ಕನ್ನಡಪ್ರಭ ವಾರ್ತೆ ಕಾರವಾರ

ನಗರದಲ್ಲಿ ಪ್ರಥಮ ಬಾರಿಗೆ ಅತ್ಯಂತ ವಿಭಿನ್ನ ಹಾಗೂ ಬೃಹತ್ ಹಲಸು ಮೇಳವನ್ನು ಆಯೋಜಿಸಲಾಗಿದೆ. ಕುಂದಾಪುರದ ಬೆನಕ ಇವೆಂಟ್ಸ್ ಹಾಗೂ ಕಾರವಾರ ರೋಟರಿ ಕ್ಲಬ್ ಜಂಟಿ ಆಶ್ರಯದಲ್ಲಿ ಈ ಮೇಳ ನಡೆಯಲಿದ್ದು, ಮೇ 29ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಮೇಳದ ಆಯೋಜಕ ಗಣೇಶ ಶೆಟ್ಟಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪೊಲೀಸ್ ಭವನದಲ್ಲಿ ಸತತ ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳವು, ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9.30ರವರೆಗೆ ಸಾರ್ವಜನಿಕರಿಗೆ ತೆರೆದಿರಲಿದೆ ಎಂದರು.

ಮೇಳದಲ್ಲಿ ಹಲಸಿನಿಂದ ತಯಾರಿಸಿದ ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಕೇರಳದ ಅಲೆಪ್ಪಿಯಿಂದ ಆಗಮಿಸುವ ಪರಿಣಿತರು 60ಕ್ಕೂ ಹೆಚ್ಚು ಬಗೆಯ ವಿಶಿಷ್ಟ ಹಲಸಿನ ತಿನಿಸುಗಳನ್ನು ಪರಿಚಯಿಸಲಿದ್ದಾರೆ. ಜೊತೆಗೆ ಕಾರ್ಕಳದ ಸಾಣೂರಿನಿಂದ 20 ವರ್ಷಗಳ ಅನುಭವವಿರುವ ತಯಾರಕರು ಕೂಡ ಭಾಗವಹಿಸಲಿದ್ದಾರೆ. ಹಲಸಿನ ಐಸ್‌ಕ್ರೀಮ್, ಮಿಲ್ಕ್ ಶೇಕ್, ಹಪ್ಪಳ, ಚಿಪ್ಸ್, ಬಿಸ್ಕೆಟ್, ಮಂಚೂರಿ, ಪಕೋಡ, ಜಾಮ್, ಜೀರಾ ಹಾಗೂ ಪಾಯಸದಂತಹ ಬಾಯೂರಿಸುವ ತಿನಿಸುಗಳು ಭೋಜನಪ್ರಿಯರಿಗೆ ಲಭ್ಯವಿರಲಿವೆ.

ಇನ್ನು ಸ್ಥಳೀಯ ಬೆಳೆಗಾರರು, ಮಹಿಳಾ ಉದ್ಯಮಿಗಳು ಹಾಗೂ ಸಣ್ಣ ವ್ಯಾಪಾರಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉಚಿತ ಮಳಿಗೆಗಳನ್ನು ಒದಗಿಸಲಾಗುತ್ತಿದೆ. ವಿಶೇಷವಾಗಿ ಸ್ಥಳೀಯವಾಗಿ ಬೆಳೆಯುವ ನೇರಳೆ ಹಣ್ಣು ಹಾಗೂ ಕರಿ ಈಶಾಡು ಮಾವಿನಹಣ್ಣು ಮಾರಾಟಕ್ಕೂ ಉಚಿತ ಅವಕಾಶ ಕಲ್ಪಿಸಲಾಗಿದೆ. ರಸ್ತೆ ಬದಿಯಲ್ಲಿ ಮಾರಾಟವಾಗುವ ಹಲಸಿಗೆ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಉತ್ತಮ ವೇದಿಕೆ ಒದಗಿಸಿ, ಬ್ರ್ಯಾಂಡ್ ಮೌಲ್ಯ ತಂದುಕೊಡುವುದು ಈ ಮೇಳದ ಪ್ರಮುಖ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದರು.


ಮೇಳದಲ್ಲಿ ಕೇವಲ ಹಲಸಿನ ತಿನಿಸುಗಳು ಮಾತ್ರವಲ್ಲದೆ, ಚನ್ನಪಟ್ಟಣದ ಬೊಂಬೆಗಳು, ಹೆಗ್ಗೋಡು ಖಾದಿ, ಇಳಕಲ್ ಸೀರೆಗಳು, ಆಯುರ್ವೇದಿಕ್ ಉತ್ಪನ್ನಗಳು, ಕರಾವಳಿಯ ಸ್ಥಳೀಯ ವಸ್ತುಗಳು ಹಾಗೂ ಬೇಲೂರಿನ ಶಿಲಾಮೂರ್ತಿಗಳ ಪ್ರದರ್ಶನವೂ ಇರಲಿದೆ. ಬೃಹತ್ ನರ್ಸರಿ ಕೂಡ ಇರಲಿದೆ.

ಕಾರವಾರ ರೋಟರಿ ಕ್ಲಬ್ ಅಧ್ಯಕ್ಷ ಅರ್ಜುನ್ ಉಪಾಧ್ಯಾಯ, ಝೋನಲ್ ಕೋ-ಆರ್ಡಿನೇಟರ್ ಪ್ರಶಾಂತ್ ದೇವಾಡಿಗ, ಕಮ್ಯುನಿಟಿ ಸರ್ವಿಸ್ ಚೇರ್ಮನ್ ಪ್ರಸನ್ನ ತೆಂಡೂಲ್ಕರ್, ಕಾರ್ಯದರ್ಶಿ ವಿನೋದ್ ಕೊಠಾರಕರ್ ಹಾಗೂ ಅನ್ಮೋಲ್ ರೇವಣಕರ್ ಮುಂತಾದವರಿದ್ದರು.