ಎಸ್‌.ಪಿ.ಮುದ್ದಹನುಮೇಗೌಡರ ಪರ ಸಚಿವ ರಾಜಣ್ಣ ಮತಬೇಟೆ

| Published : Apr 13 2024, 01:03 AM IST

ಸಾರಾಂಶ

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೊರಗಿನವರು. ಅವರಿಗೆ ಓಟು ಹಾಕಿದರೆ ದೂರದ ಬೆಟ್ಟ ನುಣ್ಣಗೆ ಇದ್ದಂಗಷ್ಟೆ, ಅವರನ್ನು ನಂಬಿ ಕೆಲಸ ಮಾಡಕ್ಕಾಗಲ್ಲ. ನಮ್ಮ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಎಸ್‌.ಪಿ.ಮುದ್ದಹನುಮೇಗೌಡ ಸ್ಥಳೀಯರು ಅವರಿಗೆ ಮತ ನೀಡಿ. ಮತದಾರರು ತಮ್ಮ ಅಸ್ತಿತ್ವ ತೋರಿಸುವ ಮೂಲಕ ಎಸ್‌ಪಿಎಂ ಗೆಲುವಿಗೆ ಶ್ರಮಿಸಬೇಕು ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಕರೆಯಿತ್ತರು.

ಕನ್ನಡಪ್ರಭ ವಾರ್ತೆ ಮಧುಗಿರಿತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೊರಗಿನವರು. ಅವರಿಗೆ ಓಟು ಹಾಕಿದರೆ ದೂರದ ಬೆಟ್ಟ ನುಣ್ಣಗೆ ಇದ್ದಂಗಷ್ಟೆ, ಅವರನ್ನು ನಂಬಿ ಕೆಲಸ ಮಾಡಕ್ಕಾಗಲ್ಲ. ನಮ್ಮ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಎಸ್‌.ಪಿ.ಮುದ್ದಹನುಮೇಗೌಡ ಸ್ಥಳೀಯರು ಅವರಿಗೆ ಮತ ನೀಡಿ. ಮತದಾರರು ತಮ್ಮ ಅಸ್ತಿತ್ವ ತೋರಿಸುವ ಮೂಲಕ ಎಸ್‌ಪಿಎಂ ಗೆಲುವಿಗೆ ಶ್ರಮಿಸಬೇಕು ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಕರೆಯಿತ್ತರು.

ತಾಲೂಕಿನ ಕಸಬಾ ಸಿದ್ದಾಪುರ,ಡಿವಿಹಳ್ಳಿ ,ದೊಡ್ಡೇರಿ ಹೋಬಳಿ ಕೈಮರ ದಂಡಿನದಿಬ್ಬ,ಬಡವನಹಳ್ಳಿ ಶಿವನಗೆರೆ,ಸಜ್ಜೇಹೊಸಹಳ್ಳಿ ಹಾಗೂ ರಂಟವಳಲು ಗ್ರಾಮಗಳಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಎಸ್‌.ಪಿ.ಮುದ್ದಹನುಮೇಗೌಡ ಪರ ಚುನಾವಣಾ ಪ್ರಚಾರ ನಡೆಸಿ. ಮಾತನಾಡಿದರು. ಬಿಜೆಪಿ ಅಭ್ಯರ್ಥಿ ಸೋಮಣ್ಣ ನಮ್ಮ ಊರಿನವರಲ್ಲ. ಅವರನ್ನು ಹುಡಕಲು ಪ್ರಾರಂಭಿಸಿದರೆ 10 ಸಾವಿರ ಖರ್ಚು ಬರುತ್ತದೆ. ಎಲ್ಲಿದ್ದಾರೆ ಗೊತ್ತಾಗಲ್ಲ. ನಮ್ಮ ಅಭ್ಯರ್ಥಿ ಮುದ್ದಹನುಮೇಗೌಡರಿಗೆ ಒಂದು ಕರೆ ಮಾಡಿದರೆ ಸಾಕು ಸ್ಪಂದಿಸುವ ಸರಳ ಜೀವಿ. ಆದ್ದರಿಂದ ಕಳೆದ ಆಸೆಂಬ್ಲಿ ಚುನಾವಣೆಯಲ್ಲಿ ನನಗೆ ನೀಡಿದ ಬಹುಮತ ಕ್ಕಿಂತಲೂ ಹೆಚ್ಚು ಮತ ನೀಡಿ ಗೌಡರನ್ನು ಗೆಲ್ಲಿಸಬೇಕು. ಶಾಸಕರ ಜೊತೆಗೆ ಸಂಸದರು ಜೊತಗಿದ್ದರೆ ಇಬ್ಬರು ಸೇರಿ ಹೊಂದಾಣಿಕೆಯಿಂದ ಕ್ಷೇತ್ರದ ಅಭಿವೃ ದ್ಧಿಗೆ ಸಮರ್ಥವಾಗಿ ಕೆಲಸ ಮಾಡಬಹುದು. ಕಾರ್ಯಕರ್ತರು ಪ್ರತಿ ಮನೆ ಮನಗೆ ತೆರಳಿ ಮತದಾರರನ್ನು ಓಲೈಕೆ ಮಾಡಿ ಹಸ್ತದ ಗುರುತಿಗೆ ಮತ ಹಾಕಿಸುವಂತೆ ರಾಜಣ್ಣ ಸಲಹೆ ನೀಡಿದರು.

ಮುದ್ದಹನುಮೇಗೌಡರನ್ನು ಗೆಲ್ಲಿಸಿಕೊಡಿ. ಚುನಾವಣೆ ಮುಗಿದ ಬಳಿಕ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಅಧಿಕಾರಿಗಳ ಜೊತೆ ಸಾಧಿಸಿ, ಜನಸಂಪರ್ಕ ಸಭೆ ನಡೆಸಿ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ, ಡಿಸಿಎಂ.ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ನಾನು ಸೇರಿ ನುಡಿದಂತೆ ನಡೆದು ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ.ಬರಗಾಲವಿದ್ದರೂ ಅಧಿಕಾರಿಗಳು ಆಸಕ್ತಿ ವಹಿಸಿ ಜನ ಜಾನುವಾರುಗಳಿ ಕುಡಿವ ನೀರಿಗೆ ತೊಂದರೆ ಆಗದಂತೆ ಕೆಲಸ ಮಾಡುತ್ತಿದ್ದಾರೆ. ಗುಡಿಸಲು ಮುಕ್ತ ತಾಲೂಕನ್ನಾಗಿ ಮಾಡುವುದು ನನ್ನ ಗುರಿ. ಆ ನಿಟ್ಟಿನಲ್ಲಿ ಚುನಾವಣೆ ಮುಗಿದ ನಂತರ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ, ಮನೆ ಹಂಚಲು ಅಧಿಕಾರಿಗಳನ್ನು ನಿಮ್ಮ ಮನೆ ಬಾಗಿಲಿಗೆ ಕರೆದುಕೊಂಡು ಬರುತ್ತೇನೆ. ಬಡವರನ್ನು ಗುರುತಿಸಿ ಪಟ್ಟಿ ಮಾಡಿ ಕೊಡಿ. ಎಲ್ಲ ಜಾತಿಯ ಬಡವರಿಗೂ ಮನೆ ಕೊಡಿಸುತ್ತೇನೆ. ಬಡವರ ಪರ ಕೆಲಸ ಮಾಡಿರುವ ತೃಪ್ತಿ ನನಗಿದೆ. ನಮ್ಮ ಅವಧಿಯಲ್ಲಿ ಎತ್ತಿನ ಹೊಳೆ ನೀರು ಹರಿಸಿ ತಾಲೂಕಿನ 54 ಕೆರೆಗಳನ್ನು ತುಂಬಿಸಿದರೆ ಅಂತರ್ಜಲ ವೃದ್ಧಿಗೆಯಾಗಲಿದೆ ಎಂದರು.

ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕ ಬಿ.ನಾಗೇಶ್ ಬಾಬು, ಪುರಸಭೆ ಮಾಡಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು. ಜಿಪಂ ಮಾಜಿ ಸದಸ್ಯ ಹೂವಿನ ಚೌಡಪ್ಪ, ಡಿವಿಹಳ್ಳಿ ಪಂ.ಅಧ್ಯಕ್ಷೆ ಮಹಾಲಕ್ಷ್ಮೀ, ಅದ್ದೂರಿಗೌಡ, ಕೆಎಂಎಫ್‌ ನಿರ್ದೇಶಕ ಮೈದನಹಳ್ಳಿ ಕಾಂತರಾಜು, ಮುಖಂಡರಾದ ತುಂಗೋಟಿ ರಾಮಣ್ಣ,ಸುವರ್ಣಮ್ಮ,ಇಂದಿರಾ,ಎಂ.ಎಸ್‌.ಮಲ್ಲಿಕಾರ್ಜುನಯ್ಯ,ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಗೋಪಾಲಯ್ಯ,ಆದಿನಾರಾಯಣರೆಡ್ಡಿ ಸೇರಿದಂತೆ ಅನೇಕರಿದ್ದರು.

-------------------------

ಮನಮೋಹನ್‌ ಸಿಂಗ್‌ರಿಂದ 72 ಸಾವಿರ ಕೋಟಿ ರು. ರೈತರ ಸಾಲ ಮನ್ನಾ:

ಗ್ಯಾರಂಟಿಗಳು ಶೇ.90ರಷ್ಟು ಜನಕ್ಕೆ ತಲುಪಿವೆ. ತಲುಪದಿರುವವರನ್ನು ಮುಂದಿನ ದಿನಗಳಲ್ಲಿ ಪತ್ತೆ ಹಚ್ಚಿ ಅಧಿಕಾರಿಗಳನ್ನು ಮನೆ ಬಾಗಿಲಿಗೆ ಕಳುಹಿಸಿ ಸರ್ಕಾರದ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡುತ್ತೇನೆ. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದರೆ ಕುಟುಂಬದ ಪ್ರತಿ ಮಹಿಳೆಗೆ ಪ್ರತಿ ವರ್ಷ 1 ಲಕ್ಷ ರು. ಹಣ ನೀಡುವ ಜೊತೆಗೆ ರೈತರ ಸಾಲ ಮನ್ನಾ ಮಾಡುವ ಕುರಿತು ಎಐಸಿಸಿ ಅಧ್ಯಕ್ಷ ಖರ್ಗೆ, ರಾಹುಲ್‌ಗಾಂಧಿ, ಪ್ರಿಯಾಂಕಾಗಾಂಧಿ, ಸೋನಿಯಾ ಗಾಂಧಿ ಅವರು ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ಹಿಂದೆ ಕೇಂದ್ರದಲ್ಲಿ ನಮ್ಮ ಮನಮೋಹನ್‌ ಸಿಂಗ್‌ ಸರ್ಕಾರವಿದ್ದಾಗ ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದನ್ನು ನೆನಪಿಸಿದ ರಾಜಣ್ಣ, ಈಗಿನ ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡ್ಲಿಲ್ಲ, ಆದರೆ ಕಾರ್ಪೂರೇಟ್‌ ಕಂಪನಿಗಳ 14 ಲಕ್ಷ ಕೋಟಿ ರು.ಸಾಲ ಮನ್ನಾ ಮಾಡುವ ಮುಖೇನ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ. ಆದ ಕಾರಣ ರೈತರ, ಕೃಷಿಕರ ಹಾಗೂ ಕೂಲಿಕಾರ್ಮಿಕರ ಪರವಾಗಿ ಕೆಲಸ ಮಾಡುವ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಎಸ್‌ಪಿಎಂಗೆ ಮತ ನೀಡುವಂತೆ ರಾಜಣ್ಣ ಮನವಿ ಮಾಡಿದರು.