ಕೆಡಿಪಿ ಸಭೆ ಇರುವುದು ಕ್ಷೇತ್ರದ ಅಭಿವೃದ್ಧಿಗೆ, ಅತಿವೃಷ್ಠಿ, ಬಿಎಸ್‌ಎಸ್‌ಕೆ ಕಾರ್ಖಾನೆ ಪ್ರಾರಂಭ ಸೇರಿದಂತೆ ರೈತರ ಅನೇಕ ವಿಷಯಗಳ ಕುರಿತು ಚರ್ಚೆ ಮಾಡಲು ಅದನ್ನು ಬಿಟ್ಟು ಶಾಸಕರು ಬೀದರ್‌ನ ಗುರುದ್ವಾರದ ಜಮೀನಿನ ಬಗ್ಗೆ ಚರ್ಚೆ ಶುರು ಮಾಡಿ, ಎಂಎಲ್‌ಸಿ ಭೀಮರಾವ್‌ ‍ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಹೀಗಾಗಿ ಗಲಾಟೆ ಆಯಿತು ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಕೆಡಿಪಿ ಸಭೆ ಇರುವುದು ಕ್ಷೇತ್ರದ ಅಭಿವೃದ್ಧಿಗೆ, ಅತಿವೃಷ್ಠಿ, ಬಿಎಸ್‌ಎಸ್‌ಕೆ ಕಾರ್ಖಾನೆ ಪ್ರಾರಂಭ ಸೇರಿದಂತೆ ರೈತರ ಅನೇಕ ವಿಷಯಗಳ ಕುರಿತು ಚರ್ಚೆ ಮಾಡಲು ಅದನ್ನು ಬಿಟ್ಟು ಶಾಸಕರು ಬೀದರ್‌ನ ಗುರುದ್ವಾರದ ಜಮೀನಿನ ಬಗ್ಗೆ ಚರ್ಚೆ ಶುರು ಮಾಡಿ, ಎಂಎಲ್‌ಸಿ ಭೀಮರಾವ್‌ ‍ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಹೀಗಾಗಿ ಗಲಾಟೆ ಆಯಿತು ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್‌ ತಿಳಿಸಿದರು.ಮಾಜಿ ಸಚಿವ ರಾಜಶೇಖರ ಪಾಟೀಲ್‌ ಅವರ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತನ್ನ ತಾಟಿನಲ್ಲೆ ಹೆಗ್ಗಣ ಬಿದ್ದಿದೆ ಅದನ್ನು ನೋಡೋದು ಬಿಟ್ಟು ಬೀದರ್‌ ನಗರದ ವಿಷಯ ಕುರಿತು ಚರ್ಚೆ ಯಾಕೆ ಬೇಕು? ಎಂದರಲ್ಲದೆ ಸಚಿವ ಈಶ್ವರ ಖಂಡ್ರೆ ಅವರೂ ಸಹ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರೂ ಗಲಾಟೆ ಮಾಡಿದರು.

ಯಾವುದೇ ವಿಷಯ ಚರ್ಚೆ ಮಾಡುವ ಮುನ್ನ ಶಾಸಕರು ವಿಷಯಗಳ ಕುರಿತು ಅಭ್ಯಸಿಸಿಕೊಂಡು ಬರಬೇಕು, ಆದರೆ ಶಾಸಕರು ಕ್ಷೇತ್ರ ಅಭಿವೃದ್ಧಿಯ ಹೆಸರಿನಲ್ಲಿ ಹೇಳುವುದೊಂದು ಮಾಡುವುದೊಂದು ಹೀಗೆಯೇ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡು ನೋಡಿದ ಎಂಬ ಗಾದೆ ಶಾಸಕ ಡಾ.ಸಿದ್ದು ಪಾಟೀಲ್‌ ಅವರಿಗೆ ಅನ್ವಯಿಸುತ್ತದೆ ಎಂದು ಆರೋಪಿಸಿದರು.ಕೈಗಾರಿಕಾ ಕಾರ್ಖಾನೆಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ, ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಯರಬಾಗ ಗ್ರಾಮದ ರಸ್ತೆ ಕಳಪೆ ಮಾಡಿದ್ದು, ಈ ಕುರಿತು ಉನ್ನತ ಮಟ್ಟದ ಅಧಿಕಾರಿಗಳು ಆಗಮಿಸಿ ತನಿಖೆ ಕೈಗೊಂಡು ವರದಿ ನೀಡಿದ್ದಾರೆ. ಆದರೆ ಇವರು ಉಸುಕು (ರೇತಿ) ಲಾರಿಯಿಂದ ರಸ್ತೆ ಹದಗೆಟ್ಟಿದೆ ಎಂದು ಅಧಿಕಾರಿಗಳ ಹಾಗೂ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಶಾಸಕ ಡಾ. ಸಿದ್ದು ಪಾಟೀಲ್‌ ವಿರುದ್ಧ ಆರೋಪಿಸಿದರು.ಹುಮನಾಬಾದ್‌ ಮತಕ್ಷೇತ್ರದಲ್ಲಿ ಶಾಸಕರಿಂದ ಸಂಪೂರ್ಣವಾಗಿ ಅನಧಿಕೃತ ಕೆಲಸ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಜನರು ಯಾರು ತಪ್ಪಿತಸ್ಥರು ಎನ್ನುವ ಕುರಿತು ಚೆನ್ನಾಗಿ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.ವಿಧಾನ ಪರಿಷತ್‌ ಸದಸ್ಯ ಭೀಮರಾವ್‌ ಪಾಟೀಲ್‌ ಮಾತನಾಡಿ, ಕ್ಷೇತ್ರದ ಮತದಾರರು ತಪ್ಪು ದಾರಿ ಕಡೆಗೆ ಹೋಗಬೇಡಿ. ತಾವೆಲ್ಲ ನಮ್ಮೊಂದಿಗೆ ಬನ್ನಿ. ಹುಮನಾಬಾದ್‌ ಮತಕ್ಷೇತ್ರದಲ್ಲಿ ಶಾಂತಿಯನ್ನು ಕಾಪಾಡೋಣ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು. ಜಿ.ಪಂ. ಮಾಜಿ ಸದಸ್ಯ ವೀರಣ್ಣ ಪಾಟೀಲ್‌, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಅಫ್ಸರಮಿಯ್ಯಾ ಹಾಗೂ ಓಂಕಾರ ತುಂಬಾ ಇದ್ದರು.