ಹೆಣ್ಣಿನ ಅಸ್ತಿತ್ವವನ್ನು ಜಗತ್ತಿಗೆ ತೋರಿಸಿದ್ದು ಅಕ್ಕಮಹಾದೇವಿ: ಪರಮೇಶ್ವರಯ್ಯ

| Published : Feb 04 2024, 01:31 AM IST

ಹೆಣ್ಣಿನ ಅಸ್ತಿತ್ವವನ್ನು ಜಗತ್ತಿಗೆ ತೋರಿಸಿದ್ದು ಅಕ್ಕಮಹಾದೇವಿ: ಪರಮೇಶ್ವರಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹೆಣ್ಣಿಗೆ ಅಸ್ತಿತ್ವವಿದೆ, ಮನಸ್ಸಿದೆ, ಶಕ್ತಿಯಿದೆ, ವಿಚಾರ ಸ್ವಾತಂತ್ರ್ಯವಿದೆ ಎಂಬುದನ್ನು ಜಗತ್ತಿಗೆ ಮೊದಲು ತೋರಿಸಿಕೊಟ್ಟವಳೇ ಹನ್ನೆರಡನೇ ಶತಮಾನದ ಶಿವಶರಣೆ ಅಕ್ಕಮಹಾದೇವಿ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಹೆಣ್ಣನ್ನು ಪುರುಷನ ಆಸ್ತಿ, ಸ್ವತ್ತು ಎಂಬಂತೆ ಸ್ವಾರ್ಥಕ್ಕೆ ಸಮಾಜ ನಡೆಸಿಕೊಳ್ಳುತ್ತಿದ್ದ ಕಾಲಘಟ್ಟದಲ್ಲಿ ಅವಳಿಗೊಂದು ಅಸ್ತಿತ್ವವಿದೆ, ಮನಸ್ಸಿದೆ, ಶಕ್ತಿಯಿದೆ, ವಿಚಾರ ಸ್ವಾತಂತ್ರ್ಯವಿದೆ ಎಂಬುದನ್ನು ಜಗತ್ತಿಗೆ ಮೊದಲು ತೋರಿಸಿಕೊಟ್ಟವಳೇ ಹನ್ನೆರಡನೇ ಶತಮಾನದ ಶಿವಶರಣೆ ಅಕ್ಕಮಹಾದೇವಿ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ತಿಳಿಸಿದರು.

ನಗರದ ಜಯದೇವ ಹಾಸ್ಟೆಲ್‌ನಲ್ಲಿ ಅಕ್ಕಮಹಾದೇವಿ ಸಮಾಜದ ವತಿಯಿಂದ ನಡೆದ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಹನ್ನೆರಡನೆ ಶತಮಾನದ ಶರಣರು ಮಹಿಳೆಯರಿಗೆ ಸಮಾನ ಅವಕಾಶ ಸ್ವಾವಲಂಬನೆಯನ್ನು ಕಲ್ಪಿಸಿದ್ದರು. ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಪ್ರಾಧಾನ್ಯತೆಯನ್ನು ಕೊಟ್ಟರು. ಅಕ್ಕಿ ಆಯ್ದು ತರುವ ಕಾಯಕ ಲಕ್ಕವ್ವನದು, ಕಟ್ಟಿಗೆ ತರುವ ಕಾಯಕ ಮೋಳಿ ಮಹಾದೇವಿಯದು, ನೂಲು ತೆಗೆಯುವ ಕಾಯಕ ರೆಮ್ಮವ್ವೆಯದು ಹೀಗೆ ಹಲವಾರು ಶರಣೆಯರು ಆಧ್ಯಾತ್ಮ ಬದುಕಿಗೆ ಕಾಯಕವೆನ್ನುವುದು ಮೂಲಭೂತ ಅರ್ಹತೆ ಎಂದು ಭಾವಿಸಿ ಕಾಯಕ ಜೀವಿಗಳಾಗುವ ಜೊತೆಗೆ ಆರ್ಥಿಕ ಸ್ವಾವಲಂಬಿಗಳಾದರು ಎಂದರು.

ಶರಣರು ಇಷ್ಟಲಿಂಗವನ್ನ ಶರಣೆಯರಿಗೂ ನೀಡುವ ಮೂಲಕ ಧಾರ್ಮಿಕ ಹಕ್ಕು ದೊರಕಿಸಿದರು. ಹೆಣ್ಣು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯಾ ಎಂದು ಅಲಮಪ್ರಭು ಹೇಳಿದರೆ, ಶಿವಯೋಗಿ ಸಿದ್ದರಾಮರು ಹೆಣ್ಣು ರಕ್ಕಸಿಯಲ್ಲ ಹೆಣ್ಣು ಸಾಕ್ಷತ್ ಕಪಿಲಸಿದ್ದ ಮಲ್ಲಿಕಾರ್ಜುನ ಎಂದು ನುಡಿದು ಅವಳನ್ನ ದೈವತ್ವಕ್ಕೆ ಏರಿಸಿದರು. ಶರಣರು ಎಲ್ಲರನ್ನು ಹುಟ್ಟಿನಿಂದ ಸಮಾನರು, ಆತ್ಮಕ್ಕೆ ಜಾತಿಯಿಲ್ಲ ಎಲ್ಲರ ಆತ್ಮಗಳು ದೇವನ ಅಂಗಗಳೇ ಎಂದೂ, ಯಾರೂ ಕನಿಷ್ಟವೇನೂ ಅಲ, ಶ್ರೇಷ್ಠನೂ ಅಲ್ಲ ಯಾರಿಗೆ ಯಾರು ಅಡಿಯಾಳಾಗದೆ ಸಮಾನತೆಯ ತತ್ವದಡಿ ಸುಂದರ ಬದುಕು ರೂಪಿಸಿಕೊಳ್ಳಬೇಕೆಂದು ಕರೆಕೊಕೊಟ್ಟಿದ್ದರು ಎಂದರು.

ಈ ಸಂದರ್ಭದಲ್ಲಿ ಎಸ್‌ವಿಪಿ ಸಂಸ್ಥೆ ಅಧ್ಯಕ್ಷ ಎಸ್.ಕೆ. ರಾಜಶೇಖರ್ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಎಂ. ಪರಮೇಶ್ವರಯ್ಯ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ನಾಗರತ್ನಮ್ಮ, ಮುಕ್ತತಿಪ್ಪೇಶ್, ಕದಳಿ ಮಹಿಳಾ ವೇದಕೆ ಅಧ್ಯಕ್ಷೆ ಎಂ.ಎಸ್. ಸ್ವರ್ಣಗೌರಿ ಸೇರಿದಂತೆ ಅಕ್ಕಮಹಾದೇವಿ ಸಮಾಜದ ಹಾಗೂ ಕದಳಿ ವೇದಿಕೆಯ ನೂರಾರು ಸದಸ್ಯರು ಭಾಗವಹಿಸಿದ್ದರು. ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.