ಸಾರಾಂಶ
ಬಳ್ಳಾರಿ: ಮಾಜಿ ಸಚಿವ ಬಿ. ಶ್ರೀರಾಮುಲು ಸಹೋದರಿ ಹಾಗೂ ಮಾಜಿ ಸಂಸದೆ ಜೆ. ಶಾಂತಾ ಅವರು ಬಿಜೆಪಿಗೆ ಗುಡ್‌ಬೈ ಹೇಳಿದ್ದು, ಆಂಧ್ರಪ್ರದೇಶದ ವೈಎಸ್ಆರ್ ಪಕ್ಷಕ್ಕೆ ಮಂಗಳವಾರ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಬಳ್ಳಾರಿಯ ಶಾಂತಾ ಅವರು ರಾಜಕೀಯ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ವಿಜಯವಾಡದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಮಕ್ಷಮದಲ್ಲಿ ವೈಎಸ್ಆರ್ ಪಕ್ಷಕ್ಕೆ ಶಾಂತಾ ಸೇರ್ಪಡೆಗೊಂಡರು. ಆಂಧ್ರದ ಹಿಂದೂಪುರ ಅಥವಾ ಅನಂತಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.ಜೆ. ಶಾಂತಾ ಅವರು ಬಳ್ಳಾರಿ ತಾಲೂಕಿನ ಜೋಳದರಾಶಿ ಗ್ರಾಮದವರು. ಗಂಡನ ಮನೆ ಆಂಧ್ರಪ್ರದೇಶದ ಗುಂತಕಲ್ಲು ಗ್ರಾಮ.
2009ರಲ್ಲಿ ಬಿಜೆಪಿ ಸೇರ್ಪಡೆಗೊಳ್ಳುವ ಮೂಲಕ ರಾಜಕೀಯ ಪ್ರವೇಶ ಪಡೆದ ಜೆ. ಶಾಂತಾ, ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಪ್ರಭಾವದಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಿವೃತ್ತ ನ್ಯಾಯಮೂರ್ತಿ ಎನ್.ವೈ. ಹನುಮಂತಪ್ಪ ವಿರುದ್ಧ ಗೆಲುವು ಪಡೆದರು.2014ರ ಚುನಾವಣೆಯಲ್ಲಿ ಸಹೋದರ ಬಿ. ಶ್ರೀರಾಮುಲು ಸ್ಪರ್ಧೆ ಮಾಡಿದ್ದರಿಂದ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. 2018ರ ಉಪ ಚುನಾವಣೆಯಲ್ಲಿ ಮತ್ತೆ ಲೋಕಸಭೆಗೆ ಬಿಜೆಪಿಯಿಂದ ಅಖಾಡಕ್ಕಿಳಿದರಲ್ಲದೆ, ಕಾಂಗ್ರೆಸ್‌ನ ವಿ.ಎಸ್. ಉಗ್ರಪ್ಪ ವಿರುದ್ಧ ಭಾರೀ ಅಂತರದ ಸೋಲುಂಡರು. ಕಳೆದ ಚುನಾವಣೆಯಲ್ಲಿ ಮತ್ತೆ ಸ್ಪರ್ಧೆಗಿಳಿಯುವ ಇಂಗಿತ ವ್ಯಕ್ತಪಡಿಸಿದರೂ ಪಕ್ಷ ಟಿಕೆಟ್ ನೀಡಲಿಲ್ಲ. ಹೀಗಾಗಿ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಆಂಧ್ರಪ್ರದೇಶದ ವೈಎಸ್ಆರ್ ಪಕ್ಷದ ಕೈ ಹಿಡಿದಿದ್ದಾರೆ. ಆಂಧ್ರದಲ್ಲಿ ಬಿಜೆಪಿ ಹೆಚ್ಚು ಶಕ್ತವಿಲ್ಲ ಎಂಬ ಕಾರಣಕ್ಕಾಗಿಯೇ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
2009ರಲ್ಲಿ ಶಾಂತಾ ಅವರು ಲೋಕಸಭಾ ಸದಸ್ಯರಾಗಿದ್ದಾಗ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಪರಿಚಿತರು ಹಾಗೂ ಬಳ್ಳಾರಿ ರೆಡ್ಡಿ ಸಹೋದರರಿಗೆ ಜಗನ್ ಮೋಹನ್ ರೆಡ್ಡಿ ತೀರಾ ಆತ್ಮೀಯರು. ಈ ಎಲ್ಲವೂ ಶಾಂತಾ ಪಕ್ಷ ಸೇರ್ಪಡೆಗೆ ಆಸ್ಪದ ಮಾಡಿಕೊಟ್ಟಿದೆ.