ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ವೃಕ್ಷಮಾತೆ ಎಂದೇ ಮನೆಮಾತಾಗಿದ್ದ ಸಾಲುಮರದ ತಿಮ್ಮಕ್ಕ ಅವರ ನಿಧನದಿಂದ ಕನ್ನಡ ನಾಡು ಪರಿಸರ ರಾಯಭಾರಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಶ್ರವಣಬೆಳಗೊಳ ಶ್ರೀ ದಿಗಂಬರ ಜೈನ ಮಹಾಸಂಸ್ಥಾನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಸಂತಾಪ ಸೂಚಿಸಿದ್ದಾರೆ.ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರು ಮಕ್ಕಳಿಲ್ಲದ ಕಾರಣಕ್ಕೆ ಸಸಿಗಳನ್ನೇ ಮಕ್ಕಳಂತೆ ಬೆಳೆಸಿ, ೩೮೫ ಆಲದ ಮರಗಳು ಸೇರಿದಂತೆ ೮,೦೦೦ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ವೃಕ್ಷಮಾತೆಯನ್ನು ಕಳೆದುಕೊಂಡು ಪರಿಸರ ಲೋಕ ಅನಾಥವಾಗಿದೆ. ಗ್ರಾಮಾಂತರ ಪ್ರದೇಶದ ತಿಮ್ಮಕ್ಕನವರು ಗಿಡಮರಗಳನ್ನು ಮಕ್ಕಳೆಂದು ಭಾವಿಸಿ, ನೀರು ಎರೆದು ಅವುಗಳನ್ನು ಪೋಷಿಸಿ ಸಾವಿರಾರು ಮರಗಳನ್ನು ಬೆಳೆಸುವ ಮುಖೇನ ವಿಶ್ವಕ್ಕೆ ಮಾದರಿಯಾಗಿದ್ದರು. ಯಾವುದೇ ಸ್ವಾರ್ಥ, ಫಲಾಪೇಕ್ಷೆಯಿಲ್ಲದೆ ಪರಿಸರ ಮತ್ತು ಜೀವಸಂಕುಲವನ್ನು ಸಂರಕ್ಷಿಸಿದ ಮಾತೆ ಸಾಲುಮರದ ತಿಮ್ಮಕ್ಕನವರ ಕೊಡುಗೆ ಅವಿಸ್ಮರಣೀಯ. ಅವರ ಅಗಲಿಕೆಯು ನಾಡಿಗೆ ಮತ್ತು ಪರಿಸರ ಲೋಕಕ್ಕೆ ತುಂಬಲಾಗದ ನಷ್ಟವಾಗಿದೆ.
ತಿಮ್ಮಕ್ಕನವರು ಮಾಗಡಿ ತಾಲೂಕಿನಲ್ಲಿ ೪.೫ ಕಿ.ಮೀ. ಉದ್ದಕ್ಕೂ ೩೮೫ ಆಲದ ಮರಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಪ್ರೇಮವನ್ನು ಮೆರೆದಿದ್ದಾರೆ. ಅಕ್ಷರಸ್ಥರಲ್ಲದಿದ್ದರೂ, ಪರಿಸರ ಸಂರಕ್ಷಣೆಯಲ್ಲಿ ಅವರು ಮಾಡಿದ ಸಾಧನೆ ಎಲ್ಲರಿಗೂ ಮಾದರಿಯಾಗಿದೆ.ಸಾವಿರಾರು ಗಿಡಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ಸಲಹಿದ ತಿಮ್ಮಕ್ಕನವರು ತಮ್ಮ ಬಹುಪಾಲು ಜೀವಿತ ಕಾಲವನ್ನು ಪರಿಸರ ಸಂರಕ್ಷಣೆಗಾಗಿ ಮುಡಿಪಾಗಿಟ್ಟವರು. ಇಂದು ತಿಮ್ಮಕ್ಕನವರು ನಮ್ಮನ್ನು ಅಗಲಿದರೂ ಅವರ ಪರಿಸರ ಪ್ರೇಮ ಅವರನ್ನು ಚಿರಸ್ಥಾಯಿಯಾಗಿಸಿದೆ. ಅವರ ಈ ಅಪೂರ್ವ ಸೇವೆಗೆ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಗೌರವಗಳು ಸಂದಿವೆ. ಅವರ ಈ ಮಹತ್ತರ ಕಾರ್ಯವನ್ನು ಗುರುತಿಸಿ ೨೦೧೯ರಲ್ಲಿ ಭಾರತ ಸರ್ಕಾರವು ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ೧೯೯೫ರಲ್ಲಿ ಅವರಿಗೆ ರಾಷ್ಟ್ರೀಯ ನಾಗರಿಕ ಪ್ರಶಸ್ತಿ ಸಹ ಲಭಿಸಿತು. ಅಮೇರಿಕಾದ ಲಾಸ್ ಏಂಜಲೀಸ್ ಮತ್ತು ಓಕ್‌ಲ್ಯಾಂಡ್‌ನಲ್ಲಿರುವ ಪರಿಸರ ಶಿಕ್ಷಣ ಸಂಸ್ಥೆಗೆ ಅವರ ಹೆಸರಿಡಲಾಗಿದೆ. ಇದು ಅವರ ಅಂತಾರಾಷ್ಟ್ರೀಯ ಮಟ್ಟದ ಗುರುತಿಸುವಿಕೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.
ಇದಲ್ಲದೆ ವೃಕ್ಷಮಿತ್ರ ಪ್ರಶಸ್ತಿ, ವೀರಚಕ್ರ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಗಾಡ್‌ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಅವರ ಸಾಧನೆಗೆ ಸಂದಿವೆ. ಕರ್ನಾಟಕ ಸರ್ಕಾರವು ಅವರನ್ನು "ಪರಿಸರ ರಾಯಭಾರಿ " ಎಂದು ಘೋಷಿಸಿ, ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿ ಗೌರವಿಸಿತ್ತು.ಪರಿಸರಕ್ಕಾಗಿ ತಮ್ಮ ಇಡೀ ಬದುಕನ್ನೇ ಮುಡಿಪಿಟ್ಟು ಪ್ರಕೃತಿಗಾಗಿಯೇ ಬದುಕಿ ಬಾಳಿದ ಸಾಲುಮರದ ತಿಮ್ಮಕ್ಕ ಅವರು ನಾಡಿಗೆ ನೀಡಿರುವ ಕೊಡುಗೆ ಅಜರಾಮರ. ತಿಮ್ಮಕ್ಕನವರ ಜೀವನ ಹಾಗೂ ಅವರ ಪರಿಸರ ಪ್ರೇಮವು ಸಮಾಜಕ್ಕೆ, ಯುವ ಸಮುದಾಯಕ್ಕೆ ಹಾಗೂ ಸಮಸ್ತ ಮಾನವ ಕುಲಕ್ಕೆ ಪ್ರೇರಣೆಯಾಗಲಿ. ಅಗಲಿದ ಮಹಾಚೇತನಕ್ಕೆ ಭಗವಂತ ಚಿರಶಾಂತಿ ದೊರಕಿಸಿ, ಅವರ ಕುಟುಂಬವರ್ಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯವರಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))