ದಲಿತರು ಬಹಳ ಬುದ್ಧಿವಂತರಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಬದಲಿಸುವುದಾದರೆ ದಲಿತರಿಗೆ ಅವಕಾಶ ಕೊಡಬೇಕು ಎಂದು ಪರೋಕ್ಷವಾಗಿ ಕೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರಬೇಕು. ಸಿದ್ದರಾಮಯ್ಯ ಎಂದೂ ಭ್ರಷ್ಟಾಚಾರಕ್ಕೆ ಮಣೆ ಹಾಕಿಲ್ಲ. ಕಳ್ಳರನ್ನು ಪ್ರೋತ್ಸಾಹಿಸಲಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಇಲ್ಲದೇ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷವನ್ನು ಉಳಿಸೋದು ಕಷ್ಟ. ಪೂರ್ಣಾವಧಿಗೆ ಅವರೇ ಮುಖ್ಯಮಂತ್ರಿ ಆಗಿರಬೇಕು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಮಂಗಳವಾರ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮೇಲೆ ದೊಡ್ಡ ಹೊಣೆಗಾರಿಕೆ ಇದೆ. ಅವರ ಮೇಲೆ ಜನರಿಗೆ ಬಲವಾದ ನಂಬಿಕೆ ಇದೆ. ಸಿದ್ದರಾಮಯ್ಯ ಇಲ್ಲದಿದ್ದರೆ ಕರ್ನಾಟಕದಲ್ಲಿ ಅಹಿಂದ ಸಮಾಜ ಮುಳುಗುತ್ತದೆ. ಸಿದ್ದರಾಮಯ್ಯ ಇಲ್ಲದಿದ್ದರೆ ಅಹಿಂದ ಬಲಹೀನವಾಗುತ್ತದೆ. ಹಾಗಾಗಿ ಅಹಿಂದ ಸಮಾಜಗಳು ಎಚ್ಚರಿಕೆಯಿಂದ ಇರಬೇಕು. ಸಿದ್ದರಾಮಯ್ಯ ನಾಯಕತ್ವ ಗಟ್ಟಿಗೊಳಿಸಲು ಮುಂದಾಗಬೇಕು ಎಂದರು.
ದಲಿತರು ಬಹಳ ಬುದ್ಧಿವಂತರಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಬದಲಿಸುವುದಾದರೆ ದಲಿತರಿಗೆ ಅವಕಾಶ ಕೊಡಬೇಕು ಎಂದು ಪರೋಕ್ಷವಾಗಿ ಕೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರಬೇಕು. ಸಿದ್ದರಾಮಯ್ಯ ಎಂದೂ ಭ್ರಷ್ಟಾಚಾರಕ್ಕೆ ಮಣೆ ಹಾಕಿಲ್ಲ. ಕಳ್ಳರನ್ನು ಪ್ರೋತ್ಸಾಹಿಸಲಿಲ್ಲ. ಹಾಗಾಗಿ ಅವರ ನಾಯಕತ್ವ ಮತ್ತು ಮುಂದಾಳತ್ವ ಅಹಿಂದ ಸಮುದಾಯಗಳಿಗೆ ಅಗತ್ಯ ಎಂದರು.2028ರಲ್ಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಬೇಕು ಎಂದು ಸಭಿಕರ ಆಗ್ರಹಕ್ಕೆ ದನಿಗೂಡಿಸಿದ ಸಚಿವ ಮಹದೇವಪ್ಪ ಅವರು 2028ರಲ್ಲೂ ಸಿದ್ದರಾಮಯ್ಯ ಅವರು ಮೂರನೇ ಬಾರಿಗೆ ಮುಖ್ಯಮಂತ್ರಿಯಾದರೂ ನಮ್ಮದೇನು ತಕರಾರು ಇಲ್ಲ ಎಂದರು.
ಬ್ಯಾಕ್ ಲಾಗ್ ಹುದ್ದೆಗೆ ಕ್ರಮ:ಪ.ಜಾತಿ, ಪ.ಪಂಗಡದ 72 ಸಾವಿರ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಕ್ರಮವಹಿಸಿದ್ದೇವೆ. ಹುದ್ದೆಗಳ ಭರ್ತಿಗಾಗಿ 5 ತಂಡಗಳನ್ನು ರಚಿಸಿದ್ದು, ಸಭೆ ನಡೆಸಲಾಗಿದೆ. ಹಂತ ಹಂತವಾಗಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದರು.