ಕಾಂಗ್ರೆಸ್‌ ಮೋಸಕ್ಕೆ ಜಗದೀಶ್‌ ಶೆಟ್ಟರ್‌ ಸಾಕ್ಷಿ: ದೇವೇಗೌಡ

| Published : Jan 26 2024, 01:47 AM IST

ಕಾಂಗ್ರೆಸ್‌ ಮೋಸಕ್ಕೆ ಜಗದೀಶ್‌ ಶೆಟ್ಟರ್‌ ಸಾಕ್ಷಿ: ದೇವೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಉತ್ಸಾಹವನ್ನು ಕಾಂಗ್ರೆಸ್‌ ಅವರನ್ನು ಸಚಿವರಾಗಿ ಮಾಡಲು ತೋರಲಿಲ್ಲ. ಕಾಂಗ್ರೆಸ್‌ ಹೇಗೆ ಮೋಸ ಮಾಡುತ್ತದೆ ಎಂಬುದಕ್ಕೆ ಜಗದೀಶ್‌ ಶೆಟ್ಟರ್‌ ಅವರೇ ಸಾಕ್ಷಿ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕಿಡಿಕಾರಿದರು. ಹಾಸನದಲ್ಲಿ ಮಾತನಾಡಿದರು.

ಮಾಜಿ ಪ್ರಧಾನಿ ಹೇಳಿಕೆ । ಜಗದೀಶ್‌ ಬಗ್ಗೆ ಕೈ ಗೆ ತಾತ್ಸಾರ । ನನ್ನ ಬದಲಿಗೆ ಪ್ರಜ್ವಲ್‌ ಸ್ಪರ್ಧೆ । ನಿಖಿಲ್‌ ಸ್ಪರ್ಧೆ ಚರ್ಚೆ ಆಗಿಲ್ಲಕನ್ನಡಪ್ರಭ ವಾರ್ತೆ ಹಾಸನ

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಉತ್ಸಾಹವನ್ನು ಕಾಂಗ್ರೆಸ್‌ ಅವರನ್ನು ಸಚಿವರಾಗಿ ಮಾಡಲು ತೋರಲಿಲ್ಲ. ಕಾಂಗ್ರೆಸ್‌ ಹೇಗೆ ಮೋಸ ಮಾಡುತ್ತದೆ ಎಂಬುದಕ್ಕೆ ಜಗದೀಶ್‌ ಶೆಟ್ಟರ್‌ ಅವರೇ ಸಾಕ್ಷಿ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕಿಡಿಕಾರಿದರು.

ನಗರದ ಸಂಸದರ ನಿವಾಸದಲ್ಲಿ ಗುರುವಾರ ಮಾಧ್ಯಮದೊಂದಿಗೆ ಮಾತನಾಡಿ, ಶೆಟ್ಟರ್‌ ಬಗ್ಗೆ ಕಾಂಗ್ರೆಸ್‌ಗೆ ತಾತ್ಸಾರ ಇದೆ. ಪಕ್ಷಕ್ಕೆ ಸೇರಿದರೂ ಅವರನ್ನು ಮಂತ್ರಿ ಮಾಡಲಿಲ್ಲ. ಈ ಮೂಲಕ ಕಾಂಗ್ರೆಸ್‌ ಜಗದೀಶ್‌ ಶೆಟ್ಟರ್ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

‘ಶೆಟ್ಟರ್ ಸಿಎಂ ಆಗಿ ರಾಜ್ಯದಲ್ಲಿ ಒಂದುಕಾಲು ವರ್ಷ ಸಮರ್ಥವಾಗಿ ಕೆಲಸ ಮಾಡಿದ್ದವರು, ವಿಪಕ್ಷ ನಾಯಕರಾಗಿದ್ದವರು. ಅವರಿಗೆ ಕಾಂಗ್ರೆಸ್ ಹೇಗೆ ಮೋಸ ಮಾಡುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ.

ಕಾಂಗ್ರೆಸ್ ಜೊತೆಗೆ ಮೈತ್ರಿ ಆದಾಗ ನನ್ನ ಮಗ ಸಿಎಂ ಆಗೋದು ಬೇಡ ಎಂದೆ. ಆದರೆ 13 ತಿಂಗಳಲ್ಲೇ ಸರ್ಕಾರ ತೆಗೆದರು. ಕಾಂಗ್ರೆಸ್‌ನ ದೌರ್ಬಲ್ಯ ಇದು. ಕಾಂಗ್ರೆಸ್ ಹಂತ ಹಂತವಾಗಿ ನೆಲ ಕಚ್ಚುತ್ತಿದೆ’ ಎಂದು ಲೇವಡಿ ಮಾಡಿದರು.

‘ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದರೂ ಪ್ರಜ್ವಲ್ ರೇವಣ್ಣ ಹಾಲಿ ಸಂಸದರಾಗಿದ್ದಾರೆ. ಆದ್ದರಿಂದ ಬಿಜೆಪಿಯವರನ್ನು ಕೇಳುವುದಕ್ಕೂ ಮುಂಚೆಯೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ಅಭ್ಯರ್ಥಿ ಎಂದು ಘೋಷಿಸಿದ್ದೇನೆ. ನಾನು ಸ್ಪರ್ಧಿಸುತ್ತೇನೆ ಎನ್ನುವ ಊಹಾಪೋಹ ಬೇಡ. ನಾನಂತೂ ಸ್ಪರ್ಧಿಸುವುದಿಲ್ಲ’ ಎಂದು ಎಚ್‌.ಡಿ.ದೇವೇಗೌಡ ಸ್ಪಷ್ಟಪಡಿಸಿದರು.

‘ಮೈತ್ರಿಯಲ್ಲಿ ನಮಗೆ ಎಷ್ಟು ಸೀಟು ಎಂದು ನಿರ್ಣಯ ಆಗಿಲ್ಲ. ಆದರೂ ಪ್ರಜ್ವಲ್ ರೇವಣ್ಣ ಹಾಲಿ ಸಂಸದನಾಗಿ ಇರುವುದರಿಂದ ಸ್ವತಃ ನಾನೇ ನಿರ್ಣಯ ಮಾಡಿದ್ದೇನೆ. ದೇವೇಗೌಡರು ನಿಲ್ಲುತ್ತಾರೆ ಎಂಬ ಚರ್ಚೆ ನಡೆದಿತ್ತು. ಆದ್ದರಿಂದ ನಾನೇ ಅಭ್ಯರ್ಥಿಯನ್ನು ಘೋಷಿಸಿದ್ದೇನೆ. ಗೌರವಾನ್ವಿತ ವಿಜಯೇಂದ್ರ ಅವರು ಮನೆಗೆ ಬಂದಾಗ ಪ್ರಜ್ವಲ್ ರೇವಣ್ಣ ಅವರೇ ಅವರನ್ನು ಸ್ವಾಗತ ಮಾಡಿದ್ದಾರೆ. ಹಿಂದೆ ನಾವು ಅವರ ವಿರುದ್ಧ ಹೋರಾಟ ಮಾಡಿರಬಹುದು. ಆದರೆ ನಮ್ಮ ಹೊಂದಾಣಿಕೆ ಆಗಿದೆ. ಈಗ ಒಟ್ಟಿಗೆ ಹೋರಾಡಬೇಕಿದೆ’ ಎಂದು ಹೇಳಿದರು.

ರಾಮಮಂದಿರ ಉದ್ಘಾಟನೆ ಬಗ್ಗೆ ಕಾಂಗ್ರೆಸ್ ಟೀಕೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ನಮ್ಮ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ನಾನು ಗಾಂಧಿ ರಾಮನನ್ನು ಪೂಜೆ ಮಾಡಿದೆ ಎಂದಿದ್ದಾರೆ. ಸಿದ್ದರಾಮಯ್ಯ ನಾನೇ ರಾಮ ಎಂದಿದ್ದಾರೆ. ಆದರೆ ಅಲ್ಲಿ ಇರೋದು ದಶರಥನ ಮಗ ರಾಮ ಒಬ್ಬನೆ. ಒಬ್ಬನೇ ಕೌಸಲ್ಯೆ ಮಗ ರಾಮ’ ಎಂದು ತಿರುಗೇಟು ನೀಡಿದರು. ‘

ನಮ್ಮ ಮೈಸೂರಿನ ಶಿಲ್ಪಿ ಅದ್ಭುತವಾಗಿ ಆ ಮೂರ್ತಿ ಕೆತ್ತಿದ್ದಾರೆ. ಮೋದಿ ಹನ್ನೊಂದು ದಿನ ವ್ರತಕ್ಕೆ ಕಾಂಗ್ರೆಸ್ ಟೀಕೆ ಮಾಡಿದೆ. ಇದೆಲ್ಲಾ ಅನವಶ್ಯಕವಾಗಿ ಮಾತನಾಡಬಾರದು’ ಎಂದು ಬುದ್ದಿವಾದ ಹೇಳಿದರು.

ನಿಖಿಲ್ ಸ್ಪರ್ಧೆ ತೀರ್ಮಾನವಾಗಿಲ್ಲ:

ಕುಮಾರಸ್ವಾಮಿ, ನಿಖಿಲ್ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡುತ್ತ, ‘ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಮೋದಿ ಏನು ಹೇಳ್ತಾರೋ ಗೊತ್ತಿಲ್ಲ. ಕುಮಾರಸ್ವಾಮಿ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ತುಮಕೂರು, ಮಂಡ್ಯ ಎಲ್ಲಿಯಾದರೂ ಸ್ಪರ್ಧಿಸಬಹುದು. ಆದರೆ ನಿಖಿಲ್ ಸ್ಪರ್ಧೆ ಬಗ್ಗೆ ಇಲ್ಲಿಯವರೆಗೆ ಯಾವುದೇ ಚರ್ಚೆ ಆಗಿಲ್ಲ. ಕುಮಾರಸ್ವಾಮಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಗುತ್ತೆ ಎಂಬ ಊಹಾಪೋಹ ಇದೆ. ಇದರ ಬಗ್ಗೆ ನಿರ್ದಿಷ್ಟವಾಗಿ ತಿಳಿದಿಲ್ಲ. ನಿಖಿಲ್ ಸ್ಪರ್ಧೆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಅದಕ್ಕೆ ಕುಮಾರಸ್ವಾಮಿ ಒಪ್ಪಿಗೆ ಕೊಡಬೇಕು. ಅವರು ಒಪ್ಪಿದರೆ ಮಾತ್ರ ನಿಖಿಲ್ ಸ್ಪರ್ಧೆ ಮಾಡಬಹುದು. ನಿಖಿಲ್ ಸಿನಿಮಾ ರಂಗದಲ್ಲಿ ಇದ್ದಾರೆ. ಆದರೆ ಅವರು ಉತ್ಸಾಹದಿಂದ ಪಕ್ಷದ ಸಂಘಟನೆ ಮಾಡುತ್ತಿದ್ದಾರೆ. ದೆಹಲಿ ಭೇಟಿ ವೇಳೆ ನಿಖಿಲ್ ಕೂಡ ಇದ್ದರು. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಆದರೆ ಕುಮಾರಸ್ವಾಮಿಗೆ ನಿಖಿಲ್ ಸ್ಪರ್ಧೆ ಬಗ್ಗೆ ಒಲವಿಲ್ಲ’ ಎಂದು ದೇವೇಗೌಡರು ಮಾರ್ಮಿಕವಾಗಿ ಹೇಳಿದರು.

ಇಂಡಿಯಾದಲ್ಲಿ ಒಡಕಿದೆ:

ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ಒಕ್ಕೂಟದಲ್ಲಿ ಒಡಕು ವಿಚಾರವಾಗಿ ಮಾತನಾಡಿ, ‘ಮಮತಾ ಬ್ಯಾನರ್ಜಿಯವರು ಮಾತ್ರ ಅಭಿಪ್ರಾಯ ಹೇಳಿಲ್ಲ. ಎಎಪಿಯವರೂ ಕೂಡ ಇದೇ ಅಭಿಪ್ರಾಯ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಶಿಂಧೆ ಸೇರಿ ಎಲ್ಲರೂ ಇದೇ ಹೇಳಿದ್ದಾರೆ. ಒಂದು ಪ್ರಾದೇಶಿಕ ಪಕ್ಷದ ಜೊತೆ ನಿಂತು ಈ ದೇಶದಲ್ಲಿ ಒಂದು ಸದೃಢ ಸರ್ಕಾರ ಕೊಡುತ್ತೇವೆ ಎಂಬ ಮನೋಭಾವ ಕಾಂಗ್ರೆಸ್‌ಗಿಲ್ಲ. ರಾಹುಲ್ ತಡೆದದ್ದಕ್ಕೆ ಕೇವಲ ಅಸ್ಸಾಂ ಸಿಎಂ, ಬಿಜೆಪಿಯನ್ನು ದೂರುವುದು ಬೇಡ. ಅಸ್ಸಾಂನಲ್ಲಿ ಸಾವಿರಾರು ಜನ ಅಕ್ರಮ ನುಸುಳುಕೋರರಿದ್ದಾರೆ. ಆ ಆಕ್ರಮಿತ ಸ್ಥಳಕ್ಕೆ ರಾಹುಲ್ ಹೋಗದಂತೆ ತಡೆದಿದ್ದಾರೆ. ಮನಮೋಹನ್ ಸಿಂಗ್ ಆರು ಬಾರಿ ರಾಜ್ಯಸಭೆ ಸದಸ್ಯರಾದರೂ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಿಲ್ಲ’ ಎಂದರು.

ಮುಂದಿನ ವಾರ ಸಭೆ:

‘ಸೀಟು ಹಂಚಿಕೆ ಕುರಿತು ಮುಂದಿನ ವಾರ ದೆಹಲಿಯಲ್ಲಿ ಸಭೆ ಇದ್ದು, ಬಿಜೆಪಿ ಅಧ್ಯಕ್ಷರು, ಅಮಿತ್ ಶಾ ಎಲ್ಲಾ ಸೇರಿ ತೀರ್ಮಾನ ಮಾಡಬಹುದು. ಕುಮಾರಸ್ವಾಮಿ ಅವರು ರಾಜ್ಯ ಬಿಜೆಪಿಯ ಮುಖಂಡರಾದ ಬೊಮ್ಮಾಯಿ, ಯಡಿಯೂರಪ್ಪ ಎಲ್ಲರೊಟ್ಟಿಗೆ ಸಮಾಲೋಚನೆ ಮಾಡಿ ಯಾರು ಎಲ್ಲಿ ನಿಲ್ಲಬೇಕು ಎಂದು ಚರ್ಚಿಸಿದ್ದಾರೆ. ಅವರ ತೀರ್ಮಾನಕ್ಕೆ ನಾನು ಮಧ್ಯಪ್ರವೇಶ ಮಾಡುವುದಿಲ್ಲ. ಮಂಡ್ಯ, ಕೋಲಾರ, ಹಾಸನ, ತುಮಕೂರು ಸಿಗುತ್ತವೆ ಎಂಬ ಚರ್ಚೆ ನಡೆಯುತ್ತಿದೆ. ನಾನೇ ಸ್ಪರ್ಧೆ ಮಾಡುತ್ತೇನೆ ಎಂಬ ಚರ್ಚೆ ನಡೆದಿತ್ತು. ಆದರೆ ನನಗೆ ಈಗಾಗಲೇ ೯೧ ವರ್ಷ ವಯಸ್ಸಾಗಿದೆ. ನಾನು ಜನರ ಮುಂದೆ ಹೋಗಿ ಮತ ಕೇಳಲು ಸಾಧ್ಯವಿಲ್ಲ. ಆದ್ದರಿಂದ ನಾನು ಪ್ರಜ್ವಲ್ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ’ ಎಂದರು.