ಸಾರಾಂಶ
ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ
ರಾಜ್ಯದ ಅನೇಕ ಲಿಂಗಾಯತ ಮಠಾಧೀಶರು ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಇತ್ತೀಚೆಗೆ ಮಠಾಧೀಶರು ಸಕ್ರಿಯವಾಗಿ ರಾಜಕೀಯದಲ್ಲಿ ಗುರುತಿಸಿಂಡಿರುವುದು. ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಬಸವನಬಾಗೇವಾಡಿ ತಾಲೂಕಿನ ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಧ್ಯಕ್ಷ ವಿವೇಕಾನಂದ ಕಲ್ಯಾಣಶೆಟ್ಟಿ ಹೇಳಿದ್ದಾರೆ.ರಾಜಕೀಯ ಪಕ್ಷಗಳ ಟಿಕೆಟ್ ಕೊಡಿಸುವುದು ಸೇರಿದಂತೆ ಹಲವಾರು ವಿಷಯದಲ್ಲಿ ಮಠಾಧೀಶರು ಮೂಗು ತೂರಿಸುತ್ತಿದ್ದಾರೆ. ಕೆಲವು ಮಠಾಧೀಶರು ಸ್ವತಂತ್ರ ಲಿಂಗಾಯತ ಧರ್ಮ ವಿರೋಧಿಸುತ್ತಿದ್ದಾರೆ. ಕೆಲವರು ಸ್ವತಂತ್ರ ಧರ್ಮದ ಹೋರಾಟದಿಂದ ಹಿಂದೆ ಸರಿದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಮತದಾರರ ಹಕ್ಕು ಆಗಿದೆ. ಲಿಂಗಾಯತ ಧರ್ಮಕ್ಕೆ ಯಾವುದೇ ಕೊಡುಗೆ ನೀಡದ ಮಠಾಧೀಶರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ದಿಂಗಾಲೇಶ್ವರ ಸ್ವಾಮಿಗಳು ಚುನಾವಣೆಗೆ ನಿಲ್ಲಲು ಸ್ವತಂತ್ರರಾಗಿದ್ದಾರೆ. ಆದರೆ, ಲಿಂಗಾಯತ ಧರ್ಮದ ಬಗ್ಗೆ ಒಂದು ಪೈಸೆ ಕೆಲಸ ಮಾಡದ ಅವರು ತಮ್ಮ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಹಿಂದೊಮ್ಮೆ ಪ್ರಭಾವಿಯಾಗಿದ್ದ ಮಾತೆ ಮಹಾದೇವಿಯರು ಇದೇ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡ ಉದಾಹರಣೆ ಇದೆ. ದಯವಿಟ್ಟು ಲಿಂಗಾಯತರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಬಾರದು. ಲಿಂಗಾಯತರು ಜಾಗೃತರು ಇದ್ದಾರೆ ಎನ್ನುವ ಸಾಮಾನ್ಯ ಜ್ಞಾನ ಸ್ವಾಮಿಗಳಿಗೆ ಇರಬೇಕು ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.