ಸಾರಾಂಶ
ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಜನ ಜಾಗ್ರತಿ ವೇದಿಕೆಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ,ನರಸಿಂಹರಾಜಪುರಇತ್ತೀಚಿನ ವರ್ಷಗಳಲ್ಲಿ ಚಿಕ್ಕ, ಚಿಕ್ಕ ಮಕ್ಕಳೇ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಅರವಿಂದ ಸೋಮಯಾಜಿ ತಿಳಿಸಿದರು.
ಸೋಮವಾರ ಕುದುರೆಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದರು. ಸಮಾಜದಲ್ಲಿ ಒಳ್ಳೆಯವರೂ ಇದ್ದಾರೆ. ಕೆಟ್ಟವರೂ ಇದ್ದಾರೆ. ಮಕ್ಕಳಿದ್ದಾಗಲೇ ದುಶ್ಚಟಗಳ ಬಗ್ಗೆ ಅರಿವು ಮೂಡಿಸಿದರೆ ಮುಂದಿನ ದಿನಗಳಲ್ಲಿ ಅವರು ಸಮಾಜದಲ್ಲಿ ಒಳ್ಳೆಯವರಾಗಿ ಬದುಕಬಹುದು. ಮದ್ಯಪಾನ, ಬೀಡಿ, ಸಿಗರೇಟು, ಡ್ರಗ್ಸ್ ಸೇವನೆ ಕಲಿತು ಜೀವನವನ್ನೇ ಬಲಿಕೊಡುತ್ತಾರೆ. ಸಹವಾಸ ದೋಷದಿಂದ ದುಶ್ಚಟಗಳನ್ನು ಮೈಗೂಡಿಸಿಕೊಂಡು ನಂತರ ಅದು ಚಟವಾಗಿ ಪರಿವರ್ತನೆಯಾಗುತ್ತದೆ. ಸಮಾಜವನ್ನು ಹಾಳು ಮಾಡುವುವರು, ದಾರಿ ತಪ್ಪಿಸುವವರು ಅನೇಕರಿದ್ದಾರೆ. ಸೈಬರ್ ಕ್ರೈಂ ಸಹ ಸಮಾಜವನ್ನು ದಾರಿ ತಪ್ಪಿಸುತ್ತಿದೆ ಎಂದರು.1995 ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಯವರು ಪ್ರಾಯೋಗಿಕವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಮದ್ಯಪಾನ ನಿಷೇದ ಜಾರಿಗೆ ತಂದಿದ್ದರು. ಆದರೆ, ಜನರು ಬೇರೆ ತಾಲೂಕಿನಿಂದ ಮದ್ಯ ತರುವುದು, ಮನೆಯಲ್ಲೇ ಕಳ್ಳಭಟ್ಟಿ ತಯಾರಿಸುವುದು ಪ್ರಾರಂಭವಾಯಿತು. ಇದನ್ನು ಮನಗಂಡ ಡಾ.ವೀರೇಂದ್ರ ಹೆಗಡೆಯವರು ಜನರಲ್ಲಿ ಮನಃ ಪರಿವರ್ತನೆ ಆಗದೆ ಇದ್ದರೆ ಕಾನೂನಿಂದ ಪ್ರಯೋಜನವಾಗುವುದಿಲ್ಲ ಎಂದು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಜಾರಿಗೆ ತಂದರು. ಶಾಲೆ ಮಕ್ಕಳಿಗೆ ದುಶ್ಚಟಗಳಿಂದ ದೂರ ಇರುವಂತೆ ಸಂಕಲ್ಪ ಮಾಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುದುರೆಗುಂಡಿ ವಲಯದ ಮೇಲ್ವೀಚಾರಕ ಸುಧೀರ್ ಮಾತನಾಡಿ, ಧ.ಗ್ರಾ.ಯೋಜನೆಯಡಿ ಕೊಪ್ಪ, ನರಸಿಂಹರಾಜಪುರ ತಾಲೂಕಿನಲ್ಲಿ 1700 ಸ್ವಸಹಾಯ ಸಂಘಗಳಿವೆ. ಧರ್ಮಸ್ಥಳ ಶ್ರೀ ಕ್ಷೇತ್ರ ಅನ್ನದಾನ, ವಿದ್ಯಾದಾನ, ಅಭಯದಾನ ಹಾಗೂ ಔಷಧ ದಾನಗಳನ್ನು ಮಾಡುತ್ತಿವೆ. ವಿಶೇಷವಾಗಿ ದುಶ್ಚಟ ಮುಕ್ತ ಸಮಾಜ ನಿರ್ಮಿಸಲು ಮದ್ಯ ವರ್ಜನ ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶೌರ್ಯ ವಿಪತ್ತು ತಂಡ ನಿಸ್ವಾರ್ಥದಿಂದ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾರೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ಪ್ರೌಢ ಶಾಲೆ, ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.ಸಭೆ ಅಧ್ಯಕ್ಷತೆ ವಹಿಸಿದ್ದ ಕುದುರೆಗುಂಡಿ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಧನಂಜಯ ಮೇಧೂರ ಮಾತನಾಡಿ, ಸಮಾಜದಲ್ಲಿ ಅನೇಕರು ಮನೆಗಳಲ್ಲಿ ಪಾರ್ಟಿ ಹೆಸರಿನಲ್ಲಿ ಮಕ್ಕಳ ಎದುರೇ ಪೋಷಕರು ಮದ್ಯಪಾನ ಮಾಡುವುದು, ಸಿಗರೇಟು, ಬೀಡಿ ಸೇದುವುದು ಮಾಡುತ್ತಾರೆ. ಇದರಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಿದೇಶದಿಂದ ಕೋಟಿ ಗಟ್ಟಲೆ ಮೌಲ್ಯದ ಮಾದಕ ವಸ್ತುಗಳು ನಮ್ಮ ದೇಶಕ್ಕೆ ಬರುತ್ತಿರುವ ಬಗ್ಗೆ ಮಾದ್ಯಮಗಳಲ್ಲಿ ವರದಿ ಯಾಗುತ್ತಿದೆ. ಗ್ರಾಮೀಣ ಪ್ರದೇಶಕ್ಕಿಂತ ನಗರಗಳಲ್ಲೇ ಹೆಚ್ಚು ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ ಎಂದರು.
ದುರೆಗುಂಡಿ ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ.ಸದಸ್ಯ ರಾಘವೇಂದ್ರ, ಧ.ಗ್ರಾ.ಯೋಜನೆ ಕುದುರೆಗುಂಡಿ ವಲಯದ ಒಕ್ಕೂಟದ ಅಧ್ಯಕ್ಷ ರಾಜೇಶ್, ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್, ಸೇವಾ ಪ್ರತಿನಿಧಿ ರವಿ, ಪ್ರೌಢ ಶಾಲೆ ಸಹ ಶಿಕ್ಷಕರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.