ಸೆಪ್ಟೆಂಬರ್ ಕೊನೆ ವಾರದಲ್ಲಿ ವಿಶ್ವವಿಖ್ಯಾತ ಗಗನಚುಕ್ಕಿ ಜಲಪಾತೋತ್ಸವ ಆಚರಿಸಲು ನಿರ್ಧಾರ

| Published : Sep 02 2024, 02:03 AM IST / Updated: Sep 02 2024, 02:04 AM IST

ಸೆಪ್ಟೆಂಬರ್ ಕೊನೆ ವಾರದಲ್ಲಿ ವಿಶ್ವವಿಖ್ಯಾತ ಗಗನಚುಕ್ಕಿ ಜಲಪಾತೋತ್ಸವ ಆಚರಿಸಲು ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ದಿನಗಳ ಜಲಪಾತೋತ್ಸವಕ್ಕೆ ವಿವಿಧ ಸಮಿತಿಗಳನ್ನು ರಚನೆ ಮಾಡಿ ಹಲವು ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಪ್ರಕೃತಿ ವೈಭವ ಸವಿಯಲು ಬರುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ತಕ್ಷಣದಿಂದಲೇ ಎಲ್ಲ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿಶ್ವ ವಿಖ್ಯಾತ ಗಗನಚುಕ್ಕಿಯಲ್ಲಿ ಸೆಪ್ಟೆಂಬರ್ ಕೊನೇ ವಾರದಲ್ಲಿ ಜಲಪಾತೋತ್ಸವ ಆಚರಿಸಲು ನಿರ್ಧರಿಸಿದ್ದು, ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳು ಭಾನುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ತಾಲೂಕಿನ ಶಿವನಸಮುದ್ರ (ಬ್ಲಪ್) ಬಳಿಯ ಗಗನಚುಕ್ಕಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಜಲಪಾತೋತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿತು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಮಲ್ಲಿಕ್ಯಾತನಹಳ್ಳಿ ಬಳಿ ವಾಹನ ಪಾರ್ಕಿಂಗ್‌ಗಾಗಿ ಜಾಗ ಗುರುತಿಸಿ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಲಪಾತೋತ್ಸವಕ್ಕೆ ವೇದಿಕೆ ನಿರ್ಮಾಣ, ಊಟದ ವ್ಯವಸ್ಥೆಗೆ ಹಾಗೂ ಅತಿಥಿಗಳ ವಾಹನ ಪಾರ್ಕಿಂಗ್‌ಗೆ ಗುರುತಿಸಿರುವ ಜಾಗವನ್ನು ಪರಿಶೀಲನೆ ನಡೆಸಿ, ಜಲಪಾತದ ಬಳಿ ನಡೆಯುತ್ತಿರುವ ಮೆಟ್ಟಿಲು ಕಾಮಗಾರಿ ವೀಕ್ಷಿಸಿದರು. ತ್ವರಿತಗತಿಯಲ್ಲಿ ಕೆಲಸ ಮುಗಿಸುವಂತೆ ಹಾಗೂ ಕೆಲ ಮಾರ್ಪಾಟುಗಳಿಗೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ನಂತರ ಲಕ್ಷದ್ವೀಪ ಹೋಟೆಟ್‌ನಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರ ಸಮ್ಮುಖದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಶಾಸಕರು, ಸೆಪ್ಟೆಂಬರ್ ಕೊನೆ ವಾರದಲ್ಲಿ ಗಗನಚುಕ್ಕಿ ಜಲಪಾತೋತ್ಸವವು ಎರಡು ದಿನಗಳ ಕಾಲ ನಡೆಯಲಿದೆ. ಎರಡು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ತೀರ್ಮಾನಿಸಲಾಗಿದೆ ಎಂದರು.

ಮೊದಲ ದಿನ ಆರಂಭವಾಗುವ ವೇದಿಕೆ ಕಾರ್ಯಕ್ರಮದಲ್ಲಿ ಸ್ಥಳೀಯ, ಜಿಲ್ಲೆಯ ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶನ ಮಾಡಲಿದ್ದಾರೆ. ಸಂಜೆ 6 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಅನೇಕ ಸಚಿವರು ಹಾಗೂ ಶಾಸಕರು ಭಾಗಿಯಾಗಲಿದ್ದಾರೆ. ನಂತರ ಮಣಿಕಾಂತ್ ಕದ್ರಿ, ಚಂದನ್ ಶೆಟ್ಟಿ ನೇತೃತ್ವದಲ್ಲಿ ಸಂಗೀತ ಸಂಜೆ ಆಯೋಜನೆ ಮಾಡಲಾಗುವುದು ಎಂದರು.

ಎಡರನೇ ಸಹ ಸ್ಥಳೀಯ ಕಲಾವಿದರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸಂಜೆ ಹೆಸರಾಂತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಸಾರಥ್ಯದಲ್ಲಿ ವಿಭಿನ್ನ ಕಾರ್ಯಕ್ರಮದ ಜೊತೆಗೆ ಈ ಬಾರಿ ವಿದ್ಯುತ್ ದೀಪಾಲಂಕಾರಕ್ಕೆ ಹೊಸ ವಿನ್ಯಾಸದ ರೂಪಿಸಲಾಗಿದೆ ಎಂದರು.

ಎರಡು ದಿನಗಳ ಕಾಲ ರಸಮಂಜರಿ, ಹಾಸ್ಯ, ಮನೋರಂಜನೆ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ಎಲ್ಲರಿಗೂ ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಉಟದ ಜತೆಗೆ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.

ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ಈ ಬಾರಿ ಉತ್ತಮ ಮಳೆಯಾಗಿ ಕೆಆರ್ ಎಸ್ ತುಂಬಿರುವುದರಿಂದ ಗಗನಚುಕ್ಕಿ ಜಲಪಾತೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸೆಪ್ಟೆಂಬರ್ ಮೊದಲ ಮೂರು ವಾರಗಳಲ್ಲಿ ಮಳೆಯ ಪ್ರಮಾಣವನ್ನು ಗಮನಿಸಿ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದರು.

ಎರಡು ದಿನಗಳ ಜಲಪಾತೋತ್ಸವಕ್ಕೆ ವಿವಿಧ ಸಮಿತಿಗಳನ್ನು ರಚನೆ ಮಾಡಿ ಹಲವು ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಪ್ರಕೃತಿ ವೈಭವ ಸವಿಯಲು ಬರುವ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ತಕ್ಷಣದಿಂದಲೇ ಎಲ್ಲ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಎರಡು ದಿನಗಳ ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಾಗಿಯಾಗುವುದರಿಂದ ಭದ್ರತೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ವಹಿಸಲಾಗುವುದು. ವಹಿಸಲಾಗುವುದು. ಇಲಾಖೆಯ ಸಲಹೆ-ಸೂಚನೆಗಳನ್ನು ಎಲ್ಲರೂ ಪಾಲಿಸಬೇಕು ಎಂದರು.

ಈ ವೇಳೆ ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ಕೆ.ಎನ್.ಲೋಕೇಶ್, ಡಿವೈಎಸ್ಸಿ ವಿ.ಕೃಷ್ಣಪ್ಪ, ತಾಪಂ ಇಒ ಎಚ್.ಸಿ.ಶ್ರೀನಿವಾಸ್, ಗ್ರಾಪಂ.ಅಧ್ಯಕ್ಷೆ ಮಹದೇವಮ್ಮ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.ಈ ಬಾರಿ ಜಲಪಾತೋತ್ಸವದಲ್ಲಿ ಜಾನಪದ ಸೊಗಡಿನ ಹಳ್ಳಿಗಾಡಿನ ವೈಭವ ಬಿಂಬಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ರೊಟ್ಟಿ ಕಟ್ಟೆಯಿಂದ ವೇದಿಕೆವರೆಗೂ ರಸ್ತೆ ಬದಿಯಲ್ಲಿ ಜಾನಪದ ಸೊಗಡು ಹೊಂದಿರುವ ಚಿತ್ರಗಳೊಂದಿಗೆ ಸ್ವಾಗತ ಫಲಕ ಅಳವಡಿಸಬೇಕು. ವಿದ್ಯುತ್ ದೀಪಾಲಂಕಾರ ಮಾಡಬೇಕು. ವಾಹನಗಳ ಸಂಚಾರ ದಟ್ಟಣೆ ನಿಯಂತ್ರಿಸಲು ಯಾವುದೇ ಖಾಸಗಿ ವಾಹನಗಳಿಗೆ ಜಲಪಾತದ ಬಳಿ ಪ್ರವೇಶವಿಲ್ಲ. ಬದಲಾಗಿ ಮಲ್ಲಿಕ್ಯಾತನಹಳ್ಳಿ ಸಮೀಪವೇ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಎಲ್ಲ ಹೋಬಳಿಗಳಿಂದ ಉಚಿತ ಸಾರಿಗೆ ಸೌಲಭ್ಯ ಒದಗಿಸಬೇಕು.

- ಪಿ.ಎಂ.ನರೇಂದ್ರಸ್ವಾಮಿ, ಶಾಸಕರು