ದೇವರ ಬೆಳಕೆರೆ, ಕುಮಾರನಹಳ್ಳಿ ಹಾಗೂ ಕೊಂಡಜ್ಜಿ ಕೆರೆಗಳನ್ನು ತುಂಬಿಸುವಂತೆ ಒತ್ತಾಯಿಸಿ ಹರಿಹರ ತಾಲೂಕಿನ ತುಂಗಭದ್ರಾ ನದಿಯಿಂದ ಚಿತ್ರದುರ್ಗ ಇತರೆ ಜಿಲ್ಲೆಗಳಿಗೆ ನೀರು ಪೂರೈಸುವ ಜಾಕ್‌ವೆಲ್‌ಗಳಿಗೆ ರೈತರ ಸಮೇತ ಮುತ್ತಿಗೆ ಹಾಕಿ, ನೀರು ಲಿಫ್ಟ್ ಮಾಡುವುದನ್ನು ತಡೆಯುವುದಾಗಿ ಶಾಸಕ ಬಿ.ಪಿ.ಹರೀಶ ಎಚ್ಚರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ದೇವರ ಬೆಳಕೆರೆ, ಕುಮಾರನಹಳ್ಳಿ ಹಾಗೂ ಕೊಂಡಜ್ಜಿ ಕೆರೆಗಳನ್ನು ತುಂಬಿಸುವಂತೆ ಒತ್ತಾಯಿಸಿ ಹರಿಹರ ತಾಲೂಕಿನ ತುಂಗಭದ್ರಾ ನದಿಯಿಂದ ಚಿತ್ರದುರ್ಗ ಇತರೆ ಜಿಲ್ಲೆಗಳಿಗೆ ನೀರು ಪೂರೈಸುವ ಜಾಕ್‌ವೆಲ್‌ಗಳಿಗೆ ರೈತರ ಸಮೇತ ಮುತ್ತಿಗೆ ಹಾಕಿ, ನೀರು ಲಿಫ್ಟ್ ಮಾಡುವುದನ್ನು ತಡೆಯುವುದಾಗಿ ಶಾಸಕ ಬಿ.ಪಿ.ಹರೀಶ ಎಚ್ಚರಿಸಿದ್ದಾರೆ.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಂಗಭದ್ರಾ ನದಿಯಿಂದ ದೂರದ ಜಿಲ್ಲೆಗಳಿಗೆ ನೀರೊಯ್ಯಲಾಗುತ್ತದೆ. ಅದರೆ, ನದಿ ಪಾತ್ರದ ಹರಿಹರ ತಾಲೂಕಿನ ರೈತರಿಗೆ, ಜನರಿಗೆ ಸರಿಯಾಗಿ ನೀರು ಪೂರೈಸದ ಹಿನ್ನೆಲೆ ತಮ್ಮ ಕ್ಷೇತ್ರದ ದೇವರ ಬೆಳಕೆರೆ, ಕುಮಾರನಹಳ್ಳಿ ಹಾಗೂ ಕೊಂಡಜ್ಜಿ ಕೆರೆಗಳನ್ನು ತುಂಬಿಸುವ ಯೋಜನೆಗಾಗಿ ನಮ್ಮ ಹೋರಾಟ ನಡೆಯಲಿದೆ ಎಂದರು.
ತುಂಗಭದ್ರಾ ನದಿಯಿಂದ ಅನ್ಯ ಜಿಲ್ಲೆಗಳ ಸಾವಿರಾರು ಕೆರೆಗಳಿಗೆ ನೀರು ಪೂರೈಸಲಾಗುತ್ತಿದೆ.ಆದರೆ, ನಮ್ಮದೇ ತಾಲೂಕಿನ ನಾಲೆಗಳು, ಕೆರೆಗಳು ಈಗ ನೀರಿಲ್ಲದೇ ಒಣಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಚಿತ್ರದುರ್ಗ ಜಿಲ್ಲೆ, ಜಗಳೂರು ತಾಲೂಕು ಇತರೆ ಪ್ರದೇಶಗಳಿಗೆ, ಜನರಿಗೆ ನೀರು ಪೂರೈಸಲು ನಮ್ಮ ವಿರೋಧವಿಲ್ಲ. ಆದರೆ, ನಮ್ಮ ಭಾಗದ ರೈತರು, ಜನರಿಗೂ ನೀರು ಕೊಡಬೇಕು. ನಮ್ಮ ತಾಲೂಕಿನ ಮೂರೂ ಕೆರೆಗಳಿಗೆ ಮೊದಲ ಆದ್ಯತೆ ನೀಡಿ ಎಂದು ಆಗ್ರಹಿಸಿದರು.ಇಡೀ ಜಿಲ್ಲಾದ್ಯಂತ ತೀವ್ರ ಬರ ಪರಿಸ್ಥಿತಿ ಆವರಿಸಿದೆ. ಎಂ ಸ್ಯಾಂಡ್ ಪೂರೈಸುವ ಕ್ವಾರಿ ಮಾಲೀಕರ ಮುಷ್ಕರ ಆರಂಭಿಸಿದ್ದು, ಕಾರ್ಮಿಕರು ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಉಸ್ತುವಾರಿ ಸಚಿವರು ದಾವಣಗೆರೆ ನಗರ, ಜಿಲ್ಲೆ ಬಿಟ್ಟು, ಬೆಂಗಳೂರು, ಮುಧೋಳ, ವಿದೇಶವೆಂದು ಪ್ರವಾಸದಲ್ಲಿ ತೊಡಗಿದ್ದಾರೆ. ಜಿಲ್ಲೆಯ ರೈತರ, ಜನರ ಸಮಸ್ಯೆಗಳು, ಅಭಿವೃದ್ಧಿ ವಿಚಾರಗಳ ಬಗ್ಗೆ ಸಚಿವರು, ಸರ್ಕಾರ ಮೊದಲು ಸ್ಪಂದಿಸಲಿ ಎಂದು ತಾಕೀತು ಮಾಡಿದರು.
ಹರಿಹರ ತಾಲೂಕಿನ ರೈತರ ಹಿತರಕ್ಷಣೆ ಹಾಗೂ ನೀರಾವರಿ ಸಮಸ್ಯೆಗಳ ಬಗ್ಗೆ ಜಿಲ್ಲಾ ಮಂತ್ರಿ ಹಾಗೂ ಸರ್ಕಾರ ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಹರಿಹರ ತೀವ್ರ ಬರ ಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಯಾಗಿದ್ದು, ಸರ್ಕಾರದಿಂದ ಅಧಿಕೃತ ಘೋಷಿಸಬೇಕು ಎಂದರು.ಭದ್ರಾ ಡ್ಯಾಂನಲ್ಲಿ 179 ಅಡಿಗಳಷ್ಟು ನೀರು ಸಮೃದ್ಧವಾಗಿದೆ. ಐಸಿಸಿ ಸಭೆಯಲ್ಲಿ ಕೆಲ ನಾಯಕರ ಸ್ವಾರ್ಥ ಹಾಗೂ ತಪ್ಪು ಮಾರ್ಗದರ್ಶನದಿಂದಾಗಿ ಮಳೆಗಾಲದ ಬೆಳೆಗಳಿಗೆ ನೀರು ಕೊಡದೇ ರೈತರಿಗೆ ವಂಚಿಸಲಾಯಿತು. ಮಳೆಗಾಲದ ಬೆಳೆಗೆ ನೀರು ಕೊಡದೇ ಬತ್ತವನ್ನೇ ನಂಬಿದ್ದ ಬಡ ರೈತರಿಗೆ ಸಂಕಷ್ಟ ತಂದೊಡ್ಡಲಾಗಿದೆ. ಅಚ್ಚುಕಟ್ಟು ಕೊನೆ ಭಾಗದ ರೈತರಿಗೆ ಆರ್ಥಿಕ ಸಂಕಷ್ಟ, ಜಾನುವಾರುಗಳಿಗೆ ಮೇವಿನ ತೀವ್ರ ಅಭಾವ ತಲೆದೋರುವಂತೆ ಮಾಡಿದ್ದಾರೆ. ಇದಕ್ಕೆ ಯಾರು ಹೊಣೆ? ಬೇಸಿಗೆ ಬೆಳೆಗೆ ನೀರು ಕೊಡಿಸುವ ಬಗ್ಗೆ ಜಿಲ್ಲಾ ಮಂತ್ರಿ ಹಾಗೂ ಜನ ಪ್ರತಿನಿಧಿಗಳು ಸ್ಪಷ್ಟನೆ ನೀಡದೇ ಮೌನವಹಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಚಿಕ್ಕಬಿದರಿ ಮಾರುತಿ, ನಂದಿಗಾವಿ ರಮೇಶ, ಟಿಂಕರ್ ಮಂಜಣ್ಣ ಇದ್ದರು.ನೀರಿಗಾಗಿ ಪ್ರೊ.ಸಿ.ನರಸಿಂಹಪ್ಪ ಮನವಿಗೂ ಕರಗದ ಸರ್ಕಾರ!
ದಾವಣಗೆರೆ: ಭದ್ರಾ ಡ್ಯಾಂನಿಂದ ಬಲ ಮತ್ತು ಎಡ ದಂಡೆ ನಾಲೆಗೆ 15 ದಿನ ನೀರು ಹರಿಸುವ ತೀರ್ಮಾನ ಕೈಗೊಂಡಿದ್ದು ಸ್ವಾಗತಾರ್ಹವಾಗಿದ್ದು, ಬೇಸಿಗೆ ಬೆಳೆಗೂ ಕನಿಷ್ಟ 120 ದಿನಗಳ ಕಾಲ ಸತತವಾಗಿ ನೀರು ಹರಿಸುವ ಬಗ್ಗೆ ಐಸಿಸಿ ಅಧ್ಯಕ್ಷರಾದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿ ಮಧು ಬಂಗಾರಪ್ಪ, ದಾವಣಗೆರೆ ಜಿಲ್ಲಾ ಮಂತ್ರಿ ಎಸ್ಸೆಸ್ ಮಲ್ಲಿಕಾರ್ಜುನ ಸ್ಪಷ್ಟನೆ ನೀಡಲಿ ಎಂದು ಹರಿಹರ ಶಾಸಕ ಬಿ.ಪಿ.ಹರೀಶ ಒತ್ತಾಯಿಸಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಆಗಸ್ಟ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಮಳೆಗಾಲದ ಬೆಳೆಗೆ ನೀರು ಬಿಡುವಂತೆ ಭಾರತೀಯ ರೈತ ಒಕ್ಕೂಟದ ಹಿರಿಯರಾದ ಪ್ರೊ.ಸಿ.ನರಸಿಂಹಪ್ಪ, ನಾನು ಸೇರಿದಂತೆ ಅನೇಕರು ಸರ್ಕಾರಕ್ಕೆ ಒತ್ತಾಯಿಸಿದ್ದೆವು. ಆದರೆ, ರೈತ ನಾಯಕ ತೇಜಸ್ವಿ ವಿ.ಪಟೇಲ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಜಿಪಂಮಾಜಿ ಸದಸ್ಯ ಮಹಾಬಲೇಶಗೌಡ ಸೇರಿದಂತೆ ಕೆಲವರು ವಿರೋಧಿಸಿದ್ದರು. ಶ್ರೀಮಂತ ಅಡಿಕೆ ಬೆಳೆಗಾರರ ಹಿತಕ್ಕಾಗಿ ವಿರೋಧಿಸಿದ್ದರೋ ಅಥವಾ ವಿರೋಧಿಸಿದವರ ಸ್ವಾರ್ಥವಿತ್ತೋ ಎಂಬುದು ನಮಗೆ ಗೊತ್ತಿಲ್ಲ ಎಂದರು.
ಮಳೆಗಾಲದ ಬೆಳೆಗೆ ನೀರು ಬಿಡಲು ವಿರೋಧಿಸಿದ್ದರಿಂದ ಭದ್ರಾ ಮೇಲ್ದಂಡೆಯಡಿ ವಾಣಿ ವಿಲಾಸ ಸಾಗರಕ್ಕೆ ಟ್ರಯಲ್ ರನ್ ಹೆಸರಿನಲ್ಲಿ 3 ಟಿಎಂಸಿ ನೀರು ಹರಿಸಲಾಗುತ್ತಿದೆ. ಹಿಂದೆ ತಾವು ಐಸಿಸಿ ಅಧ್ಯಕ್ಷರಿದ್ದಾಗ ಡ್ಯಾಂನಲ್ಲಿ 155 ಅಡಿ ನೀರಿದ್ದಾಗಲೇ ಮಳೆಗಾಲದ ಬೆಳೆ, ಬೇಸಿಗೆ ಬೆಳೆಗೆಂದು ಎರಡೂ ಬೆಳೆಗೆ ನೀರು ಕೊಡಿಸಿದ್ದೆವು. ಈಗ 179 ಅಡಿ ನೀರಿದ್ದರೂ ಮಳೆಗಾಲದ ಬೆಳೆ ರೈತರ ಕೈ ತಪ್ಪುವಂತೆ ಮಾಡಿದರು. ಈಗ ತಮ್ಮ ಹೋರಾಟದಿಂದ ನೀರು ಬಂದಿದೆಯೆನ್ನುವವರು ಮಳೆಗಾಲದ ಬೆಳೆಗೆ ನೀರಿಗೆ ಯಾಕೆ ವಿರೋಧಿಸಿದ್ದರೆಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ಇಂತಹ ವಿರೋಧದ ಕಾರಣಕ್ಕೆ 3 ಟಿಎಂಸಿ ನೀರು ಮೇಲ್ದಂಡೆಗೆ ಹೋಗುತ್ತಿದೆ ಎಂದು ದೂರಿದರು.ಪ್ರೊ.ಸಿ.ನರಸಿಂಹಪ್ಪ ಮಳೆಗಾಲದ ಬೆಳೆಗೆ ನೀರು ಹರಿಸುವಂತೆ ಕಳಕಳಿಯಿಂದ ಮನವಿ ಮಾಡಿದರೂ ತೇಜಸ್ವಿ ಪಟೇಲ್, ರೇಣುಕಾಚಾರ್ಯ, ಮಹಾಬಲೇಶಗೌಡ ವಿರೋಧಿಸಿದ್ದನ್ನೇ ಸರ್ಕಾರ ದುರುಪಯೋಗಪಡಿಸಿಕೊಂಡಿತು. ಮಳೆಗಾಲದ ಬೆಳೆಗೆ ಕೊಡದಿದ್ದರೆ ಬೇಸಿಗೆ ಬೆಳೆಗಾದರೂ ಗ್ಯಾರಂಟಿಯಾಗಿ ನೀರು ಕೊಡುತ್ತೀರಾ ಎಂಬ ಪ್ರಶ್ನೆಗೆ ಮಂತ್ರಿಗಳಾದ ಮಧು ಬಂಗಾರಪ್ಪ, ಎಸ್ಸೆಸ್ ಮಲ್ಲಿಕಾರ್ಜುನ, ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳ ಮೌನಕ್ಕೆ ಶರಣಾಗಿದ್ದರು. ಇಂತಹ ಸರ್ಕಾರದಲ್ಲಿ ಭದ್ರಾ ಅಚ್ಚುಕಟ್ಟು ಕೊನೆಯ ಭಾಗದ ರೈತರಿಗೆ ನೀರು ಸಿಗುವುದೇ ಅನುಮಾನ ಎಂದರು.
ಐಸಿಸಿ ಸಭೆಯಲ್ಲಿ ಸರ್ಕಾರ ಮನಸ್ಸು ಮಾಡಿ, ಮಳೆಗಾಲದ ಬೆಳೆಗೆ ನೀರು ಬಿಟ್ಟಿದ್ದರೆ ಕಡಿಮೆ ನೀರಿನಲ್ಲೇ ಬಡ ಭತ್ತ ಬೆಳೆಗಾರರು ನಾಟಿ ಮಾಡಿಕೊಳ್ಳುತ್ತಿದ್ದರು. ಮಳೆಗಾಲದ ಬೆಳೆಗೆ ನೀರು ಕೊಡದ ಸರ್ಕಾರ ಬೇಸಿಗೆಯಲ್ಲಿ ನೀರು ಹರಿಸುತ್ತದೆಂದು ಹೇಗೆ ನಂಬಬಹುದು? ಈಗ ನಾಲೆಗೆ ನೀರು ಹರಿಸುವಂತೆ ರಸ್ತೆ ತಡೆ, ಹೆದ್ದಾರಿ ಬಂದ್, ಟ್ರ್ಯಾಕ್ಟರ್‌ನಲ್ಲಿ ಮುತ್ತಿಗೆ ಅಂತೆಲ್ಲಾ ಹೋರಾಟ ನಡೆಸಿದವರು ರೈತರು, ಜನರ ಕಣ್ಣಿಗೆ ಮಂಕು ಬೂದಿ ಎರಚಲು ಹೊರಟಿದ್ದೀರಾ? ನಾ ಮುಂದು, ತಾ ಮುಂದು ಅಂತಾ ಹೋರಾಟ ಮಾಡುತ್ತೀರಾ? ಬೇಸಿಗೆಗೆ ಬೆಳೆಗೆ ಕೊಡದಿದ್ದರೆ ಮುಂದಿನ ಮಳೆಗಾಲದ ಬೆಳೆಗೂ ನೀರಿರುವುದಿಲ್ಲ ಎಂದು ಸೂಚ್ಯವಾಗಿ ಎಚ್ಚರಿಸಿದರು.ಅವಾಚ್ಯವಾಗಿ ನಿಂದಿಸಿದ ವಿಚಾರ ಸದನದಲ್ಲಿ ಪ್ರಸ್ತಾಪ: ತಮ್ಮ ಬಗ್ಗೆ ಜಿಲ್ಲಾ ಮಂತ್ರಿ ಎಸ್ಸೆಸ್ ಮಲ್ಲಿಕಾರ್ಜುನ ಅವಾಚ್ಯವಾಗಿ ನಿಂದಿಸಿದ ವಿಚಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು, ರಾಜ್ಯ ನಾಯಕರು ಸಭೆ ನಡೆಸಿ, ಸೆ.21ರಿಂದ ನಡೆಯುವ ಅಧಿವೇಶನದಲ್ಲಿ ಪ್ರಸ್ತಾಪಿಸಲಿದ್ದಾರೆ. ಹರಿಹರದಲ್ಲಿ ತಮ್ಮನ್ನು ಎಸ್ಸೆಸ್ ಮಲ್ಲಿಕಾರ್ಜುನ ಅವಾಚ್ಯವಾಗಿ ನಿಂದಿಸಿದ ವೇಳೆ ಸ್ಥಳದಲ್ಲೇ ಇದ್ದ ಪೊಲೀಸ್ ವೃತ್ತ ನಿರೀಕ್ಷಕರು ಸ್ವಯಂ ಪ್ರೇರಿತ ದೂರು ದಾಖಲು ಮಾಡಬೇಕಿತ್ತು. ಮಾಡಲಿಲ್ಲ ಏಕೆ? ಸದನದಲ್ಲಿ ನಾನೂ ಸಹ ಭದ್ರಾ ನೀರು, ನನ್ನ ಕ್ಷೇತ್ರದ 3 ಕೆರೆ ತುಂಬುವ ಯೋಜನೆ ಸೇರಿದಂತೆ ಅನೇಕ ವಿಷಯದ ಬಗ್ಗೆ ಧ್ವನಿ ಎತ್ತುವೆ. ದೂಡಾ ಸಭೆ ದಿನಾಂಕ ನಿಗದಿಪಡಿಸಿ, ಜಿಲ್ಲಾ ಮಂತ್ರಿ ಊರಲ್ಲಿಲ್ಲವೆಂದು ದಿಢೀರನೇ ಮುಂದೂಡುವುದು ಈ ಎಲ್ಲಾ ವಿಚಾರದ ಬಗ್ಗೆ ಪ್ರಸ್ತಾಪಿಸುವೆ ಎಂದು ಬಿ.ಪಿ.ಹರೀಶ ಹೇಳಿದರು.
---ವಾಣಿವಿಲಾಸ ಸಾಗರಕ್ಕೆ ಟ್ರಯಲ್ ರನ್ ಅಂತಾ ಈಗ 3 ಟಿಎಂಸಿ ಒಯ್ಯುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಆಪ್ತ ಶಾಸಕರ ಕ್ಷೇತ್ರಕ್ಕೆಂದು ಭದ್ರಾ ನಾಲೆಯನ್ನೇ ಸೀಳಿ ಕಾಮಗಾರಿ ಮಾಡಿಸಿದ್ದರು. ಈಗ ಡಿಕೆ ಶಿವಕುಮಾರ್ ಹಿರಿಯೂರು, ಕಡೂರು, ತರೀಕೆರೆಗೂ ಕೊಟ್ಟರು. ಮುಂದೆ ರಾಮನಗರ, ಮಂಡ್ಯ, ಹಾಸನ ಅಷ್ಟೇ ಏಕೆ, ಕನಕಪುರಕ್ಕೆ ಒಯ್ದರೂ ಅಚ್ಚರಿ ಇಲ್ಲ. ತಮಿಳುನಾಡಿಗೆ ಕಾವೇರಿ ನೀರು ಹರಿಸುವವರು ಭದ್ರಾ ಮೇಲೆ ಕಣ್ಣಿಟ್ಟಿದ್ದಾರೆ. ಇಲ್ಲಿನ ಅಸಮರ್ಥ, ಅನ್ಯಾಯಗಳ ವಿರುದ್ಧ ಧ್ವನಿ ಎತ್ತದಂತಹ ಜಿಲ್ಲಾ ಮಂತ್ರಿಗಳು, ಶಾಸಕರಿಂದಾಗಿ ಇಷ್ಟೆಲ್ಲಾ ಆಗುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಭದ್ರಾ ಅಚ್ಚುಕಟ್ಟು ಕೊನೆ ಭಾಗದ ರೈತರಿಗೆ ನೀರು ಸಿಗುವುದೇ ಕಷ್ಟಕರವಾಗಲಿದೆ.
ಬಿ.ಪಿ.ಹರೀಶ, ಹರಿಹರ ಬಿಜೆಪಿ ಶಾಸಕ