ಚಿತ್ರದುರ್ಗ ಬಿ.ಡಿ ರಸ್ತೆಯಲ್ಲಿ ಪಾದಾಚಾರಿ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದ್ದು ಜನತೆ ಕಾರು, ಬೈಕುಗಳ ನಡುವೆ ಜೀವ ಕೈಲಿಡಿದು ಓಡಾಡಾವಂತಾಗಿದೆ.
ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಚಿತ್ರದುರ್ಗ ನಗರದಲ್ಲಿ ಅವೈಜ್ಞಾನಿಕ ಡಿವೈಡರ್ ನಿರ್ಮಿಸಿ ಪಾದಾಚಾರಿಗಳ ಓಡಾಟ ಹಾಗೂ ಸುಗಮ ಸಂಚಾರಕ್ಕೆ ಧಕ್ಕೆ ತಂದ ಅಧಿಕಾರಿ ವಲಯದ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವ ಅವಕಾಶವೊಂದನ್ನು ಸುಪ್ರಿಂ ಕೋರ್ಟ್ ಮುಕ್ತವಾಗಿರಿಸಿದೆ.
ಮೂರು ವರ್ಷಗಳ ಹಿಂದೆ ಕನ್ನಡಪ್ರಭ 52 ಸರಣಿ ವರದಿಗಳ ಮೂಲಕ ಇಡೀ ಚಿತ್ರದುರ್ಗ ಸಂಚಾರಿ ವ್ಯವಸ್ಥೆಗೆ ಆಗಿರುವ ಧಕ್ಕೆಯ ವಿವಿಧ ಮಜಲುಗಳ ಅನಾವರಣಗೊಳಿಸಿತ್ತು. ಸುಪ್ರಿಂ ಕೋರ್ಟ್ ಸಮಿತಿಯ ಸೂಚನೆಗಳ ಅಧಿಕಾರಿ ವರ್ಗ ಕ್ಯಾರೇ ಅನ್ನದೇ ಇರುವುದರ ಬಗ್ಗೆ ಎಚ್ಚರಿಸಿತ್ತು. ಅಧಿಕಾರಿಗಳು ಜೈಲಿಗೆ ಹೋಗಲು ರೆಡಿ ಇದ್ದಾರಾ ಎಂಬುದ ಪ್ರಶ್ನಿಸಿತ್ತು.ನಿನ್ನೆಯಷ್ಟೇ ಅಂದರೆ ಆಗಸ್ಟ್ 3ರ ಸೋಮವಾರ ಮಹತ್ವದ ತೀರ್ಪು ನೀಡಿರುವ ಸುಪ್ರಿಂಕೋರ್ಟ್ ಸುರಕ್ಷಿತ ನಡಿಗೆ ಜೀವಿಸುವ ಹಕ್ಕಿನ ಭಾಗವೆಂದು ಹೇಳಿದೆ. ಪಾದಚಾರಿ ರಸ್ತೆ ಗುರುತಿಸುವುದು, ನಿರ್ವಹಣೆ, ರಕ್ಷಣೆ, ಪಾದಾಚಾರಿಗೆ ಸಂಬಂಧಿಸಿದ ಮೂಲ ಸೌಕರ್ಯ ಒದಗಿಸುವುದು ಸ್ಥಳೀಯ ಸಂಸ್ಥೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಕರ್ತವ್ಯವೆಂದು ನೆನಪಿಸಿದೆ. ಪಾದಚಾರಿ ಮಾರ್ಗ ಅತಿಕ್ರಮಣ ಆಗಬಾರದು. ಪಾದಚಾರಿಗಳು ಸಂಚರಿಸುವ ಮಾರ್ಗದಲ್ಲಿ ವಾಹನಗಳು ಬರಬಾರದು ಎಂದು ಎಚ್ಚರಿಸಿದೆ.
ಇಡೀ ಚಿತ್ರದುರ್ಗ ನಗರದಲ್ಲಿ ಎಲ್ಲಿಯೂ ಕೂಡಾ ಪಾದಚಾರಿಗಳು ಓಡಾಡಲು ರಸ್ತೆಗಳೇ ಇಲ್ಲ. ಯಾವುದೇ ರಸ್ತೆ ಮಾಡುವಾಗ ಅಂಚಿನಲ್ಲಿ ಚರಂಡಿ ನಂತರ ಪಾದಾಚಾರಿ ಮಾರ್ಗ ಸೃಷ್ಟಿಸಬೇಕೆಂದಿದೆ. ಚಿತ್ರದುರ್ಗದ ಬಿ.ಡಿ.ರಸ್ತೆ, ಜೆಸಿಆರ್ ಹೊಳಲ್ಕೆರೆ ರಸ್ತೆ, ಮೆದೆಹಳ್ಳಿ ರಸ್ತೆ ಎಲ್ಲಿಯೂ ಕೂಡಾ ಪಾದಾಚಾರಿ (ಪುಟ್‌ಪಾತ್) ರಸ್ತೆಗಳೇ ಇಲ್ಲ.ರಸ್ತೆ ಅಂಚಿನಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದ್ದು ಜನತೆ ಜೀವ ಕೈಲಿಡಿದು ಸಂಚರಿಸಬೇಕಾಗಿದೆ. ಹೊಳಲ್ಕೆರೆ ರಸ್ತೆಯಲ್ಲಿ ಚರಂಡಿ ಮೇಲೆ ಚಪ್ಪಡಿ ಕಲ್ಲುಗಳ ಹಾಕಿ ಅದರ ಮೇಲೆ ಕಾಂಕ್ರಿಟ್ ಎಳೆದು ರಸ್ತೆ ಮಾಡಲಾಗಿದೆ. ರಸ್ತೆಗಳ ನಿರ್ಮಿಸುವಾಗ ಪಾದಚಾರಿಗಳಿಗೆ ಅಗತ್ಯವಾದ ಮೂಲ ಸೌಕರ್ಯದ ಕಡೆ ಗಮನ ಹರಿಸಲಾಗಿಲ್ಲ. ಮಳೆ ಬಂದರೆ ಇಡೀ ನೀರು ಗಾಂಧಿ ವೃತ್ತವ ಸುತ್ತುವರಿದು ಪ್ರವಾಹ ಮಾದರಿಗಳ ಸೃಷ್ಟಿಸುತ್ತದೆ. ರಸ್ತೆ ಬದಿ ಸಂಚರಿಸುವವರ ಮೈಮೇಲೆ ಕೊಳಚೆ ನೀರು ಸಿಂಪರಣೆಯಾಗುತ್ತದೆ. ಅಷ್ಟರ ಮಟ್ಟಿಗೆ ರಸ್ತೆಗಳ ನಿರ್ಮಿಸಿ ನಡೆದಾಡುವ ಹಕ್ಕನ್ನು ಕಸಿದುಕೊಳ್ಲಲಾಗಿದೆ.
ಪ್ರಾದೇಶಿಕ ಸಾರಿಗೆ ಕಚೇರಿ ಮುಂಭಾಗ ಡಿವೈಡರ್ ನಿರ್ಮಿಸಿ ಪಾದಾಚಾರಿಗಳಿಗೆ ಧಕ್ಕೆಯನ್ನುಂಟು ಮಾಡಲಾಗಿದೆ. ಇಂಡಿಯನ್ ರೋಡ್ ಕಾಂಗ್ರೆಸ್‌ನ ನಿಯಮಾವಳಿಗಳ ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಮೋಟಾರು ವಾಹನಗಳ ಕಾಯಿದೆ 197ಎ ಅಡಿ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡಿದರೆ ಲಕ್ಷ ರುಪಾಯಿರೆಗೆ ದಂಡವಿಧಿಸುವ ಅವಕಾಶಗಳಿದ್ದು ಎಲ್ಲಿಯೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕರ್ತವ್ಯ ಪ್ರಜ್ಞೆ ಮೆರೆದಿಲ್ಲ.ಪಾದಾಚಾರಿಗಳ ಹಕ್ಕು ಕಸಿದರೆ ಮೋಟಾರು ವಾಹನ ಕಾಯಿದೆ ಅಡಿಯಲ್ಲಿಯೂ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಸುಪ್ರಿಂ ಅಭಿಪ್ರಾಯಪಟ್ಟಿದೆ. ನಗರ ಸ್ಥಳೀಯ ಸಂಸ್ಥೆಗಳ ವಿರುದ್ಧ ನಾಗರಿಕರು ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಸ್ಪಷ್ಟವಾಗಿ ತಿಳಿಸಿದೆ.
ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತಾ ಸಮಿತಿಗಳಿವೆ. ರಸ್ತೆ ನಿರ್ಮಿಸಲು ಅನುದಾನ ವ್ಯಯ ಮಾಡಿದವರು, ಎಂಜಿನಿಯರ್‌ಗಳು, ನಗರಸಭೆ ಪೌರಾಯುಕ್ತರು ಎಲ್ಲರೂ ಕೂಡಾ ಪಾದಾಚಾರಿಗಳ ಹಕ್ಕು ಕಸಿದವರ ಪಟ್ಟಿಯಲ್ಲಿ ಬರುತ್ತಾರೆ.