ಜನರನ್ನು ಮೆಚ್ಚಿಸುವ ಕೆಲಸ ಮಾಡುವುದು ಕಷ್ಟ

| Published : Apr 16 2025, 12:44 AM IST

ಜನರನ್ನು ಮೆಚ್ಚಿಸುವ ಕೆಲಸ ಮಾಡುವುದು ಕಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಚಳ್ಳಕೆರೆ ತಾಲೂಕಿನ ತಳಕು ಪೊಲೀಸ್ ಠಾಣೆಯಲ್ಲಿ ಮುಖ್ಯಮಂತ್ರಿ ಪದಕ ವಿಜೇತ ಕೆ.ಶಿವಕುಮಾರವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘದ ವತಿಯಿಂದ ತಳಕು ಪಿಎಸ್‌ಐ ಕೆ.ಶಿವಕುಮಾರ್‌ರವರನ್ನು ಮಂಗಳವಾರ ಪೊಲೀಸ್ ಠಾಣೆಯಲ್ಲಿ ಆತ್ಮೀಯವಾಗಿ ಅಭಿನಂದಿಸಿ, ಸನ್ಮಾನಿಸಲಾಯಿತು.

ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಎಚ್.ತಿಪ್ಪೇಸ್ವಾಮಿ ಮಾತನಾಡಿ, ಪಿಎಸ್‌ಐ ಕೆ.ಶಿವಕುಮಾರ್ ಎರಡನೇ ಬಾರಿಗೆ ಮುಖ್ಯಮಂತ್ರಿ ಪದಕವನ್ನು ತಮ್ಮ ಉತ್ತಮ ಸೇವೆಗಾಗಿ ಪಡೆಯುತ್ತಿರುವುದು ಸಂತಸ ತಂದಿದೆ. ಪೊಲೀಸ್ ಇಲಾಖೆಯಲ್ಲಿ ಜನರನ್ನು ಮೆಚ್ಚಿಸುವ ಕೆಲಸ ಮಾಡುವುದು ಕಷ್ಟ. ಅದೇ ರೀತಿ ಸಮಾಜದಲ್ಲಿರುವ ದುಷ್ಟಶಕ್ತಿಗಳನ್ನು ನಿಯಂತ್ರಿಸುವುದು ಸಾಮಾನ್ಯದ ಮಾತಲ್ಲ. ಠಾಣೆಗೆ ಬರುವ ಎಲ್ಲಾ ವರ್ಗದ ಜನರಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯವನ್ನು ಪ್ರಶಸ್ತಿ ವಿಜೇತ ಕೆ.ಶಿವಕುಮಾರ್ ಹಲವಾರು ಬಾರಿ ಮಾಡಿದ್ದಾರೆ. ತಳಕು ಠಾಣೆಯ ಪಿಎಸ್‌ಐ ಆಗಿಯೂ ಸಹ ಈ ಭಾಗದ ಜನರ ವಿಶ್ವಾಸವನ್ನು ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಸಂಘದ ವತಿಯಿಂದ ಅವರನ್ನು ಸನ್ಮಾನಿಸಿ ಶುಭಹಾರೈಸಲಾಗಿದೆ ಎಂದರು.

ಮನ್ನೇಕೋಟೆ ಗ್ರಾಪಂ ಸದಸ್ಯೆ ಲಕ್ಷ್ಮೀದೇವಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನರ ಮನಗೆದ್ದು ಕೆಲಸ ಮಾಡುವ ಅಧಿಕಾರಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದರಲ್ಲೂ ಪೊಲೀಸ್ ಇಲಾಖೆ ದಿನದ 24 ಗಂಟೆಗಳ ಕಾಲ ಜನರ ಸಂಪರ್ಕದಲ್ಲಿರುತ್ತಾರೆ. ಎಲ್ಲಾ ಸಮಸ್ಯೆಗಳನ್ನು ಸಮಯೋಚಿತವಾಗಿ ಎದುರಿಸಿ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಕೆ.ಶಿವಕುಮಾರ್ ತಮ್ಮ ಕಾರ್ಯದ ಮೂಲಕ ಇಲಾಖೆಯ ಗೌರವವನ್ನು ಸಹ ಕಾಪಾಡಿದ್ದಾರೆ. ಗ್ರಾಮದ ಜನತೆ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಶಿವಕುಮಾರ್, 2ನೇ ಬಾರಿಗೆ ಮುಖ್ಯಮಂತ್ರಿ ಪದಕ ಬಂದಿರುವುದು ಹೆಮ್ಮೆಯಾದರೂ ಇನ್ನೂ ಹೆಚ್ಚಿನ ಕೆಲಸ ಮಾಡುವ ವಿಶ್ವಾಸ ಬಂದಿದೆ. ನನಗೆ ಮಾರ್ಗದರ್ಶನ ನೀಡಿದ ಹಿರಿಯ ಅಧಿಕಾರಿಗಳು ಸಹಕರಿಸಿದ ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗಕ್ಕೆ, ತಳಕು ವ್ಯಾಪ್ತಿಯ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ವಾಲ್ಮೀಕಿ ಸಮಾಜದ ಮುಖಂಡ ತಿಪ್ಫೇಸ್ವಾಮಿ, ಬಾಲರಾಜು, ಖಾಸಿಂ, ಓಬಣ್ಣ, ಬೋವಿಸಮಾಜದ ಮುಖಂಡ ಅಂಜಿನಪ್ಪ ಮುಂತಾದವರು ಉಪಸ್ಥಿತರಿದ್ದರು.