ಜಗದೀಶ ಶೆಟ್ಟರ್‌ ಸೇರ್ಪಡೆಯಿಂದ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಬಲ: ಸಂಸದ ಬಿ.ವೈ. ರಾಘವೇಂದ್ರ

| Published : Jan 27 2024, 01:17 AM IST

ಜಗದೀಶ ಶೆಟ್ಟರ್‌ ಸೇರ್ಪಡೆಯಿಂದ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಬಲ: ಸಂಸದ ಬಿ.ವೈ. ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಜಗದೀಶ ಶೆಟ್ಟರ್ ಬಿಜೆಪಿಗೆ ವಾಪಸಾಗಿದ್ದು ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಇನ್ನಷ್ಟು ಬಲ ತಂದಿದೆ. ಬರುವ ದಿನದಲ್ಲಿ ಅನೇಕ ಪ್ರಮುಖರು, ವಿವಿಧ ಕಾರಣದಿಂದ ದೂರ ಆದವರು ಸಹ ಬಿಜೆಪಿಗೆ ಬರಲಿದ್ದಾರೆ.

ಶಿರಸಿ:

ಜಗದೀಶ ಶೆಟ್ಟರ್ ಬಿಜೆಪಿಗೆ ವಾಪಸಾಗಿದ್ದು ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಇನ್ನಷ್ಟು ಬಲ ತಂದಿದೆ. ಬರುವ ದಿನದಲ್ಲಿ ಅನೇಕ ಪ್ರಮುಖರು, ವಿವಿಧ ಕಾರಣದಿಂದ ದೂರ ಆದವರು ಸಹ ಬಿಜೆಪಿಗೆ ಬರಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಶುಕ್ರವಾರ ನಗರಕ್ಕೆ ಆಗಮಿಸಿದ್ದ ಅವರು ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.ನರೇಂದ್ರ ಮೋದಿ ಅವರ ನಾಯಕತ್ವವನ್ನು ಜನ ಒಪ್ಪಿದ್ದಾರೆ. ಬಿಜೆಪಿ ಸರ್ಕಾರ ಇನ್ನೊಮ್ಮೆ ಬಂದರೆ ದೇಶದ ಭವಿಷ್ಯ ಇನ್ನಷ್ಟು ಉಜ್ವಲವಾಗಲಿದೆ ಎಂದು ಅವರು ಅರಿತಿದ್ದಾರೆ. ರಾಜ್ಯದ ಎಲ್ಲ 28 ಸ್ಥಾನಗಳು ಬಿಜೆಪಿ ಪಾಲಾಗಲಿದ್ದು, ಕೇಂದ್ರಕ್ಕೆ ರಾಜ್ಯದ ಕೊಡುಗೆ ಆಗಲಿದೆ. ರಾಷ್ಟ್ರದ ಹಿತ ಚಿಂತನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ ನೀಡಲಿದ್ದಾರೆ ಎಂದರು.2047ಕ್ಕೆ ನೂರು ವರ್ಷಗಳು ತುಂಬುವ ಈ ಸಂದರ್ಭದಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶಗಳ ಪಟ್ಟಿಯಲ್ಲಿ ಸೇರಬೇಕು ಎಂಬುದು ಪ್ರಧಾನಿ ಕನಸು. ಈ ಕನಸು ನನಸು ಮಾಡಲು ನಾವೆಲ್ಲ ಶ್ರಮಿಸಬೇಕು ಎಂದ ಅವರು, ಅನಂತಕುಮಾರ ಹೆಗಡೆ ಅವರ ಹೇಳಿಕೆಗಳ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ನಮ್ಮ ಪಕ್ಷದ ನಾಯಕರೂ ಸಹ ಈ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದ ಅವರು, ಮಧು ಬಂಗಾರಪ್ಪ ಅವರೂ ಏಕವಚನದಲ್ಲಿ ಮಾತನಾಡಿದ್ದು, ಅವರಿಂದ ಮತ್ತು ಕಾಂಗ್ರೆಸ್‌ನಿಂದ ನಾವೇನು ನಿರೀಕ್ಷೆ ಮಾಡಲು ಸಾಧ್ಯ? ಮಧು ಬಂಗಾರಪ್ಪ ಅವರು ಬಳಸುವ ಶಬ್ದಗಳು ಅವರ ಗೌರವಯುತ ಸ್ಥಾನ, ಬಂಗಾರಪ್ಪನವರ ಸುಪುತ್ರರಾಗಿ ಅವರಿಗೆ ಒಪ್ಪುವುದಿಲ್ಲ. ಅವರ ಘನತೆಗೆ ತಕ್ಕುದಲ್ಲ ಎಂದರು.ಕೇಂದ್ರದಲ್ಲಿ ಈ ಬಾರಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ಅಭೂತಪೂರ್ವ ಬೆಂಬಲ ಮೋದಿ ಅವರಿಗಿದ್ದು ಪ್ರಜೆಗಳಿಗೆ ನೀಡಿದ ಮೋದಿ ಗ್ಯಾರಂಟಿಗಿಂತ ಬೇರಾವ್ಯ ಗ್ಯಾರಂಟಿಯೂ ಪ್ರಭಾವಿಯಲ್ಲ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಮೋದಿ ಅವರನ್ನು ಬೆಂಬಲಿಸಲು ಅನೇಕ ಪಕ್ಷಗಳ ನಾಯಕರು ನಮ್ಮೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದರು.