ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೆಜ್ಜೆ ಇರಿಸಿದ ಮರಾಠ ಮಂಡಳ ಕ್ರಾಂತಿ ಮಾಡಿದೆ. ಗ್ರಾಮೀಣ ಸರ್ವ ಜನಾಂಗದ ಮಕ್ಕಳ ಭವಿಷ್ಯ ನಿರ್ಮಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಹೇಳಿದರು.

ಧಾರವಾಡ:

ಇಲ್ಲಿಯ ಮರಾಠ ವಿದ್ಯಾಪ್ರಸಾರಕ ಮಂಡಳ ಆವರಣದಲ್ಲಿ ಭಾನುವಾರ ಐಟಿಐ ಕಾಲೇಜು ಮತ್ತು ವಸತಿ ನಿಲಯದ ಶಂಕು ಸ್ಥಾಪನೆಯೊಂದಿಗೆ ಆಡಳಿತ ಮಂಡಳಿ ಕಚೇರಿ, ಪಿಯು ವಿಜ್ಞಾನ ಮತ್ತು ಬಿಎಸ್ಸಿ ಪದವಿ ಕಾಲೇಜಿನ ಕಟ್ಟಡಗಳು ಲೋಕಾರ್ಪಣಗೊಂಡವು.

ಕಟ್ಟಡ ಲೋಕಾರ್ಪಣೆಗೊಳಿಸಿದ ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ, ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೆಜ್ಜೆ ಇರಿಸಿದ ಮರಾಠ ಮಂಡಳ ಕ್ರಾಂತಿ ಮಾಡಿದೆ. ಗ್ರಾಮೀಣ ಸರ್ವ ಜನಾಂಗದ ಮಕ್ಕಳ ಭವಿಷ್ಯ ನಿರ್ಮಿಸುವ ಕಾರ್ಯ ಶ್ಲಾಘಿಸಿದರು. ಕೇವಲ ಪದವಿ ನೀಡುವುದು ಶಿಕ್ಷಣವಲ್ಲ, ಬದಲಿಗೆ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಬೆಳೆಸುವುದು ಶಿಕ್ಷಣ. ನೂತನ ಐಟಿಐ ಕಾಲೇಜು ಮರಾಠ ಸಮಾಜದ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಒದಗಿಸುವಲ್ಲಿ ಬಹಳಷ್ಟು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ಯಾವುದೇ ಸಮಾಜವು ಮುಖ್ಯವಾಹಿನಿಗೆ ಬರಲು ಶಿಕ್ಷಣ ಅಡಿಪಾಯ. ಮರಾಠಾ ಮಂಡಳ ಜಾತೀಯತೆ ಮರೆತು ಸರ್ವ ಜನಾಂಗದ ವಿದ್ಯಾರ್ಥಿಗಳ ಬೆಳವಣಿಗೆಗೆ ಶ್ರಮಿಸುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.

ಒಂದೇ ಸೂರಿನಡಿ ಎಲ್‌ಕೆಜಿಯಿಂದ ಪಿಜಿ ವರೆಗೂ ಶಿಕ್ಷಣ ನೀಡುವ ಎಂ.ಎನ್. ಮೋರೆ ಅವರ ನೇತೃತ್ವದ ಮರಾಠ ಮಂಡಳ ಕಾರ್ಯ ಅಭಿನಂದಿಸಿದ ಮೇಯರ್, ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೂ ಸಹ ₹ 5 ಲಕ್ಷ ಅನುದಾನ ನೀಡುವ ವಾಗ್ದಾನ ಮಾಡಿದರು.

ಪ್ರಾಸ್ತಾವಿಕ ಮಾತನಾಡಿದ ಗೌರವ ಕಾರ್ಯದರ್ಶಿ ರಾಜು ಬಿರಜೆನವರ, ಸಮಾಜದ ಮಕ್ಕಳಿಗೆ ಕೆಜೆಯಿಂದ ಎಸ್ಸೆಸ್ಸೆಲ್ಸಿ ವರೆಗೆ ಉಚಿತ ಶಿಕ್ಷಣ ನೀಡುತ್ತಿದೆ. ಎಸ್ಸೆಸ್ಸೆಲ್ಸಿ ಬಳಿಕ ಸಮಾಜದ, ಬಡ ಮಕ್ಕಳಿಗೆ ಶೇ.೫೦ರ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡುತ್ತಿದೆ ಎಂದರು.

ಮನೋಹರ ಮೋರೆ ನೇತೃತ್ವದ ತಂಡ ಮರಾಠ ಸಮಾಜದ ಅಭಿವೃದ್ಧಿಗೆ ನಿತ್ಯ ಶ್ರಮಿಸುತ್ತಿದೆ. ೧೪ ಗುಂಟೆ ಜಾಗೆಯಲ್ಲಿ ಐಟಿಐ ಕಾಲೇಜು, ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆವೇರಿಸಿದ್ದು, ವರ್ಷದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.

ಮಂಡಳದ ಅಧ್ಯಕ್ಷ ಎಂ.ಎನ್. ಮೋರೆ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಸುನಿಲ ಮೋರೆ, ಯಲ್ಲಪ್ಪ ಚವ್ಹಾಣ, ರಾಜು ಕಾಳೆ, ಶಿವಾಜಿ ಸೂರ್ಯವಂಶಿ, ಪುರುಷೋತ್ತಮ ಜಾದವ, ಸುಭಾಷ ಶಿಂಧೆ, ಪ್ರಸಾದ ಹಂಗಳಕಿ, ಮಹೇಶ ಶಿಂಧೆ ಇದ್ದರು.

ಮಂಡಳದ ನಿರ್ದೇಶಕರಾದ ಈಶ್ವರ ಪಾಟೀಲ, ಸುಭಾಷ ಪವಾರ ಹಾಗೂ ಮಲ್ಲೇಶಪ್ಪ ಶಿಂಧೆ, ಪಾಲಿಕೆ ಸದಸ್ಯರಾದ ಶಂಕರ ಶೇಳಕೆ, ಪ್ರಕಾಶ ಘಾಟಕೆ, ಡಾ. ಮಯೂರ ಮೋರೆ ಸೇರಿದಂತೆ ಐದು ಅಂಗ ಸಂಸ್ಥೆಗಳ ಶಿಕ್ಷಕರು, ಸಿಬ್ಬಂದಿ ಇದ್ದರು.