ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಹಲಸಿನ ಮಹತ್ವವನ್ನು ಗ್ರಾಹಕರಿಗೆ ಮತ್ತು ರೈತರಿಗೆ ತಿಳಿಸಿಕೊಡುವ ಉದ್ದೇಶದಿಂದ ಸಹಜ ಸಮೃದ್ದ ಮತ್ತು ರೋಟರಿ ಕ್ಲಬ್ ಮೈಸೂರು ಪಶ್ಚಿಮ ಜೊತೆಗೂಡಿ ಜೂ. 15 ಮತ್ತು 16 ರಂದು ಹಲಸಿನ ಹಬ್ಬವನ್ನು ನಗರದ ನಂಜರಾಜ ಬಹದ್ದೂರು ಛತ್ರದಲ್ಲಿ ಏರ್ಪಡಿಸಿದೆ.ಹಲಸಿನ ಮಹತ್ವ ಸಾರುವ ಮೇಳದಲ್ಲಿ, ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿ ಹಣ್ಣುಗಳು ತಿನ್ನಲು ಸಿಗಲಿವೆ. ಹಲಸಿನ ಐಸ್ ಕ್ರೀಂ, ಚಿಪ್ಸ, ಚಾಕೋಲೇಟ್, ಹಪ್ಪಳ, ಹಲ್ವ, ಕಬಾಬ್, ಹೋಳಿಗೆ, ವಡೆ, ದೋಸೆ , ಪಲ್ಯ , ಬಿರಿಯಾನಿಯ ಮಳಿಗೆಗಳು ಬರಲಿವೆ. ಚಿಕ್ಕನಾಯಕನಹಳ್ಳಿ, ನಾಗರಹೊಳೆ ಕಾಡು, ಕೊಳ್ಳೇಗಾಲ, ತಮಿಳುನಾಡಿನ ಪನ್ನರ್ತಿಯ ಗುಣಮಟ್ಟದ ಹಲಸಿನ ಹಣ್ಣುಗಳು ಮಾರಾಟಕ್ಕೆ ಬರಲಿವೆ. ತುಮಕೂರಿನ ಕೆಂಪು ಹಲಸು ತಿನ್ನಲು ಸಿಗಲಿದೆ. ಹಲಸು ಹಚ್ಚುವ ಯಂತ್ರವೂ ಸಿಗಲಿದೆ.
ತುಮಕೂರಿನ ಹಿರೇಹಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರದವರು ವಿವಿಧ ರೀತಿಯ ಕೆಂಪು ಹಲಸಿನ ತಳಿಗಳನ್ನು ಪ್ರದರ್ಶನಕ್ಕೆ ತರಲಿದ್ದಾರೆ. ಹಲಸಿನ ಸಾಗುವಳಿ ಮತ್ತು ಮೌಲ್ಯವರ್ಧನೆ ಕುರಿತು ಮಾಹಿತಿ ನೀಡುತ್ತಾರೆ.ಶಂಕರ ಹಲಸು, ರುದ್ರಾಕ್ಷಿ ಬಕ್ಕೆ, ತೂಬಗೆರೆ, ಬೈರಸಂದ್ರ,ಸರ್ವ ಋತು,ಲಾಲ್ ಬಾಗ್ ಮಧುರ, ಥಾಯ್ ರೆಡ್, ವಿಯಟ್ನಾಂ ಸೂಪರ್ ಹರ್ಲಿ, ಗಮ್ ಲೆಸ್, ನಾಗಚಂದ್ರ, ರಾಮಚಂದ್ರ ಮೊದಲಾದ ಕರ್ನಾಟಕದ ಹೆಸರಾಂತ ಹಲಸಿನ ತಳಿ ಗಿಡಗಳು ಮಾರಾಟಕ್ಕೆ ಲಭ್ಯವಿರುತ್ತವೆ.
ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರದಲ್ಲಿ ನೊಂದಣಿಯಾಗಿರುವ ಕರ್ನಾಟಕ ರಾಜ್ಯದ ಮೊದಲ ಕೆಂಪು ಹಲಸಿನ ತಳಿ ಸಿದ್ದು ಹಲಸು ಗಿಡಗಳು ಮಾರಾಟಕ್ಕೆ ಬರುತ್ತಿವೆ.ಕವಿ, ಹಲಸು ಬೆಳೆಗಾರ ಕೃಷ್ಣಮೂರ್ತಿ ಬಿಳಿಗೆರೆ ಅವರು ಹಲಸಿನ ಹಬ್ಬವನ್ನು ಉದ್ಘಾಟಿಸುವರು. ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಅಧ್ಯಕ್ಷ ಎಸ್.ಕೆ. ಸುಧೀಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶನಿವಾರ 4ಕ್ಕೆ ಹಲಸು ಎತ್ತುವ ಮತ್ತು ಹಲಸಿನ ತೂಕ ಊಹಿಸುವ ಸ್ಫರ್ಧೆ ಇರಲಿದೆ. ಭಾನುವಾರದಂದು ಬೆಳಗ್ಗೆ 10.30 ರಿಂದ 5 -12 ವಯಸ್ಸಿನ ಮಕ್ಕಳಿಗೆ ನಾ ಕಂಡಂತೆ ಹಲಸು ಚಿತ್ರಕಲಾ ಸ್ಪರ್ಧೆ, ಮಧ್ಯಾಹ್ನ 12.30ಕ್ಕೆ ಹಲಸಿನ ಅಡುಗೆ ಸ್ಪರ್ಧೆ, ಮತ್ತು ಮಧ್ಯಾಹ್ನ 3ಕ್ಕೆ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಏರ್ಪಡಿಸಿದೆ. ನಿಗದಿತ ಸಮಯದಲ್ಲಿ ಹೆಚ್ಚು ಹಲಸಿನ ಹಣ್ಣಿನ ತೊಳೆ ತಿಂದವರನ್ನು ವಿಜೇತರಾಗಿ ಘೋಷಿಸಿ, ಬಹುಮಾನ ನೀಡಲಾಗುತ್ತದೆ,ಕರ್ನಾಟಕದ ವಿವಿದ ಭಾಗಗಳಿಂದ ಬರುವ 50 ಗ್ರಾಮೀಣ ಉದ್ದಿಮೆದಾರರು, ರೈತ ಕಂಪನಿಗಳು , ರೈತ ಮತ್ತು ಮಹಿಳಾ ಗುಂಪುಗಳು ಹಲಸಿನ ಮೌಲ್ಯವರ್ಧಿತ ಪದಾರ್ಥಗಳು, ಸಿರಿಧಾನ್ಯ, ಸಾವಯವ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳನ್ನು ಮಾರಾಟಕ್ಕೆ ತರಲಿದ್ದಾರೆ. ಮುಂಗಾರಿಗೆ ಬಿತ್ತಲು ತರಕಾರಿ ಬೀಜ, ಸಿದ್ದ ಸಣ್ಣ, ನವರ, ಎಚ್.ಎಂ.ಟಿ, ರಾಜಮುಡಿ,ಬರ್ಮಾ ಬ್ಲಾಕ್, ಚಿನ್ನಪೊನ್ನಿ, ಗಂಧಸಾಲೆಯಂಥ ದೇಸಿ ಭತ್ತಗಳು ಮತ್ತು ಹಣ್ಣಿನ ಗಿಡಗಳು ಮೇಳದಲ್ಲಿ ಲಭ್ಯವಿವೆ. ಹೆಚ್ಚಿನ ವಿವರಗಳಿಗೆ ಕೋಮಲ್ ಕುಮಾರ್, ಮೊ. 9880908608 ಸಂಪರ್ಕಿಸಬಹುದು.