ರಾಜಕೀಯ ಚುನಾವಣೆಯಲ್ಲಿ ಮಾತ್ರ ಮಾಡಬೇಕು. ಉಳಿದ ವೇಳೆ ಜನಪರವಾದ ಕೆಲಸ ಮಾಡಿ ತೋರಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟು ಕೂಡಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ದಿ ವೇಗವಾಗಿ ಸಾಗಲು ಸಾಧ್ಯ.

ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿಕೆ । ಬೂದಿಕೋಟೆ ವೃತ್ತದ ಬಳಿ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ರೈಲ್ವೆ ಇಲಾಖೆಯಲ್ಲಿನ ವೇಗದ ಕಾಮಗಾರಿಗಳನ್ನು ಕಳೆದ 50 ವರ್ಷಗಳಿಂದ ಯುಪಿಯ ಸರ್ಕಾರ ಮಾಡಲಾಗದ ಕೆಲಸವನ್ನು ಕೇವಲ 12 ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ಮಾಡಿ ತೋರಿಸಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಬೂದಿಕೋಟೆ ವೃತ್ತದ ಬಳಿ ಸುಮಾರು 30 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಯಾವುದೇ ಕೆಲಸ ಮಾಡಲು ಇಚ್ಚಾಶಕ್ತಿ ಬೇಕಾಗುತ್ತದೆ, ಅದು ಜನಪ್ರತಿನಿಧಿಗಳಿಗೆ ಅಗತ್ಯ. ರಾಜಕೀಯ ಚುನಾವಣೆಯಲ್ಲಿ ಮಾತ್ರ ಮಾಡಬೇಕು. ಉಳಿದ ವೇಳೆ ಜನಪರವಾದ ಕೆಲಸ ಮಾಡಿ ತೋರಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟು ಕೂಡಿ ಕೆಲಸ ಮಾಡಿದರೆ ಮಾತ್ರ ಅಭಿವೃದ್ದಿ ವೇಗವಾಗಿ ಸಾಗಲು ಸಾಧ್ಯ. ಆದರೆ ಇಂದಿನ ಸಮಾರಂಭಕ್ಕೆ ಸ್ಥಳೀಯ ಶಾಸಕರು ಗೈರು ಹಾಜರಾಗುವ ಮೂಲಕ ರಾಜಕಾರಣ ಮಾಡಿದ್ದಾರೆ ಇದು ಸರಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅಲ್ಲದೆ ದೇಶದಲ್ಲಿ ಎಲ್ಲಾ ಕಡೆ ಅಗತ್ಯವಿರುವ ಕಡೆ ಅಂಡರ್ ಪಾಸ್ ಹಾಗೂ ಮೇಲ್ಸೇತುವೆಗಳನ್ನು ಮುಗಿಸಿ ಜನರು ಮುಕ್ತವಾಗಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಪ್ರಧಾನಿಗಳ ಗುರಿಯಾಗಿದೆ. ಕೋಲಾರ ಜಿಲ್ಲೆಯಲ್ಲಿ ಅಗತ್ಯವಿರುವ ಕಡೆ ಕೆಲ ಸೇತುವೆ, ಮೇಲ್ಸೇತುವೆಗಳನ್ನು ತ್ವರಿತವಾಗಿ ಮುಗಿಸಲಾಗುವುದು ಅದರಂತೆ ಕಾಮಸಮುದ್ರ ಬಳಿ ಸಹ ಮೇಲ್ಸೇತವೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಯಾವುದೇ ಕಾಮಗಾರಿಯನ್ನು ನಾವು ಆರಂಭಿಸಿ ಅವಧಿಯಲ್ಲೆ ಪೂರ್ಣಗೊಳಿಸಬೇಕು ಎಂಬುದು ಕೇಂದ್ರದ ಗುರಿಯಾಗಿದೆ. ಕೋಲಾರದಿಂದ ವೈಟ್‌ಪೀಲ್ಡ್‌ ವರೆಗೂ ಹೊಸ ರೈಲ್ವೆ ಮಾರ್ಗ ಕಲ್ಪಿಸಬೇಕೆಂದು ಈ ಭಾಗದ ಜನರ ಬೇಡಿಕೆಯಾಗಿದೆ, ಬೂಸ್ವಾಧೀನ ಮಾಡಿಕೊಟ್ಟರೆ ಅದಕ್ಕೆ ಪರಿಹಾರ ನಾವೇ ಕೊಟ್ಟು ಕಾಮಗಾರಿ ಆರಂಭಿಸಲು ಕೇಂದ್ರ ಸಿದ್ದವಾಗಿದೆ ಎಂದರು.

ಈ ಹಿಂದೆ ರೈಲ್ವೆ ಸ್ಟೇಷನ್‌ಗಳನ್ನು ನೋಡಿದರೆ ವಾಕರಿಕೆ ಬರುವಂತಾಗಿತ್ತು, ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸದೆ ಕಡೆಗಣಿಸಲಾಗಿತ್ತು, ಆದರೆ ಯುಪಿಎ ಸರ್ಕಾರದಲ್ಲಿ ರೈಲ್ವೆ ಸ್ಟೇಷನ್‌ಗಳಿಗೆ ಹೊಸ ರೂಪ ನೀಡಲಾಗಿದೆ, ನಗರದ ನಿಲ್ದಾಣವನ್ನು 22 ಕೋಟಿ ವೆಚ್ಚದಲ್ಲಿ ಆಧುನಿಕ ಸ್ಪರ್ಶ ನೀಡಲಾಗಿದೆ. ರೈಲ್ವೆ ಇಲಾಖೆಗೆ 3 ಲಕ್ಷ ಕೋಟಿ ಅನುದಾನ ನೀಡಲಾಗಿದೆ ಅದರಲ್ಲಿ ರಾಜ್ಯಕ್ಕೆ 65 ಸಾವಿರ ಕೋಟಿಯನ್ನು ಪ್ರಧಾನಿ ಮೋದಿ ನೀಡಿದ್ದಾರೆ ಎಂದರು.

ಶ್ರೀನಿವಾರಪುರದಲ್ಲಿ ಈ ಹಿಂದೆ ರೈಲ್ವೆ ಸಚಿವರಾಗಿದ್ದ ಕೆ.ಎಚ್‌. ಮುನಿಯಪ್ಪ ರೈಲ್ವೆ ಕೋಚ್‌ ನಿರ್ಮಾಣ ಘಟಕ್ಕೆ ಚಾಲನೆ ನೀಡಿದ್ದರು. ಆದರೆ ಅದಕ್ಕೆ ಸ್ಥಳವಿಲ್ಲದ ಕಾರಣ ಆ ಯೋಜನೆ ಇಲಾಖೆ ಮುಂದಿಲ್ಲ. ಸ್ಥಳ ನೀಡಿದರೆ ಮಾಡಲಾಗುವುದು ಎಂದರು.

ಸಂಸದ ಎಂ.ಮಲ್ಲೇಶಬಾಬು ಮಾತನಾಡಿ, ಪ್ರಧಾನಿ ಮೋದಿ ಆಡಳಿತದಲ್ಲಿ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಕಾಣಲಾಗುತ್ತಿದೆ, ಅದರಂತೆ ರೈಲ್ವೆ ಇಲಾಖೆಯಲ್ಲಿ ಸಹ 12 ವರ್ಷಗಳಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ, ಬೇಡಿಕೆ ಇಟ್ಟತಕ್ಷಣ ಅನುಮೋದನೆ ಮಾಡಲಾಗುತ್ತಿದೆ, ಅದರಂತೆ ಕಾಮಸಮುದ್ರ ಬಳಿ ಸಹ ಮೇಲ್ಸೇತುವೆ ತ್ವರಿತವಾಗಿ ಮಾಡಬೇಕು ಹಾಗೂ ಕೆಜಿಎಫ್‌ನ ಉರಿಗಾಂ, ಎಸ್‌ಎನ್‌ ರೆಸಾಟ್‌ರ್ ಬಳಿ, ಕೋಲಾರದ ಬಳಿ ಮೇಲ್ಸೇತುವೆಗಳ ನಿರ್ಮಾಣಕ್ಕೆ ಟೆಂಡರ್ ಹಂತದಲ್ಲಿದೆ 3 ತಿಂಗೊಳಗೆ ಮತ್ತೆ ರೈಲ್ವೆ ಸಚಿವ ಸೋಮಣ್ಣನವೇ ಬಂದು ಗುದ್ದಲಿ ಪೂಜೆ ಮಾಡುವರು ಎಂದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್, ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್, ತಹಸಿಲ್ದಾರ್ ಸುಜಾತ, ಮುಖಂಡರಾದ ಹನುಮಂತು, ಮಂಜುನಾಥ್, ಸತೀಶ್ ಗೌಡ, ಬಾಲಚಂದ್ರ ಇದ್ದರು.