಡೆಸೋಣ ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಅಜ್ಜಪ್ಪ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಕ್ಕಳು ಶಿಸ್ತಿಗೆ ಹೆಸರಾಗಿದ್ದಾರೆ. ಸ್ವಚ್ಛತೆ ಕಡೆಗೆ ನಮ್ಮ ನಡಿಗೆ ಎಂಬಂತೆ ಪ್ರತಿಯೊಬ್ಬರೂ ಮನೆ ಗಳನ್ನು, ಮನಗಳನ್ನು ಸ್ವಚ್ಛವಾಗಿಟ್ಟು ಕೊಳ್ಳೋಣ ಎಂದರು.ಕಡಹಿನಬೈಲು ಗ್ರಾಮ ಅಧ್ಯಕ್ಷೆ ಶೈಲಾ ಮಹೇಶ್ ಉದ್ಘಾಟಿಸಿದರು. ಅತಿಥಿಗಳಾಗಿ ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್, ಸದಸ್ಯರಾದ ಚಂದ್ರಶೇಖರ್, ಲಿಲ್ಲಿ ಮಾತು ಕುಟ್ಟಿ, ವಾಣಿ ನರೇಂದ್ರ, ಅಶ್ವಿನಿ, ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವೀಚಾರಕ ಪವನ್ ಕರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್, ಸಮುದಾಯ ಆರೋಗ್ಯ ಅಧಿಕಾರಿ ಮಿನಿ ಎಲ್ದೋ, ಶುಶ್ರೂಷಕಿ ದಿವ್ಯ, ಶಿಕ್ಷಕರಾದ ನಾಗರಾಜ್, ಅಪೂರ್ವ,ವಹೀದ,ಭಾನು, ಆಶಾ ಕಾರ್ಯಕರ್ತೆಯರು ಇದ್ದರು.
ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು.