ವಾಲ್ಮೀಕಿ ಸಮುದಾಯವನ್ನು ಎಸ್ಟಿಗೆ ಸೇರಿಸಿದ್ದೇ ದೇವೇಗೌಡರು

| Published : Oct 08 2025, 01:00 AM IST

ಸಾರಾಂಶ

ಮಹರ್ಷಿ ವಾಲ್ಮೀಕಿಯವರು ನಮ್ಮ ಸಂಸ್ಕೃತಿ, ಮಾನವೀಯ ಮೌಲ್ಯಗಳು ಹಾಗೂ ಮೌಲ್ಯಯುತ ಜೀವನಕ್ಕೆ ದಾರಿ ದೀಪವಾಗಿರುವ ರಾಮಾಯಣ ಗ್ರಂಥವನ್ನು ರಚಿಸಿದ್ದಾರೆ ಮತ್ತು ಶ್ರೀ ರಾಮನ ಆದರ್ಶಗಳನ್ನು ನಮಗೆ ತಿಳಿಸಿಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರಮಾಜಿ ಪ್ರಧಾನಿ ದಿ. ಚಂದ್ರಶೇಖರ್‌ ಅವರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ವಿನಂತಿಸಿ ವಾಲ್ಮೀಕಿ ಜನಾಂಗವನ್ನು ಎಸ್‌ಟಿ ವರ್ಗಕ್ಕೆ ಸೇರಿಸಲು ಶ್ರಮಿಸಿದ್ದರು. ಜತೆಗೆ 18 ಶಾಸಕರು ಹಾಗೂ 3 ಸಂಸದರು ಆಯ್ಕೆಯಾಗಲು ಸಾಧ್ಯವಾಗಿತ್ತು. ಮಾಜಿ ಪ್ರದಾನಿ ದೇವೇಗೌಡರು ಅವರ ಆಡಳಿತ ಅವಧಿಯಲ್ಲಿ ಹಿಂದುಳಿದ ಜನಾಂಗಗಳ ಏಳಿಗೆಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ, ಜನಪರ ಕಾರ್ಯಗಳನ್ನು ಮಾಡುವ ಮೂಲಕ ಶೋಷಿತರ ಅಭ್ಯುದಯಕ್ಕೆ ಶ್ರಮಿಸಿದ್ದಾರೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.

ಪಟ್ಟಣದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಮಹರ್ಷಿ ವಾಲ್ಮೀಕಿಯವರು ನಮ್ಮ ಸಂಸ್ಕೃತಿ, ಮಾನವೀಯ ಮೌಲ್ಯಗಳು ಹಾಗೂ ಮೌಲ್ಯಯುತ ಜೀವನಕ್ಕೆ ದಾರಿ ದೀಪವಾಗಿರುವ ರಾಮಾಯಣ ಗ್ರಂಥವನ್ನು ರಚಿಸಿದ್ದಾರೆ ಮತ್ತು ಶ್ರೀ ರಾಮನ ಆದರ್ಶಗಳನ್ನು ನಮಗೆ ತಿಳಿಸಿಕೊಟ್ಟಿದ್ದಾರೆ. ದಾರ್ಶನಿಕರು ನೀಡಿರುವ ಮಹತ್ವದ ಕಾವ್ಯಗಳ ಸಂದೇಶವನ್ನು ಆರ್ಥ ಮಾಡಿಕೊಂಡು ತತ್ವಗಳನ್ನು ಅನುಸರಿಸುತ್ತಾ, ಸಹಬಾಳ್ವೆಯ ಜೀವನ ನಡೆಸಬೇಕಿದೆ ಎಂದರು.

ನಂತರ ಜೆಡಿಎಸ್ ಪಕ್ಷದ ಆಡಳಿತ ಅವಧಿಯಲ್ಲಿ ನಾಯಕ ಜನಾಂಗ ಅಭಿವೃದ್ಧಿಗೆ ಕೈಗೊಂಡ ಹಲವಾರು ಜನಪರ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಪೂಜ್ಯ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ವಿವಿಧ ಕಲಾ ತಂಡಗಳ ಪ್ರದರ್ಶನದೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ವೈಭವದಿಂದ ನಡೆಸಲಾಯಿತು. ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ, ಮುಖ್ಯಾಧಿಕಾರಿ ಶಿವಶಂಕರ್, ಬಿಇಒ ಸೋಮಲಿಂಗೇಗೌಡ, ನಾಯಕ ಜನಾಂಗದ ಮುಕಂಡರು, ಇತರರು ಇದ್ದರು.