ಸಾರಾಂಶ
ಕರ್ನಾಟಕ ಮಾತ್ರವಲ್ಲದೆ ಇಡೀ ದೇಶಕ್ಕೆ ಮೈಸೂರು ಮಹಾರಾಜರು ಸ್ಮರಣೀಯ ಕೊಡುಗೆ ನೀಡಿದ್ದಾರೆ. ದೂರದೃಷ್ಟಿ ಇಟ್ಟುಕೊಂಡು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಹತ್ತು ಹಲವು ಕೊಡುಗೆ ನೀಡಿದ ಮೈಸೂರು ಮಹಾರಾಜರು ಎಂದೆಂದೂ ನೆನಪಾಗಿ ಉಳಿಯುತ್ತಾರೆ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ತ್ಯಾಗರಾಜ ರಸ್ತೆಯಲ್ಲಿರುವ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ರಾಜಗೋಪುರ ಹಾಗೂ ಶ್ರೀ ಚಾಮರಾಜ ಒಡೆಯರ್ ಭವನ ನಿರ್ಮಾಣಕ್ಕೆ ಉದ್ಯಮಿ ಎಂ. ಜಗನ್ನಾಥ ಶೆಣೈ ಅವರು ಮಂಗಳವಾರ ಗುದ್ದಲಿಪೂಜೆ ನೆರವೇರಿಸಿದರು.ನಂತರ ಜಗನ್ನಾಥ ಶೆಣೈ ಮಾತನಾಡಿ, ಆದಷ್ಟು ಬೇಗ ರಾಜಗೋಪುರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು. ರಾಜಗೋಪುರ ನಿರ್ಮಾಣಕ್ಕೆ ನನ್ನ ಕೈಲಾದ ಸೇವೆ ನೀಡುವುದಾಗಿ ಹೇಳಿದರು.
ಮಾಜಿ ಸಚಿವ ಎಸ್.ಎ. ರಾಮದಾಸ್ ಮಾತನಾಡಿ, ‘ಗೋಪುರ ನಿರ್ಮಾಣ ಕಾರ್ಯಕ್ಕೆ ಅವಶ್ಯವಿರುವ ಹಣಕಾಸು ಕ್ರೋಢೀಕರಣಕ್ಕೆ ವೇಣುಗೋಪಾಲ ಸ್ವಾಮಿಯೇ ದಯೆ ತೋರುತ್ತಾನೆ. ಇದರಿಂದ ಆದಷ್ಟು ಬೇಗ ಗೋಪುರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.ಕರ್ನಾಟಕ ಮಾತ್ರವಲ್ಲದೆ ಇಡೀ ದೇಶಕ್ಕೆ ಮೈಸೂರು ಮಹಾರಾಜರು ಸ್ಮರಣೀಯ ಕೊಡುಗೆ ನೀಡಿದ್ದಾರೆ. ದೂರದೃಷ್ಟಿ ಇಟ್ಟುಕೊಂಡು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಹತ್ತು ಹಲವು ಕೊಡುಗೆ ನೀಡಿದ ಮೈಸೂರು ಮಹಾರಾಜರು ಎಂದೆಂದೂ ನೆನಪಾಗಿ ಉಳಿಯುತ್ತಾರೆ ಎಂದು ಅವರು ಸ್ಮರಿಸಿದರು.
ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಗೋಪುರವು ಸುಮಾರು 10 ಅಡಿ ಇದೆ. ಆದ ಕಾರಣ ಈ ಗೋಪುರವನ್ನು ನೆಲಸಮಗೊಳಿಸಿ 25 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ರಾಜಗೋಪುರ ನಿರ್ಮಿಸಲಾಗುತ್ತಿದೆ.ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಶ್ರೀಧರರಾಜ ಅರಸ್, ವರ್ಚಸ್ವಿ ಸಿದ್ದಲಿಂಗರಾಜೇ ಅರಸ್, ಖಜಾಂಚಿ ಎಂ.ಆರ್. ನಾಗಲಲಿತ, ಟ್ರಸ್ಟಿಗಳಾದ ಮದನಗೋಪಾಲ ರಾಜೇ ಅರಸ್, ಸ್ವರೂಪ ಆನಂದ, ದತ್ತ ಅರಸ್, ಎಚ್.ಎಸ್. ಮಹೇಶ್ವರಿ, ನಗರ ಪಾಲಿಕೆ ಮಾಜಿ ಸದಸ್ಯ ಬಿ.ವಿ. ಮಂಜುನಾಥ್, ಚುಟುಕು ಸಾಹಿತಿ ಡಾ.ಎಂ.ಜಿ.ಆರ್. ಅರಸ್ ಮೊದಲಾದವರು ಇದ್ದರು.