ಕನ್ನಡ ತಾಯಿ ಭುವನೇಶ್ವರಿ ಆರಾಧನೆಗೆ ಜಗಳೂರು ಸಜ್ಜು

| Published : Jan 11 2025, 12:47 AM IST

ಕನ್ನಡ ತಾಯಿ ಭುವನೇಶ್ವರಿ ಆರಾಧನೆಗೆ ಜಗಳೂರು ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿಯೇ ಹಿಂದುಳಿದ ತಾಲೂಕು, ಬರದ ನಾಡು ಎಂಬ ಹಣೆಪಟ್ಟಿ ಹೊತ್ತಿರುವ ಜಗಳೂರಿನಲ್ಲಿ ಬರೋಬ್ಬರಿ 29 ವರ್ಷಗಳ ನಂತರ ಕನ್ನಡ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ.

- ಬರೋಬ್ಬರಿ 29 ವರ್ಷಗಳ ನಂತರ ತಾಲೂಕಿನಲ್ಲಿ ಕನ್ನಡ ಹಬ್ಬ । ಸರ್ವಾಧ್ಯಕ್ಷರಾಗಿ ಡಾ. ಎ.ಬಿ.ರಾಮಚಂದ್ರಪ್ಪ

- - -

(ಲೋಗೋ: 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ)

- - - ಕನ್ನಡಪ್ರಭ ವಾರ್ತೆ ಜಗಳೂರು

ರಾಜ್ಯದಲ್ಲಿಯೇ ಹಿಂದುಳಿದ ತಾಲೂಕು, ಬರದ ನಾಡು ಎಂಬ ಹಣೆಪಟ್ಟಿ ಹೊತ್ತಿರುವ ಜಗಳೂರಿನಲ್ಲಿ ಬರೋಬ್ಬರಿ 29 ವರ್ಷಗಳ ನಂತರ ಕನ್ನಡ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ.

ಪಟ್ಟಣದ ಬಯಲು ರಂಗ ಮಂದಿರದಲ್ಲಿ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆಗಳು ಮುಗಿದಿವೆ. ಎರಡನೇ ಬಾರಿ ಸಮ್ಮೇಳನ ಆಯೋಜನೆ ಆಗಿರುವುದಕ್ಕೆ ಎಲ್ಲರಲ್ಲಿ ಹರ್ಷ ಮನೆ ಮಾಡಿದೆ. ಇಡೀ ಪಟ್ಟಣ ವಧುವಣಗಿತ್ತೆಯಂತೆ ಶೃಂಗಾರಗೊಂಡಿದೆ.

ಹೌದು, ಶನಿವಾರ, ಭಾನುವಾರ 2 ದಿನಗಳ ಕಾಲ ಜಗಳೂರು ಪಟ್ಟಣದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸರ್ವಾಧ್ಯಕ್ಷರಾಗಿ ಡಾ. ಎ.ಬಿ.ರಾಮಚಂದ್ರಪ್ಪ ಆಯ್ಕೆಯಾಗಿದ್ದಾರೆ. ಸಮ್ಮೇಳನಕ್ಕೆ ಅಂದಾಜು 3000 ಜನ ಸೇರುವ ಸಾಧ್ಯತೆಯಿದೆ. ನುಡಿ ಹಬ್ಬಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ನಡೆದಿವೆ.

ಬೃಹತ್ ವೇದಿಕೆ ನಿರ್ಮಾಣ:

ಬಯಲು ರಂಗ ಮಂದಿರದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದೆ. ಮೂರು ಸಾವಿರ ಕುರ್ಚಿಗಳನ್ನು ಹಾಕಲಾಗಿದೆ. 20 ಪುಸ್ತಕ ಮಾರಾಟ ಮಳಿಗೆಗಳು, ವಿವಿಧ ಇಲಾಖೆಗಳಿಂದ ಮಾಹಿತಿ ನೀಡುವ ಮಳಿಗೆಗಳು, ಚನ್ನಪಟ್ಟಣದ ಗೊಂಬೆಗಳ ಮಳಿಗೆ, ಮಹಿಳಾ ಸ್ವಸಹಾಯ ಸಂಘಗಳ ಮಳಿಗೆಗಳು ಸೇರಿ 30 ಮಳಿಗೆಗಳ ನಿರ್ಮಾಣ ಮಾಡಲಾಗಿದೆ. ನೋಂದಣಿ ಸಮಿತಿ, ಆರೋಗ್ಯ ಸಮಿತಿ, ಸಾಂಸ್ಕೃತಿಕ ಸಮಿತಿ, ವಸತಿ ಸಾರಿಗೆ ಸಮಿತಿ, ವಸ್ತು ಪ್ರದರ್ಶನ ಸಮಿತಿ ಹೀಗೆ ಅನೇಕ ಸಮಿತಿಗಳನ್ನು ರಚಿಸಿದ್ದು, ಬಂದಿರುವ ಅಷ್ಟೂ ಕನ್ನಡಾಭಿಮಾನಿಗಳಿಗೆ ಊಟದ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ದಾವಣಗೆರೆ ರಸ್ತೆ, ಬಿದರಕೆರೆ ರಸ್ತೆ, ಡಾ. ಅಂಬೇಡ್ಕರ್ ವೃತ್ತ, ರಾಜಕುಮಾರ್ ರಸ್ತೆ, ಚಳ್ಳಕೆರೆ ರಸ್ತೆ ಇಕ್ಕೆಲಗಳಲ್ಲಿ ಝಗಮಗಿಸುವ ವಿದ್ಯುತ್ ದೀಪಗಳಿಂದ ಶೃಂಗಾರಗೊಳಿಸಲಾಗಿದೆ.

ಪಟ್ಟಣ ಪ್ರವೇಶಿಸುವ 4 ಮುಖ್ಯ ದ್ವಾರಗಳಲ್ಲಿ ಬೃಹತ್ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದ್ದು, ಜ್ಞಾನಪೀಠ ಸಾಹಿತಿಗಳ ಭಾವಚಿತ್ರಗಳು ರಾರಾಜಿಸುತ್ತಿವೆ. ಎಲ್ಲೆಲ್ಲೂ ಕೆಂಪು, ಹಳದಿ ಕನ್ನಡ ಬಾವುಟಗಳು, ಎಲ್ಲ ಸರ್ಕಾರಿ ಕಚೇರಿಗಳು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿವೆ. ಸಾಹಿತ್ಯಾಸಕ್ತರ ಬ್ಯಾನರ್‌ಗಳು ರಸ್ತೆಯ ಇಕ್ಕೆಲಗಳಲ್ಲಿ ವಿಜೃಂಭಿಸುತ್ತಿವೆ.

ಜ.11ರಂದು ಶನಿವಾರ ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ, 9 ಗಂಟೆಗೆ ತಾಯಿ ಭುವನೇಶ್ವರಿ ಮತ್ತು ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ, ಬೆಳಗ್ಗೆ 11 ಗಂಟೆಗೆ ಸಮ್ಮೇಳನ ಉದ್ಘಾಟನಾ ಸಮಾರಂಭ ಸೇರಿ ವಿವಿಧ ಗೋಷ್ಠಿಗಳನ್ನು ಆಯೋಜನೆ ಮಾಡಲಾಗಿದೆ.

ಜ.12ರಂದು ಭಜನೆ, ವಚನಗಾಯನ, ಕವಿಗೋಷ್ಠಿ, ಬುಡಕಟ್ಟು ಸಮುದಾಯಗಳ ಸಂಸ್ಕೃತಿ ವಿಶೇಷ, ಸಂವಾದ, ಬಹಿರಂಗ ಅಧಿವೇಶನ, ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ:

3 ದಿನಗಳಿಂದ ಜಗಳೂರು ಪಟ್ಟಣವನ್ನು ಪೌರಕಾರ್ಮಿಕರು ಸ್ವಚ್ಛಗೊಳಿಸುತ್ತಿದ್ದಾರೆ. ಗುಂಡಿಬಿದ್ದ ರಸ್ತೆಗಳಿಗೆ ಡಾಂಬರ್ ಲೇಪನವಾಗುತ್ತಿದೆ. ಕನ್ನಡ ರಥ ಎಲ್ಲ ಗ್ರಾಮಗಳಿಗೆ ತೆರಳಿ ಅರಿವು ಮೂಡಿಸಿದ್ದು, ಈಗ ಸರ್ವಾಧ್ಯಕ್ಷರನ್ನು ಮೆರವಣಿಗೆ ಮಾಡಲು ಸಿದ್ಧವಾಗಿದೆ.

ಊಟದ ಮೆನು:

ಸಮ್ಮೇಳನ ನಡೆಯುವ ಬಯಲು ರಂಗ ಮಂದಿರ ಸಮೀಪದ ವಾಲ್ಮೀಕಿ ಕಲ್ಯಾಣ ಮಂಟಪ, ಗುರುಭವನದಲ್ಲಿ ಜ.11ರಂದು ಬೆಳಗ್ಗೆ ತಿಂಡಿ ಪುಲಾವ್, ಮಧ್ಯಾಹ್ನ ಗೋಧಿ ಹುಗ್ಗಿ, ಅನ್ನ ಸಾಂಬರ್, ರಾತ್ರಿ ಹೆಸರು ಬೇಳೆ ಪಾಯಸ ಮತ್ತು ಅನ್ನ ಸಾಂಬರ್ ಊಟದ ವ್ಯವಸ್ಥೆ ಮಾಡಲಾಗಿದೆ. ಜ.12ರಂದು ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು ಕೇಸರಿ ಬಾತ್, ಮಧ್ಯಾಹ್ನ ಶಾವಿಗೆ ಪಾಯಸದ ಊಟ, ರಾತ್ರಿಯೂ ಊಟದ ವ್ಯವಸ್ಥೆ ಮಾಡಲಾಗಿದೆ.

ಸಮ್ಮೇಳನ ವೇಳೆ ಅಸಮಾಧಾನ ಹೊಗೆ:

೨೯ ವರ್ಷಗಳ ನಂತರ ತಾಲೂಕಿನಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿದೆ. ಸ್ಥಳೀಯವಾಗಿ ಸೇವೆ ಸಲ್ಲಿಸಿದವರನ್ನು ಸರ್ವಾಧ್ಯಕ್ಷರನ್ನಾಗಿ ಮಾಡಬೇಕಾಗಿತ್ತು ಮತ್ತು ಸ್ಥಳೀಯ ಸಾಹಿತಿಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಕನ್ನಡ ಸಾಹಿತ್ಯಕ್ಕೆ ಶ್ರಮಿಸಿದವರನ್ನು ಸಂಪೂರ್ಣ ಕಡೆಗಣಿಸಲಾಗಿದೆ, ಶಾಸಕರ ಆಣತೆಯಂತೆ ಜಿಲ್ಲಾಮಟ್ಟದ ಸಮ್ಮೇಳನ ನಡೆಯುತ್ತಿದೆ, ಕಸಾಪ ಜಿಲಾಧ್ಯಕ್ಷರು ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡುವ ಮೂಲಕ ಹಿರಿಯ ಸಾಹಿತಿಗಳನ್ನೇ ಕಡೆಕಣಿಸಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.

- - -

ಬಾಕ್ಸ್-1* ₹20 ಲಕ್ಷ ವೆಚ್ಚದಲ್ಲಿ ಅದ್ಧೂರಿ ಆಯೋಜನೆ: ವಾಮದೇವಪ್ಪ ಸಮ್ಮೇಳನದ ಎಲ್ಲ ಸಿದ್ಧತೆಗಳೂ ಮುಗಿದಿವೆ. ಹೊರಜಿಲ್ಲೆಗಳ 10ಕ್ಕೂ ಹೆಚ್ಚು ಕಲಾ ತಂಡಗಳು, ಸ್ಥಳೀಯ ಕಲಾ ತಂಡಗಳ ಮೆರವಣಿಗೆಗೆ ಆಗಮಿಸುತ್ತಿವೆ. ಸ್ಥಳೀಯ ಜನಪದ ಕಲಾವಿದರ ಕಲಾ ಪ್ರಕಾರಗಳ ಜೊತೆಗೆ ಎತ್ತಿನ ಗಾಡಿಗಳ ಮೆರವಣಿಗೆ, ನೂರು ಜನ ಕಹಳೆ ವಾದಕರು ಆಗಮಿಸುತ್ತಿದ್ದಾರೆ. ಎಲ್ಲವೂ ಅಚ್ಚುಕಟ್ಟಾಗಿ ನೆರವೇರಿಸಿ, ಸಮ್ಮೇಳನದ ಯಶಸ್ವಿಗೆ ಕೈ ಜೋಡಿಸಲು ಎಲ್ಲ ಸಾಹಿತ್ಯಾಸಕ್ತರನ್ನೂ, ಸಾರ್ವಜನಿಕರನ್ನು ಮನವಿ ಮಾಡುತ್ತೇನೆ. ಜಗಳೂರಿನಲ್ಲಿ ನಡೆಯುವ ಸಮ್ಮೇಳನವು ವಿಭಿನ್ನವಾಗಿದ್ದು, ಸ್ಥಳೀಯ ಶಾಸಕರ ಸಹಕಾರದಿಂದ ಅದ್ಧೂರಿಯಾಗಿ ಮಾಡಲಾಗುತ್ತಿದೆ. ಸಮ್ಮೇಳನದ ವೆಚ್ಚ ಅಂದಾಜು ₹೨೦ ಲಕ್ಷ ದಾಟಬಹುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಪ್ರತಿಕ್ರಿಯೆ ನೀಡಿದರು.

- - - ಕೋಟ್ಸ್‌ 29 ವರ್ಷಗಳ ನಂತರ ಜಗಳೂರು ತಾಲೂಕಿನಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿದ್ದು ಸಂತಸ ತಂದಿದೆ. ಪ್ರತಿಯೊಬ್ಬರು ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಬಹುತೇಕ ಕೆರೆಗಳು ತುಂಬಿ ಕೊಡಿ ಬಿದ್ದ ಹಿನ್ನೆಲೆ ಸೋಮವಾರ ಜಲೋತ್ಸವ ಕಾರ್ಯಕ್ರಮ ಸಹ ನಡೆಯಲಿದೆ

- ಬಿ.ದೇವೇಂದ್ರಪ್ಪ, ಶಾಸಕ ಮತ್ತು ಅಧ್ಯಕ್ಷ, ಸಮ್ಮೇಳನ ಸ್ವಾಗತ ಸಮಿತಿ

ಜಗಳೂರು ತಾಲೂಕಿನಲ್ಲಿ ಹಲವಾರು ಸಾಹಿತಿಗಳು, ಕವಿ, ಚಿಂತಕರು ಹಾಗೂ ಲೇಖಕರಿದ್ದರೂ ಅವರನ್ನು ಗೋಷ್ಠಿಯಿಂದ ದೂರ ಇಡುವಂತಹ ಕೆಲಸ ಮಾಡಿದ್ದು ಜಿಲ್ಲಾಧ್ಯಕ್ಷರ ಕಾರ್ಯವೈಖರಿಗೆ ಕೈಗನ್ನಡಿ ಹಿಡಿದಿದೆ

- ಸಂಗೇನಹಳ್ಳಿ ಅಶೋಕ್ ಕುಮಾರ್, ಸಾಹಿತಿ

ಜಿಲ್ಲಾಮಟ್ಟದ ಸಮ್ಮೇಳನ ಎಲ್ಲ ಹಿರಿಯ ಸಾಹಿತ್ಯಾಸಕ್ತರನ್ನು ಒಳಗೊಂಡಂತೆ ವಿಶಾಲ ತಳಹದಿಯ ಮೇಲೆ ನಡೆಯಬೇಕಿತ್ತು. ಆದರೆ ಈ ಸಮ್ಮೇಳನ ಸಂಕುಚಿತವಾಗಿ ನಡೆಯುತ್ತಿರುವುದು ವಿಷಾದ ತಂದಿದೆ

- ದೊಣಿಹಳ್ಳಿ ಗುರುಮೂರ್ತಿ, ಪತ್ರಕರ್ತ

- - - -10ಜೆ.ಎಲ್‍.ಆರ್.ಚಿತ್ರ1: ಜಿಲ್ಲಾ ಸಾಹಿತ್ಯ ಸಮ್ಮೇಳನ ಹಿನ್ನೆಲೆ ಮುಖ್ಯ ಪ್ರವೇಶ ದ್ವಾರಗಳಲ್ಲಿ ಬೃಹತ್ ಸ್ವಾಗತ ಕಮಾನುಗಳ ನಿರ್ಮಿಸಿರುವುದು.

-10ಜೆಜಿಎಲ್2: ಸಮ್ಮೇಳನ ಹಿನ್ನೆಲೆ ಜನಜಾಗೃತಿಗಾಗಿ ಜಗಳೂರು ತಾಲೂಕಿನ 22 ತಾಪಂ ಕೇಂದ್ರಗಳಿಗೆ ಸಂಚರಿಸಿದ ಕನ್ನಡ ರಥ ಯಾತ್ರೆ.