ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ಬೆಂಗಳೂರಲ್ಲಿ ವಾಡಿಕೆಗಿಂತ ಮೊದಲೇ ಚಳಿ ಚಳಿ...

| Published : Nov 23 2024, 01:18 AM IST / Updated: Nov 23 2024, 09:04 AM IST

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ಬೆಂಗಳೂರಲ್ಲಿ ವಾಡಿಕೆಗಿಂತ ಮೊದಲೇ ಚಳಿ ಚಳಿ...
Share this Article
  • FB
  • TW
  • Linkdin
  • Email

ಸಾರಾಂಶ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ನಗರದಲ್ಲಿ ವಾಡಿಕೆಗಿಂತ 10 ದಿನ ಮೊದಲೇ ಚಳಿಗಾಲ ಆರಂಭವಾಗಿದೆ. ಜನರು ಸ್ವೆಟರ್‌ಗಳ ಮೊರೆ ಹೋಗುತ್ತಿದ್ದಾರೆ.

 ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ಈ ಸಲ ನಿಗದಿತ ಅವಧಿಗಿಂತ ಮೊದಲೇ ಚಳಿಗಾಲ ಆರಂಭಗೊಂಡಿದ್ದು, ನಿಧಾನವಾಗಿ ಚಳಿ ಹೆಚ್ಚಾಗಲಿದೆ.

ವಾಡಿಕೆಯಂತೆ ಬೆಂಗಳೂರಿನಲ್ಲಿ ನವೆಂಬರ್‌ ಕೊನೆ ವಾರ ಅಥವಾ ಡಿಸೆಂಬರ್‌ ಮೊದಲ ವಾರದಲ್ಲಿ ಚಳಿಗಾಲ ಆರಂಭಗೊಳ್ಳಲಿದೆ. ಆದರೆ, ಈ ಸಲ 10 ದಿನ ಮೊದಲೇ ಆರಂಭಗೊಂಡಿದೆ.

ನವೆಂಬರ್‌ ಎರಡನೇ ವಾರದಲ್ಲಿ ನಗರದಲ್ಲಿ ಚಳಿ ಆರಂಭವಾಗುವ ಸೂಚನೆ ಇತ್ತು. ಆದರೆ, ಕಳೆದ ವಾರದ ಬಂಗಾಳಕೊಲ್ಲಿಯಲ್ಲಿ ವಾಯುಬಾರ ಕುಸಿತ ಉಂಟಾದ ಪರಿಣಾಮ ನಗರದಲ್ಲಿ ಮಳೆ ವಾತಾವರಣ ಸೃಷ್ಟಿಯಾಗಿದ್ದರಿಂದ ಇದೀಗ ಚಳಿ ಶುರುವಾಗಿದೆ.

ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶ 17.4 ಡಿಗ್ರಿ ಸೆಲ್ಸಿಯಸ್‌ ಶುಕ್ರವಾರ ದಾಖಲಾಗಿದೆ. ಇದು ವಾಡಿಕೆ ಕನಿಷ್ಠ ಉಷ್ಣಾಂಶಕ್ಕಿಂತ (18 ಡಿಗ್ರಿ ಸೆಲ್ಸಿಯಸ್‌) 0.6 ಡಿಗ್ರಿ ಸೆಲ್ಸಿಯಸ್‌ ಕಡಿಮೆ ದಾಖಲಾಗಿದೆ. ದಿನದಿಂದ ದಿನಕ್ಕೆ ಕನಿಷ್ಠ ಉಷ್ಣಾಂಶದಲ್ಲಿ ಇಳಿಕೆ ಉಂಟಾಗಲಿದ್ದು, ಆಗ ಇನ್ನಷ್ಟು ಚಳಿ ಅನುಭವ ಆಗಲಿದೆ. ಆದರೆ, ಬೆಂಗಳೂರಿನಲ್ಲಿ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಕನಿಷ್ಠ ಉಷ್ಣಾಂಶ ದಾಖಲಾಗುವುದು ಅನುಮಾನ ಎಂದು ಹವಾಮಾನ ತಜ್ಞ ಶ್ರೀನಿವಾಸ್‌ ರೆಡ್ಡಿ ಮಾಹಿತಿ ನೀಡಿದ್ದಾರೆ.

ಡಿಸೆಂಬರ್‌ನಲ್ಲಿ ನಗರದ ವಾಡಿಕೆ ಕನಿಷ್ಠ ಉಷ್ಣಾಂಶವೇ 16.2 ಡಿಗ್ರಿ ಸೆಲ್ಸಿಯಸ್‌ ಇದ್ದು, ಜನವರಿಯಲ್ಲಿ 15.8 ಡಿಗ್ರಿ ಸೆಲ್ಸಿಯಸ್‌ ಆಗಿದೆ. ಈ ವರ್ಷ ಅದಕ್ಕಿಂತಲೂ ಕಡಿಮೆ ದಾಖಲಾಗುವ ಸಾಧ್ಯತೆ ಇದೆ. ಚಳಿಯ ನಡುವೆ ಉತ್ತರ ಧಿಕ್ಕಿನಿಂದ ಗಾಳಿ ಬಿಸಿದರೆ ನಗರದ ಜನ ಕೋಲ್ಡ್‌ ವೇವ್‌ ಎದುರಿಸಬೇಕಾಗಲಿದೆ. ಆದರೆ, ಸಾಧ್ಯತೆ ತುಂಬಾ ಕಡಿಮೆ ಎಂದು ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ 1967 ನವೆಂಬರ್‌ 15 ರಂದು 9.6 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಇದು ಸಾರ್ವಕಾಲಿಕ ದಾಖಲೆಯ ಅತಿ ಕಡಿಮೆ ಕನಿಷ್ಠ ಉಷ್ಣಾಂಶವಾಗಿದೆ. ಉಳಿದಂತೆ ಕಳೆದ 12 ವರ್ಷದಲ್ಲಿ 2012ರ ನ.19ರಂದು ಅತಿ ಕಡಿಮೆ 13.3 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು ಎಂದು ಹವಾಮಾನ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.