ರಾಜ್ಯಪಾಲರ ನಿಂದಿಸಿದ ಐವಾನ್‌, ಜಮೀರ್‌ ಬಂಧಿಸಿ

| Published : Aug 22 2024, 12:53 AM IST

ಸಾರಾಂಶ

ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ, ನಿಂದಿಸಿರುವ ಕಾಂಗ್ರೆಸ್‌ ನಾಯಕರ ವಿರುದ್ಧ ಜಾತಿ ನಿಂದನೆ, ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಿ, ಶೀಘ್ರವೇ ಬಂಧಿಸಬೇಕು ಎಂದು ಕೋಲಾರದ ಬಿಜೆಪಿ ಮಾಜಿ ಶಾಸಕ ವೈ.ಸಂಪಂಗಿ ಒತ್ತಾಯಿಸಿದರು.

- ಕಾಂಗ್ರೆಸ್‌ ನಾಯಕರ ವಿರುದ್ಧ ಕ್ರಮಕ್ಕೆ ಕೋಲಾರ ಬಿಜೆಪಿ ಮಾಜಿ ಶಾಸಕ ವೈ.ಸಂಪಂಗಿ ಆಗ್ರಹ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ, ನಿಂದಿಸಿರುವ ಕಾಂಗ್ರೆಸ್‌ ನಾಯಕರ ವಿರುದ್ಧ ಜಾತಿ ನಿಂದನೆ, ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಿ, ಶೀಘ್ರವೇ ಬಂಧಿಸಬೇಕು ಎಂದು ಕೋಲಾರದ ಬಿಜೆಪಿ ಮಾಜಿ ಶಾಸಕ ವೈ.ಸಂಪಂಗಿ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾಗೆ ಬಂದ ಗತಿಯೇ ನಿಮಗೂ ಬರುತ್ತದೆ, ಕಾಂಗ್ರೆಸ್ಸಿಗರು ರಾಜಭವನಕ್ಕೆ ನುಗ್ಗಿ ರಾಜ್ಯಪಾಲರನ್ನು ಓಡಿಸುತ್ತೇವೆಂದು ಎಂಎಲ್‌ಸಿ ಐವಾನ್‌ ಡಿಸೋಜಾ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಇನ್ನು ಸಚಿವ ಜಮೀರ್ ಅಹಮ್ಮದ್‌ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯಪಾಲರೇ ಕಾರಣ‍ ಎಂದಿದ್ದಾರೆ. ಸಚಿವ ಕೃಷ್ಣ ಭೈರೇಗೌಡ, ದಿನೇಶ ಗುಂಡೂರಾವ್‌, ಶಾಸಕ ನಂಜೇಗೌಡ ಸಹ ರಾಜ್ಯಪಾಲರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಟೀಕಿಸಿದರು.

22ರಂದು ಪ್ರತಿಭಟನೆ:

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ಅಣಕು ಶವಯಾತ್ರೆ ಮಾಡಿ, ರಾಜ್ಯಪಾಲರ ಘನತೆಗೆ ಧಕ್ಕೆ ತಂದ ಕಾಂಗ್ರೆಸಿನ ಹೀನಕೃತ್ಯವನ್ನು ಖಂಡಿಸಿ ಆ.22ರಂದು ಬೆಳಗ್ಗೆ 11 ಗಂಟೆಗೆ ರಾಜ್ಯವ್ಯಾಪಿ ಬಿಜೆಪಿ ಪ್ರತಿಭಟನೆಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದ್ದಾರೆ. ಈ ಹಿನ್ನೆಲೆ ದಾವಣಗೆರೆಯಲ್ಲೂ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವೈ.ಸಂಪಂಗಿ ತಿಳಿಸಿದರು.

ಮುಖ್ಯಮಂತ್ರಿಗಳ ವಿರುದ್ಧ ಖಾಸಗಿ ವ್ಯಕ್ತಿಗಳು ಮಾಡಿದ ಆರೋಪದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದರು. ಇದರ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು, ಬೆಂಬಲಿಗರು ಅತ್ಯಂತ ಅವಹೇಳನಾಕಾರಿ ರಾಜ್ಯಪಾಲರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯಪಾಲರ ತೇಜೋವಧೆ ಖಂಡನೀಯ. ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ವೈಯಕ್ತಿಕವಾಗಿ ಕಾಂಗ್ರೆಸ್ಸಿನ ನಾಯಕರು, ಆ ಪಕ್ಷದ ಬೆಂಬಲಿಗರು ತೇಜೋವಧೆ ಮಾಡುತ್ತಿರುವುದು ಸರಿಯಲ್ಲ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆಗೆ ಕಾರಣರಾದ ಹಾಗೂ ಮುಡಾ ನಿವೇಶನಗಳನ್ನು ಪತ್ನಿ ಹೆಸರಿಗೆ ಅಕ್ರಮ ವರ್ಗಾವಣೆ ಮೂಲಕ ಪರಿಶಿಷ್ಟ ಜಾತಿ- ಪಂಗಡಗಳ ಜನತೆಗೆ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ಸಿನ ನಾಯಕರು ಅನ್ಯಾಯ ಮಾಡಿದ್ದಾರೆ. ಈಗ ಶೋಷಿತ ವರ್ಗ ಅದರಲ್ಲೂ ದಲಿತ ವರ್ಗಕ್ಕೆ ಸೇರಿದ ರಾಜ್ಯಪಾಲರ ವಿರುದ್ಧ ಮುಗಿಬಿದ್ದಿರುವುದು ಕಾಂಗ್ರೆಸ್‌ ಪ್ರವೃತ್ತಿಗೆ ಸಾಕ್ಷಿ ಎಂದು ದೂರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಬಿ.ಎಂ. ಸತೀಶ ಕೊಳೇನಹಳ್ಳಿ, ಪಾಲಿಕೆ ಸದಸ್ಯ ಆರ್.ಶಿವಾನಂದ, ಎಚ್.ಡಿ.ವಿಶ್ವಾಸ್‌, ಆಲೂರು ನಿಂಗರಾಜ, ಹನುಮಂತ ನಾಯ್ಕ, ರಾಜು, ಗಂಗಾಧರ, ಕೊಟ್ರೇಶ, ಶ್ರೀನಿವಾಸ ಇತರರು ಇದ್ದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಬಿ.ಎಂ.ಸತೀಶ್, ಅನಿಲ್ ಕುಮಾರ್, ಶಿವಾನಂದ್, ವಿಶ್ವಾಸ್, ಆಲೂರು ನಿಂಗರಾಜ್, ಹನುಮಂತ ನಾಯ್ಕ, ರಾಜು, ಗಂಗಾಧರ್, ಕೊಟ್ರೇಶ್, ಶ್ರೀನಿವಾಸ್ ಇತರರು ಇದ್ದರು.

- - -

ಬಾಕ್ಸ್‌ * ಕೇಸ್‌ ದಾಖಲಿಸಲು ಪೊಲೀಸರ ಮೌನವೇಕೆ? ಸಿಎಂ ಸಿದ್ದರಾಮಯ್ಯ ವಿರುದ್ಧದ ಆರೋಪಗಳ ತನಿಖೆಗೆ ಆದೇಶಿಸುವುದು ರಾಜ್ಯಪಾಲರಿಗೆ ಸಂವಿಧಾನ ನೀಡಿದ ಅಧಿಕಾರ. ಇದು ಹಿಂದೆಯೂ ನಡೆದಿದೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ವಿರುದ್ಧ ಆಗಿನ ರಾಜ್ಯಪಾಲರರು ಆದೇಶ ಹೊರಡಿಸಿದ್ದರು. ಅತ್ಯಂತ ವಿವೇಚನಾಯುಕ್ತವಾಗಿ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ, ಪ್ರಕರಣದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಪರಾಮರ್ಶಿಸಿ, ತನಿಖೆಗೆ ರಾಜ್ಯಪಾಲರು ಆದೇಶ ನೀಡಿದ್ದಾರೆ. ಆದರೆ, ಪೊಲೀಸರ ಸಮಕ್ಷಮದಲ್ಲೇ ಕಾಂಗ್ರೆಸ್ಸಿನ ನಾಯಕರು ರಾಜ್ಯಪಾಲರಿಗೆ ಅವಮಾನಿಸಿ, ಮಾತನಾಡುತ್ತಿದ್ದಾರೆ. ಹಾಗಿದ್ದೂ ಪೊಲೀಸ್ ಇಲಾಖೆ ನಿರ್ಲಕ್ಷ್ಯ ತೋರುತ್ತಿರುವುದು ಏಕೆ? ಪರಿಶಿಷ್ಟ ಜಾತಿಗೆ ಸೇರಿದ ರಾಜ್ಯಪಾಲರ ಬಗ್ಗೆ ಸಾರ್ವಜನಿಕವಾಗಿ ಅವಹೇಳನ ಮಾಡಿದ ಕಾಂಗ್ರೆಸ್ ನಾಯಕರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವ ಕೆಲಸ ಇಲಾಖೆ ಮಾಡಲಿ ಎಂದರು.

- - - -21ಕೆಡಿವಿಜಿ1:

ದಾವಣಗೆರೆಯಲ್ಲಿ ಬುಧವಾರ ಬಿಜೆಪಿ ಹಿರಿಯ ಮುಖಂಡ, ಕೋಲಾರ ಮಾಜಿ ಶಾಸಕ ವೈ.ಸಂಪಂಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.