ಇನ್ನೇನು ಮಳೆಗಾಲ ಆರಂಭಗೊಳ್ಳುವ ಹಂತದಲ್ಲಿದೆ. ನಾಪೋಕ್ಲು ಭಾಗಮಂಡಲ ರಸ್ತೆಗೆ ದುರಸ್ತಿ ಭಾಗ್ಯ ಲಭಿಸಿಲ್ಲ. ರಸ್ತೆ ದುರಸ್ತಿ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ದುಗ್ಗಲ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇನ್ನೇನು ಮಳೆಗಾಲ ಆರಂಭಗೊಳ್ಳುವ ಹಂತದಲ್ಲಿದೆ. ನಾಪೋಕ್ಲು ಭಾಗಮಂಡಲ ರಸ್ತೆಗೆ ದುರಸ್ತಿ ಭಾಗ್ಯ ಲಭಿಸಿಲ್ಲ. ರಸ್ತೆ ದುರಸ್ತಿ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಾಪೋಕ್ಲುನಿಂದಾಗಿ ನೆಲಜಿ ಗ್ರಾಮದವರೆಗೆ ಅಲ್ಲಲ್ಲಿ ರಸ್ತೆ ಗುಂಡಿಗಳನ್ನು ಇತ್ತೀಚೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಆದರೆ ಭಾಗಮಂಡಲದವರೆಗೆ ರಸ್ತೆ ಅಲ್ಲಲ್ಲಿ ಹದಗೆಟ್ಟಿದೆ. ಅಯ್ಯಂಗೇರಿ ಗ್ರಾಮದಲ್ಲಿ ರಸ್ತೆ ಗುಂಡಿಗಳು ಹೆಚ್ಚಿದ್ದು ವಾಹನ ಸಂಚಾರಕ್ಕೆ ತೊಡಕಾಗಿದೆ. ಮಳೆ ಬಂದರಂತೂ ಗುಂಡಿಗಳಲ್ಲಿ ನೀರು ನಿಂತು ವಾಹನ ಸಾಗಲು ಅಸಾಧ್ಯವಾಗಿದೆ. ಇದರಿಂದಾಗಿ ವಾಹನ ಚಾಲಕರು, ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈ ರಸ್ತೆಯನ್ನು ಸರಿಪಡಿಸುವ ದಿನಗಳು ಯಾವತ್ತು ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಮಳೆಗಾಲಕ್ಕೂ ಮುನ್ನ ರಸ್ತೆ ದುರಸ್ತಿ ಭಾಗ್ಯ ಕರುಣಿಸಿ ಎಂದು ಇಲ್ಲಿನ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಮಳೆಯಾಗುತ್ತಿದ್ದು, ಮಳೆ ನೀರು ರಸ್ತೆ ಗುಂಡಿಗಳಲ್ಲಿ ಶೇಖರಣೆಗೊಂಡು ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ. ಜೀವಪಾಯ ಆಗುವ ಮೊದಲು ಸಂಬಂಧಿಸಿದವರು ಕೂಡಲೇ ರಸ್ತೆ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. -ಭರತ್ ಕಾವೇರಿ ಮನೆ ಅಯ್ಯಂಗೇರಿ