ಕೋಟಿಗಟ್ಟೆಲೆ ಹಣ ಪತ್ತೆ ಸ್ಯಾಂಪಲ್ ಅಷ್ಟೇ: ಈಶ್ವರಪ್ಪ
KannadaprabhaNewsNetwork | Published : Oct 17 2023, 12:45 AM IST
ಕೋಟಿಗಟ್ಟೆಲೆ ಹಣ ಪತ್ತೆ ಸ್ಯಾಂಪಲ್ ಅಷ್ಟೇ: ಈಶ್ವರಪ್ಪ
ಸಾರಾಂಶ
ಸರ್ಕಾರ ಟ್ರಾನ್ಸಫ್‌ರ್ ದಂಧೆಯಲ್ಲಿ ಮುಳುಗಿದೆ. ಮುಂದೆ ಜನರೇ ಸರ್ಕಾರದ ವಿರುದ್ಧ ಬೀದಿಗಿಳಿಯುತ್ತಾರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಕಾಂಗ್ರೆಸ್ ಸರ್ಕಾರದ ಭ್ರಷ್ಟತೆ ಬಟಾಬಯಲಾಗಿದ್ದು, ಕಾಂಗ್ರೆಸ್ ಕಾರ್ಪೊರೇಟರ್ ಮನೆಯಲ್ಲಿ ಕೋಟಿ, ಕೋಟಿ ಹಣ ಸಿಗುತ್ತಿರುವುದು ಸ್ಯಾಂಪಲ್ ಅಷ್ಟೇ, ಮುಂದೆ ನೂರಾರು ಕೋಟೆ ಹಗರಣ ಬೆಳಕಿಗೆ ಬರಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು. ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಸುಳ್ಳುಗಳನ್ನು ಹೇಳುತ್ತ ಐದು ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್‍ಗೆ ಎಟಿಎಂ ಆಗಿರುವ ರಾಜ್ಯ ಸರ್ಕಾರ ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಇಬ್ಬರೂ ಕೇಂದ್ರ ಕಾಂಗ್ರೆಸ್ ನಾಯಕರಿಗೆ ಮತ್ತು ಐದು ರಾಜ್ಯದ ಚುನಾವಣೆಗೆ ಹಣ ಹೊಂದಿಸಲು ಪೈಪೋಟಿಗೆ ಇಳಿದಿದ್ದಾರೆ ಎಂದು ಆರೋಪಿಸಿದರು. ಐದು ಗ್ಯಾರಂಟಿಗಳನ್ನು ಘೋಷಿಸಿ ನುಡಿದಂತೆ ನಡೆದಿದ್ದೇವೆ ಎಂದು ಎನ್ನುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಐದು ತಿಂಗಳಲ್ಲಿ ಎಲ್ಲ ಗ್ಯಾರಂಟಿಗಳು ಸುಳ್ಳು ಎಂದು ಜನರಿಗೆ ಮನದಟ್ಟಾಗಿದೆ. ಕರೆಂಟ್ ಇಲ್ಲ, ರೈತರಿಗೆ ನೀರಿಲ್ಲ. ಆದರೂ ಸರ್ಕಾರ ಟ್ರಾನ್ಸಫ್‌ರ್ ದಂಧೆಯಲ್ಲಿ ಮುಳುಗಿದೆ. ಮುಂದೆ ಜನರೇ ಸರ್ಕಾರದ ವಿರುದ್ಧ ಬೀದಿಗಿಳಿಯುತ್ತಾರೆ ಎಂದರು. ಕಾಂಗ್ರೆಸ್‌ನವರಿಗೆ ಅವರ ತಪ್ಪನ್ನು ಹೇಳಿದರ ತಿದ್ದಿಕೊಳ್ಳುವ ಬದಲು ಭಂಡತನದ ಮಾತುಗಳ ಆಡುತ್ತಾರೆ. ಕಾಂಗ್ರೆಸ್‍ಗೆ ಕರ್ನಾಟಕ ರಾಜ್ಯ ಎಟಿಎಂ ಆಗಿದೆ. ಮುಂಬರುವ ದಿನಗಳಲ್ಲಿ ಜೈಲು ಪಾಲಾದರೂ ತೊಂದರೆಯಿಲ್ಲ, ಬಿಜೆಪಿ ನೇತೃತ್ವದಲ್ಲಿ ಆಟೋ ಚಾಲಕರು, ಬಸ್ ಚಾಲಕರು ಮತ್ತು ಎಲ್ಲ ವರ್ಗದ ಜನರೊಂದಿಗೆ ರಸ್ತೆ ತಡೆ ನಡೆಸಿ, ಭ್ರಷ್ಟಾಚಾರದ ವಿರುದ್ಧ ಪಕ್ಷ ಹೋರಾಟ ಮಾಡಲಿದೆ ಎಂದು ಹೇಳಿದರು. ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಮೈಸೂರು ದಸರಾದ ಕಲಾವಿದರಿಗೆ ನೀಡುವ ಸಂಭಾವನೆಯಲ್ಲೇ ಲಂಚ ತಿಂದ ಸರ್ಕಾರ ಇದು. ಕಾಂಗ್ರೆಸ್ ಕೇವಲ ಒಂದು ಪಕ್ಷ ಅಲ್ಲ. ಲೂಟಿಗೆ ಮತ್ತೊಂದು ಹೆಸರೇ ಕಾಂಗ್ರೆಸ್. ಬಿಜೆಪಿ ಮೇಲೆ ಗೂಬೆ ಕೂರಿಸುತ್ತಾ ಸುಳ್ಳು ಆರೋಪಗಳನ್ನು ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ತಾನೇ ಬಲೆಗೆ ಬಿದ್ದಿದೆ. ಕೇವಲ 5 ತಿಂಗಳಲ್ಲೇ ನೂರಾರು ಕೋಟಿ ಭ್ರಷ್ಟಾಚಾರ ಮಾಡಿದ ಈ ಸರ್ಕಾರದ ವಿರುದ್ಧ ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಕೋಟಿ ಕೋಟಿ ಕೊಡುವ ಭರವಸೆ: ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಐಟಿ ದಾಳಿಯಲ್ಲಿ ಕಂತೆ ಕಂತೆ ಹಣ ಕಾಂಗ್ರೆಸ್ಸಿಗರ ಮನೆಯಲ್ಲಿ ಸಿಕ್ಕಿದೆ. ಸಿದ್ದರಾಮಯ್ಯ ಹೈಕಮಾಂಡಿಗೆ ಐದು ರಾಜ್ಯದ ಚುನಾವಣೆಗೆ ₹1 ಸಾವಿರ ಕೋಟಿ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇತ್ತ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನನಗೆ ಮುಖ್ಯಮಂತ್ರಿ ಸ್ಥಾನ ಕೊಡಿ, ನಾನು ₹2 ಸಾವಿರ ಕೋಟಿ ಸಂಗ್ರಹಿಸಿ ಕೊಡುತ್ತೇನೆ ಎಂದು ಹೈಕಮಾಂಡ್‌ಗೆ ಭರವಸೆ ನೀಡಿ, ಈಗಾಗಲೇ ಕಾರ್ಯಚರಣೆಗೆ ಇಳಿಸಿದ್ದಾರೆ ಎಂದು ಟೀಕಿಸಿದರು. ಗೃಹಲಕ್ಷ್ಮಿ ಕೇವಲ ಒಂದು ತಿಂಗಳಿಗೇ ನಿಂತಿದೆ. ತಾಯಂದಿರ ಖಾತೆಗೆ ಹಣ ಇನ್ನೂ ಬಂದಿಲ್ಲ. ಎಲ್ಲ ವಿಭಾಗಗಳಲ್ಲೂ ಎತ್ತುವಳಿ ಪ್ರಾರಂಭಿಸಿದ್ದಾರೆ. ಎಂಪಿ ಚುನಾವಣೆವರೆಗೆ ಗ್ಯಾರಂಟಿ ನೀಡೋಣ ಎಂದು ಪ್ಲ್ಯಾನ್ ಮಾಡಿದ್ದರು. ಆದರೆ, ಅಷ್ಟರಲ್ಲೇ ಈ ಸರ್ಕಾರ ಬೀಳಲಿದೆ. ಕಾಂಗ್ರೆಸ್ ಶಾಸಕರೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮೇಲೆ ನೇರ ಆರೋಪ ಮಾಡುತ್ತಿದ್ದಾರೆ. ಈ ಸರ್ಕಾರ ಭ್ರಷ್ಟ ಸರ್ಕಾರ ಎಂಬುದು ಸಾಬೀತಾಗಿದೆ ಎಂದು ದೂರಿದರು. ಈ ಸಂದರ್ಭ ಮೇಯರ್ ಶಿವಕುಮಾರ್, ನಗರಾಧ್ಯಕ್ಷ ಜಗದೀಶ್, ಎಸ್.ಎಸ್. ಜ್ಯೋತಿಪ್ರಕಾಶ್, ತಮ್ಮಡಿಹಳ್ಳಿ ನಾಗರಾಜ್, ರತ್ನಾಕರ ಶೆಣೈ, ಶಂಕರ್ ಗನ್ನಿ, ಸುರೇಖಾ ಮುರಳೀಧರ್, ರಶ್ಮಿ, ಅನಿತಾ ರವಿಶಂಕರ್, ಅಣ್ಣಪ್ಪ ಮತ್ತಿತರರಿದ್ದರು. - - - -16ಎಸ್‌ಎಂಜಿಕೆಪಿ02: ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿ ಸೋಮವಾರ ರಾಜ್ಯ ಸರ್ಕಾರ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿದರು.