ನಾಲ್ಕನೆ ದಿನದ ಬಳಿಕ ಮತ್ತೆ ಬೆಂಗಳೂರಲ್ಲಿ ಮಳೆ

| Published : May 19 2024, 01:45 AM IST / Updated: May 19 2024, 10:47 AM IST

ನಾಲ್ಕನೆ ದಿನದ ಬಳಿಕ ಮತ್ತೆ ಬೆಂಗಳೂರಲ್ಲಿ ಮಳೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿ ಬೆಂಗಳೂರಿನ ಕೆಲವು ಭಾಗದಲ್ಲಿ ಮತ್ತೆ ಶನಿವಾರ ಮಳೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕಣ್ಮರೆಯಾಗಿದ್ದ ಮಳೆರಾಯ ಮತ್ತೆ ಪ್ರತ್ಯಕ್ಷನಾಗಿದ್ದಾನೆ.

 ಬೆಂಗಳೂರು ;  ರಾಜಧಾನಿ ಬೆಂಗಳೂರಿನ ಕೆಲವು ಭಾಗದಲ್ಲಿ ಮತ್ತೆ ಶನಿವಾರ ಮಳೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕಣ್ಮರೆಯಾಗಿದ್ದ ಮಳೆರಾಯ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಬೆಳಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ತುಮಕೂರು ರಸ್ತೆ, ಯಶವಂತಪುರ, ರಾಜರಾಜೇಶ್ವರಿನಗರ ಭಾಗದಲ್ಲಿ 10 ರಿಂದ 15 ನಿಮಿಷ ಮಳೆಯಾಗಿತ್ತು. ಮತ್ತೆ ಸಂಜೆ 7 ಗಂಟೆಯ ನಂತರ ಕೆಲ ಕಾಲ ಧಾರಾಕಾರವಾಗಿ ಮಳೆ ಸುರಿದಿದೆ.

ಬೆಂಗಳೂರು ಉತ್ತರ ಭಾಗದಲ್ಲಿ ಮಾತ್ರ ಹೆಚ್ಚಿನ ಮಳೆಯಾಗಿದೆ. ಉಳಿದ ಕಡೆ ತುಂತುರು ಮತ್ತು ಸಣ್ಣ ಪ್ರಮಾಣದ ಮಳೆಯಾಗಿದೆ.

ಗೊರಗುಂಟೆಪಾಳ್ಯದ ತುಮಕೂರು ರಸ್ತೆಯ ಫ್ಲೈಓವರ್‌ನಲ್ಲಿ ಭಾರೀ ಪ್ರಮಾಣದ ನೀರು ನಿಂತುಕೊಂಡ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿತ್ತು. ಜಾಲಹಳ್ಳಿ ಕ್ರಾಸ್‌, 8ನೇ ಮೈಲಿ ಸೇರಿದಂತೆ ಮೊದಲಾದ ಕಡೆ ವಾಹನ ಸವಾರರು ಸಂಚಾರ ದಟ್ಟಣೆ ಎದುರಿಸಬೇಕಾಯಿತು. ಉಳಿದಂತೆ ವಿಶ್ವನಾಥ ನಾಗೇನಹಳ್ಳಿ ಭಾಗದಲ್ಲಿ ಮರ ಬಿದ್ದಿದೆ. ಯಲಹಂಕ, ಎಚ್‌ಎಂಟಿ ವಾರ್ಡ್ ಸೇರಿದಂತೆ ಕೆಲವು ಕಡೆ ರಸ್ತೆಯಲ್ಲಿ ನೀರು ನಿಂತುಕೊಂಡ ವರದಿಯಾಗಿದೆ.

ನಗರದಲ್ಲಿ ಸರಾಸರಿ 3.1 ಮಿ.ಮೀ ಮಳೆಯಾಗಿದ್ದು, ನಂದಿನಿ ಲೇಔಟ್‌ನಲ್ಲಿ ಅತಿ ಹೆಚ್ಚು 4.6 ಸೆಂ.ಮೀ ಮಳೆಯಾಗಿದೆ. ಮಾರಪ್ಪನಪಾಳ್ಯದಲ್ಲಿ 3.6, ವಿದ್ಯಾರಣ್ಯಪುರ 3.2, ಬಾಗಲಗುಂಟೆ, ನಾಗಪುರ, ಶೆಟ್ಟಿಹಳ್ಳಿಯಲ್ಲಿ ತಲಾ 3.1, ಪೀಣ್ಯ ಕೈಗಾರಿಕಾ ಪ್ರದೇಶ 2.8, ಯಲಹಂಕ 2.7, ಕೊಟ್ಟಿಗೆಪಾಳ್ಯ 1.8, ರಾಜಾಜಿನಗರ 1.6, ಚೊಕ್ಕಸಂದ್ರ 1.5, ಕಾಟನ್‌ಪೇಟೆ 1.3, ರಾಜ್‌ಮಹಲ್‌ ಗುಟ್ಟಹಳ್ಳಿ ಹಾಗೂ ಚಾಮರಾಜಪೇಟೆಯಲ್ಲಿ ತಲಾ 1.2 ಸೆಂ.ಮೀ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.