ಹಾವೇರಿ: ಶ್ರೀ ಜಗದ್ಗುರು ರೇಣುಕಾಚಾರ್ಯರು ಸಾಮಾನ್ಯರಲ್ಲ. ಜನ ಸಮುದಾಯದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಕೃತಿಗೈದ ಪರಮಾಚಾರ್ಯರು. ಸೌಹಾರ್ದ ಸಹಬಾಳ್ವೆಯ ಮಹತ್ವವನ್ನು ನಾಡಿನ ಜನತೆಗೆ ತಿಳಿಸಿದವರು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಹಿರೇಮಠ ಹೇಳಿದರು.ನಗರದ ಶ್ರೀ ಜಗದ್ಗುರು ರೇಣುಕ ಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಸೇವಾ ಸಮಿತಿ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೆ ವಿಶ್ವಕ್ಕೆ ಶಾಂತಿ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿಯೇ ನಾವುಗಳೆಲ್ಲರೂ ನಡೆದುಕೊಂಡು ಬರುತ್ತಿದ್ದೇವೆ. ಹಾಗಾಗಿ ಇಂತಹ ಮಹಾನ್ ವ್ಯಕ್ತಿಗಳ ಬಗ್ಗೆ ನಾವೆಲ್ಲರು ತಿಳಿದುಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಿಂದ ಜನರಲ್ಲಿ ಜಾಗೃತಿ ಮೂಡಿಸಬೇಕು. ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ. ರೇಣುಕಾಚಾರ್ಯರು ಬೋಧಿಸಿದ ಸಾಮಾಜಿಕ ಸಮಾನತೆ ಸಮಾಜದಲ್ಲಿನ ಮೇಲು-ಕೀಳು ಭಾವನೆಯನ್ನು ಹೋಗಲಾಡಿಸುವ ತತ್ವಗಳನ್ನು ಪಸರಿಸುವುದು ಈ ಆಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್. ಕೋರಿಶೆಟ್ಟರ್ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು, ಬಸವಣ್ಣ, ವಾಲ್ಮೀಕಿ ಜಯಂತಿ, ಅಂಬೇಡ್ಕರ ಜಯಂತಿ, ಅಂಬಿಗರ ಚೌಡಯ್ಯö, ಸರ್ವಜ್ಞö, ಶಿವಾಜಿ ಮಹಾರಾಜರು ಹೀಗೆ ಅನೇಕ ದಾರ್ಶನಿಕರು ಹಾಗೂ ಮಹಿಮಾಪುರುಷರ ಆಚರಣೆಗಳನ್ನು ಸರ್ಕಾರ ಎಲ್ಲ ಸಮಾಜದವರೂ ಒಟ್ಟುಗೂಡಿಸಿಕೊಂಡು ಆಚರಿಸುವಂತೆ ನಿರ್ದೇಶನ ನೀಡಿದೆ. ವಿಪರ್ಯಾಸ ಎಂದರೆ ಇತ್ತಿಚೀನ ದಿನಗಳಲ್ಲಿ ಆಯಾ ಸಮಾಜದವರಿಗೆ ಮಾತ್ರ ಆಚರಣೆಗಳು ಸೀಮಿತವಾಗಿರುವುದು ದುರ್ದೈವ. ಈ ವ್ಯವಸ್ಥೆ ಬದಲಾಗಬೇಕಿದೆ. ಎಲ್ಲರೂ ಕೂಡಿಕೊಂಡು ಶಾಂತಿ ಸೌಹಾರ್ದತೆಯಿಂದ ಆಚರಣೆ ಮಾಡುವುದು ಅಗತ್ಯವಾಗಿದೆ ಎಂದರು.ಹರಸೂರ ಬಣ್ಣದಮಠ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಿವೃತ್ತ ಪ್ರಾಚಾರ್ಯ ಪಿ.ಸಿ. ಹೀರೆಮಠ ಅವರು ಜಗದ್ಗುರು ರೇಣುಕಾಚಾರ್ಯರ ಪುರಾಣಗಳು ತತ್ವಗಳು ಹಾಗೂ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು.ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಪ್ರಸನ್ನ ಹಿರೇಮಠ, ರೇಣುಕಾ ಪುತ್ರನ್ನ ಸೇರಿದಂತೆ ಸಮಾಜದ ಮುಖಂಡರು ಗಣ್ಯರು ಸಾರ್ವಜನಿಕರು ಇದ್ದರು.