ಜಗದೀಶ ಶೆಟ್ಟರ್‌ ಗೆಲುವು ನಿಶ್ಚಿತ: ಬಾಲಚಂದ್ರ ಜಾರಕಿಹೊಳಿ

| Published : Apr 22 2024, 02:15 AM IST / Updated: Apr 22 2024, 12:32 PM IST

ಸಾರಾಂಶ

ಅರಭಾವಿ ಕ್ಷೇತ್ರದಲ್ಲಿ ಬಿಜೆಪಿಗೆ ಅತೀ ಹೆಚ್ಚು ಮತಗಳ ಮುನ್ನಡೆ ಒದಗಿಸಲು ಬದ್ಧರಾಗಿದ್ದು, ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಗೆಲುವು ನಿಶ್ವಿತ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

 ಮೂಡಲಗಿ :  ಅರಭಾವಿ ಕ್ಷೇತ್ರದಲ್ಲಿ ಬಿಜೆಪಿಗೆ ಅತೀ ಹೆಚ್ಚು ಮತಗಳ ಮುನ್ನಡೆ ಒದಗಿಸಲು ಬದ್ಧರಾಗಿದ್ದು, ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಗೆಲುವು ನಿಶ್ವಿತ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಶುಕ್ರವಾರ ಸಂಜೆ ಇಲ್ಲಿಯ ಶಿವಬೋಧರಂಗ ಸೊಸೈಟಿಯ ಸಭಾಭವನದಲ್ಲಿ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಭವಿಷ್ಯ ಹಾಗೂ ಅಭಿವೃದ್ಧಿಗಾಗಿ ಬಿಜೆಪಿ ಅಧಿಕಾರಕ್ಕೆ ಬರುವುದು ಮತ್ತು ನರೇಂದ್ರ ಮೋದಿ ಅವರು ಪ್ರಧಾನಿ ಆಗುವುದು ಇಂದಿನ ಅವಶ್ಯಕತೆಯಾಗಿದೆ. ದೇಶದ ಅನೇಕ ಚುನಾವಣೆ ಸಮೀಕ್ಷೆಯಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗಳಿಸಿ ಮತ್ತೆ ಅಧಿಕಾರ ಹಿಡಿಯಲಿದೆ ಎಂಬುದು ಸಾಬೀತಾಗಿದೆ. ಜಗದೀಶ ಶೆಟ್ಟರ್ ಅವರು ಆಯ್ಕೆಯಾದರೆ ಜಿಲ್ಲೆಗೆ ವರದಾನವಾಗಲಿದೆ. ಶೆಟ್ಟರ್ ಅವರ ಮೂಲಕ ಜಿಲ್ಲೆ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದರು.

ದೇಶದ ಶತ್ರುಗಳಾದ ಪಾಕಿಸ್ತಾನ ಮತ್ತು ಚೀನಾ ರಾಷ್ಟ್ರಗಳ ಉಪಟಳ, ಸದ್ದಡಗಿಸಲು ಮೋದಿಯಂತಹ ಸಮರ್ಥ ನಾಯಕ ಈ ದೇಶಕ್ಕೆ ಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಭಾರತ ವಿಶ್ವದ ಮಹಾನ್ ಶಕ್ತಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ನರೇಂದ್ರ ಮೋದಿ ಅವರ ನಡೆಗೆ ಇಡೀ ಜಗತ್ತು ಭಾರತದತ್ತ ನೋಡುವಂತಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದ ತಪ್ಪಿಗೆ ಜನರು ಈಗ ಶಪಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅಪಪ್ರಾಚಾರಕ್ಕೆ ಕಿವಿಗೊಡಬೇಡಿ. ಚುನಾವಣೆ ಸಂದರ್ಭಕ್ಕೆ ಮಾತ್ರ ಅವರು ಕಾಣಿಸಿಕೊಳ್ಳತ್ತಾರೆ. ದೇಶ ಸುರಕ್ಷಿತವಾಗಿರಲು, ಅಭಿವೃದ್ಧಿಯತ್ತ ಸಾಗಲು ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಏ.23ರಂದು ಅರಭಾವಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಪತ್ನಿ ಶಿಲ್ಪಾ ಶೆಟ್ಟರ್‌ ಮಾತನಾಡಿ, ನರೇಂದ್ರ ಮೋದಿ ಅವರು ಸಮರ್ಥ ನಾಯಕರಾಗಿದ್ದಾರೆ. ದೇಶ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಜಗತ್ತಿನಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ್ದಾರೆ. ಮತ್ತೊಮ್ಮೆ ಅವರನ್ನು ಪ್ರಧಾನಿಯಾಗಿಸಲು ಬಿಜೆಪಿಗೆ ಮತ ನೀಡಬೇಕು. ಕೊರೊನಾದಂಥ ತುರ್ತು ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಜಗತ್ತಿಗೆ ಮಾದರಿಯೆನಿಸಿಕೊಂಡಿದ್ದಾರೆ. ರೈತರ, ಮಹಿಳೆಯರ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದಾರೆ. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಮೂಲಕ 500 ವರ್ಷಗಳ ಹಿಂದುಗಳ ಕನಸು ನನಸು ಮಾಡಿದ್ದಾರೆ ಎಂದರು.

ಕೋವಿಡ್ ಸಂದರ್ಭದಲ್ಲಿ ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ನಿರ್ವಹಿಸುವ ಜವಾಬ್ದಾರಿ ಜಗದೀಶ ಶೆಟ್ಟರ್‌ ಅವರಿಗೆ ಕೊಡಲಾಗಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಜಗದೀಶ ಶೆಟ್ಟರ್ ಅವರಂಥ ಸಮರ್ಥ ನಾಯಕರು ಬೇಕು. ಬಿಜೆಪಿಗೆ ಮತ ನೀಡಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ವೇದಿಕೆಯಲ್ಲಿ ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಬಿಜೆಪಿ ಮಹಿಳಾ ಮೋರ್ಚಾದ ಇಂದಿರಾ ಅಂತರಗಟ್ಟಿ, ಜಿಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ, ಅರಭಾವಿ ಪ್ರಭಾರಿ ವಿಜಯ ಗುಡದರಿ, ಬಸವರಾಜ ಗುಲಗಾಜಂಬಗಿ, ಅಪ್ಪಾಸಾಹೇಬ ಹೊಸಕೋಟಿ ಉಪಸ್ಥಿತರಿದ್ದರು. ಸಿದ್ಧಣ್ಣ ದುರದುಂಡಿ ನಿರೂಪಿಸಿದರು. ಮಹಾಂತೇಶ ಕುಡಚಿ ವಂದಿಸಿದರು.