ದೇಶದ ಭವಿಷ್ಯ ರೂಪಿಸುವಲ್ಲಿ ಎಲ್ಲರು ಒಟ್ಟಾಗಿ ಶ್ರಮಿಸೋಣ

| Published : Jan 27 2024, 01:17 AM IST

ಸಾರಾಂಶ

ಡಾ.ಬಿ.ಆರ್.ಅಂಬೇಡ್ಕರ್ ಶ್ರಮದ ಫಲವಾಗಿ ರಚಿಸಲ್ಪಟ್ಟಿರುವ ಸಂವಿಧಾನವು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯಾಗುವ ಅವಕಾಶ ನಮಗೆ ದೊರೆತಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಬಿ.ಆರ್.ಅಂಬೇಡ್ಕರ್ ಶ್ರಮದ ಫಲವಾಗಿ ರಚಿಸಲ್ಪಟ್ಟಿರುವ ಸಂವಿಧಾನವು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯಾಗುವ ಅವಕಾಶ ನಮಗೆ ದೊರೆತಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ನ್ಯಾಷನಲ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ೭೫ನೇ ಗಣರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಂವಿಧಾನವನ್ನು ಗೌರವಿಸುವುದರ ಜೊತೆಗೆ ಮೂಲಭೂತ ಕರ್ತವ್ಯಗಳನ್ನು ಪಾಲಿಸಿದಾಗ ಮಾತ್ರ ಸಂವಿಧಾನದ ಆಶಯಗಳು ಈಡೇರಲು ಸಾಧ್ಯ. ಸಂವಿಧಾನ ಜಾರಿಗೆ ಬಂದ ಕಾರಣ ಸಮಾನತೆ, ಮೂಲಭೂತ ಹಕ್ಕುಗಳು, ಧಾರ್ಮಿಕ ಹಕ್ಕುಗಳು ದೊರೆಕಿವೆ. ಸಂವಿಧಾನ ಎಂಬುದು ಸರ್ವೋಚ್ಚ ಕಾನೂನು. ವಿಶಾಲ ಮನೋಭಾವದಿಂದ, ಸೋದರತ್ವದಿಂದ ನಾವು ಬದುಕುತ್ತಿಲ್ಲ, ಮನುಷ್ಯ ಮನುಷ್ಯರ ನಡುವೆ ಭೇದ, ಅತ್ಯಾಚಾರ, ಅನಾಚಾರಗಳು ನಡೆಯುತ್ತಿರುವುದು ನಾಚಿಕೆ ತರುತ್ತದೆ. ಏಕತೆ ಭಾತೃತ್ವ, ಸಮಗ್ರತೆ ಸಂವಿಧಾನದ ಆಶಯವಾಗಿದ್ದರೂ ನ್ಯಾಯ ಸಿಗುತ್ತಿಲ್ಲ ಎಂಬ ಕೊರಗಿದೆ. ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ ಬಲಿದಾನದ ಫಲವಾಗಿ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ. ಬಡತನ, ಭ್ರಷ್ಟಾಚಾರ ಅಸ್ಪೃಶ್ಯತೆಯಂತಹ ಪಿಡುಗುಗಳು ಬಗೆಹರಿಯದ ಸಮಸ್ಯೆಗಳಾಗಿ ಉಳಿದಿವೆ. ಯುವ ಸಮೂಹ ಸಾಮಾಜಿಕ ಜವಾಬ್ದಾರಿ ಹೊತ್ತಾಗ ಮಾತ್ರ ದೇಶಕ್ಕೆ ಗೌರವ ತರಲು ಸಾಧ್ಯವಾಗಲಿದ್ದು ಈ ನಿಟ್ಟಿನಲ್ಲಿ ದೇಶದ ಭವಿಷ್ಯ ರೂಪಿಸುವಲ್ಲಿ ಎಲ್ಲರು ಒಟ್ಟಾಗಿ ಶ್ರಮಿಸೋಣ ಎಂದರು.

ಉಪ ವಿಭಾಗಾಧಿಕಾರಿ ಮಹೇಶ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಂವಿಧಾನದ ಹಲವು ಕಾನೂನುಗಳನ್ನು ಬಳಸಿಕೊಂಡು ಜಾರಿಗೆ ತಂದ ಯೋಜನೆಗಳಿಂದ ಅಪಾರ ಸಾಧನೆ ಮಾಡಲಾಗಿದೆ. ಪರಿಶಿಷ್ಟ ಜಾತಿ, ವರ್ಗ, ಬುಡಕಟ್ಟು ಸಮುದಾಯಗಳು ಸೇರಿದಂತೆ ಇತರೆ ಶೋಷಿತ ಸಮುದಾಯಗಳು ಅಭಿವೃದ್ಧಿ ಕಂಡಿವೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಸಂವಿಧಾನದ ರಚನೆಯ ಮುನ್ನ ಸಾಕಷ್ಟು ಚೆರ್ಚೆಗಳು ನಡೆದಿವೆ. ಇತರೆ ದೇಶಗಳ ಶ್ರೇಷ್ಠ ವಿಚಾರಧಾರೆಗಳನ್ನು ಸಂದರ್ಭೋಚಿತವಾಗಿ ಸಂವಿಧಾನದಲ್ಲಿ ಸೇರಿಸಿಕೊಳ್ಳಲಾಗಿದೆ. ದೇಶದ ಅಭಿವೃದ್ದಿಗೆ ಸರ್ವರ ಏಳಿಗೆಗೆ ಪೂರಕವಾದ ಅಂಶಗಳನ್ನು ಸಂವಿಧಾನ ಒಳಗೊಂಡಿರುವುದರಿಂದ ಇದೊಂದು ವಿಶ್ವದಲ್ಲೆ ಶ್ರೇಷ್ಟ ಸಂವಿಧಾನವಾಗಿದೆ ಎಂದರು.

ಚಾಮರಾಜನಗರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ದೇವರಾಜ್ ಮಾತನಾಡಿ ಪ್ರಜಾಪ್ರಭುತ್ವ ಸಾಗಿಬಂದ ದಾರಿಯ ಬಗ್ಗೆ ತಿಳಿಸಿಕೊಟ್ಟರು. ತಹಸೀಲ್ದಾರ್ ಮಂಜುಳಾ, ಇ.ಓ ಶ್ರೀನಿವಾಸ್, ಬಿಇಓ ಮಂಜುಳಾ, ಡಿವೈಎಸ್‌ಪಿ ಸೋಮೇಗೌಡ, ಪೌರಾಯುಕ್ತ ರಮೇಶ್, ನಗರಸಭಾ ಸದಸ್ಯ ಬಸ್ತೀಪುರ ಶಾಂತರಾಜು ಮುಂತಾದವರಿದ್ದರು. ಆಕರ್ಷಕ ಪರೇಡ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಉತ್ತಮ ಚುನಾವಣೆ ಕರ್ತವ್ಯ ನಿರ್ವಹಿಸಿದ ಉಪ ವಿಭಾಗಾಧಿಕಾರಿ ಬಿ.ಆರ್.ಮಹೇಶ್‌ರವರನ್ನು ಸನ್ಮಾನಿಸಲಾಯಿತು.