ಖಂಡ್ರೆ ಸೋದರನ ಅಧ್ಯಕ್ಷತೆಯ ಡಿಸಿಸಿ ಬ್ಯಾಂಕ್‌ ಮೇಲೆ ಐಟಿ ದಾಳಿ

| Published : Apr 13 2024, 01:03 AM IST

ಸಾರಾಂಶ

ಲೋಕಸಭಾ ಚುನಾವಣೆ ಕಾವು ಏರುತ್ತಿರುವ ಸಂದರ್ಭದಲ್ಲೇ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸಹೋದರ ಅಮರ ಖಂಡ್ರೆ ಅಧ್ಯಕ್ಷರಾಗಿರುವ ಡಿಸಿಸಿ ಬ್ಯಾಂಕ್ ಹಾಗೂ ಮಹಾತ್ಮಗಾಂಧಿ ಸೌಹಾರ್ದ ಸಹಕಾರಿ ಸಂಘದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಶುಕ್ರವಾರ ದಾಳಿ ಮಾಡಿ ಪರಿಶೀಲನೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಬೀದರ್

ಲೋಕಸಭಾ ಚುನಾವಣೆ ಕಾವು ಏರುತ್ತಿರುವ ಸಂದರ್ಭದಲ್ಲೇ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸಹೋದರ ಅಮರ ಖಂಡ್ರೆ ಅಧ್ಯಕ್ಷರಾಗಿರುವ ಡಿಸಿಸಿ ಬ್ಯಾಂಕ್ ಹಾಗೂ ಮಹಾತ್ಮಗಾಂಧಿ ಸೌಹಾರ್ದ ಸಹಕಾರಿ ಸಂಘದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಶುಕ್ರವಾರ ದಾಳಿ ಮಾಡಿ ಪರಿಶೀಲನೆ ನಡೆಸಿದೆ.

ಬೆಳಗ್ಗೆಯಷ್ಟೇ ಡಿಸಿಸಿ ಬ್ಯಾಂಕ್‌ ಮೇಲೆ ದಾಳಿ ನಡೆಸಿದ ಐಟಿ ತಂಡ ರಾತ್ರಿ ಎಂಟು ಗಂಟೆ ಸುಮಾರಿಗೆ ಬೀದರ್‌ ನಗರದಲ್ಲೇ ಇರುವ ಸೌಹಾರ್ದ ಸಹಕಾರಿ ಸಂಘದ ಕಚೇರಿ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿತು.

ಮೊದಲಿಗೆ ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌(ಡಿಸಿಸಿ ಬ್ಯಾಂಕ್‌) ಮೇಲೆ ಬೆಳಗ್ಗೆ 10.30ರ ಸುಮಾರಿಗೆ ದಾಳಿ ನಡೆಸಿದ ವಿಜಯಪುರ, ಕಲಬುರಗಿ ಹಾಗೂ ರಾಯಚೂರಿನ ಐಟಿ ಅಧಿಕಾರಿಗಳ ತಂಡ ಪೊಲೀಸ್‌ ಬಂದೋಬಸ್ತ್‌ನಲ್ಲಿ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಸಿ ಬ್ಯಾಂಕ್‌ ವ್ಯವಹಾರಗಳ ತನಿಖೆಗೆ ಇಳಿದಿದ್ದಾರೆ. ಆ ಬಳಿಕ ರಾತ್ರಿ ವೇಳೆಗೆ ಮಹಾತ್ಮಾ ಗಾಂಧಿ ಕಚೇರಿ ಮೇಲೆ ರಾತ್ರಿ ವೇಳೆ ದಾಳಿ ನಡೆದಿದೆ.

ಎರಡ್ಮೂರು ವರ್ಷಗಳ ಹಿಂದೆಯೇ ಡಿಸಿಸಿ ಬ್ಯಾಂಕ್‌ ಅನುತ್ಪಾದಕ ಆಸ್ತಿ ಹಾಗೂ ಅತಿಯಾದ ಸಾಲ ನೀಡುವಿಕೆ ಜೊತೆಗೆ ಸಾಲ ವಸೂಲಾತಿಯಲ್ಲಿ ಭಾರೀ ಹಿನ್ನಡೆ ಕಂಡಿದ್ದ ಕುರಿತು ನಬಾರ್ಡ್‌ ಮತ್ತು ಅಪೆಕ್ಸ್‌ ಬ್ಯಾಂಕ್‌ಗಳಿಂದ ಆರ್‌ಬಿಐಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಲಾಗಿತ್ತು. ಅದರ ಪರಿಣಾಮವೇ ಈಗ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.ಆದರೆ, ಚುನಾವಣೆ ಸಂದರ್ಭದಲ್ಲಿ ಈ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈಶ್ವರ್ ಖಂಡ್ರೆ ಪುತ್ರ ಸಾಗರ ಖಂಡ್ರೆ ಸದ್ಯ ಬೀದರ್ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಘೋಷಿತ ಅಭ್ಯರ್ಥಿ. ಕೇಂದ್ರ ಸಚಿವ ಬಿಜೆಪಿಯ ಭಗವಂತ ಖೂಬಾ ಅವರು ಪ್ರತಿಸ್ಪರ್ಧಿಯಾಗಿದ್ದಾರೆ.