ಹುಬ್ಬಳ್ಳಿ:

ಹೋಳಿ ಹಬ್ಬ ಪ್ರೋತ್ಸಾಹಿಸಲು, ಹಿಂದೂ ಸಮಾಜ ಸಂಘಟಿಸುವ ಸಲುವಾಗಿ ಗುರುವಾರ ಸಂಜೆ ಆಯೋಜಿಸಲಾದ 15ನೇ ವರ್ಷದ ಜಗ್ಗಲಗಿ ಹಬ್ಬವು ನಗರದಲ್ಲಿ ಸಾಂಸ್ಕೃತಿಕ ಲೋಕವನ್ನೇ ಸೃಷ್ಟಿಸಿತು. ಈ ಜಗ್ಗಲಗಿಯೊಂದಿಗೆ ವಿವಿಧ ಕಲಾ ತಂಡಗಳು, ಬಗೆ-ಬಗೆಯ ವಾದ್ಯಮೇಳಗಳು ಪಾಲ್ಗೊಳ್ಳುವ ಮೂಲಕ ಮೆರವಣಿಗೆಗೆ ಮೆರುಗು ತಂದವು.

ಈ ಜಗ್ಗಲಗಿ ಹಬ್ಬದಲ್ಲಿ ಜಗ್ಗಲಿಗೆಗಳೊಂದಿಗೆ ಹಲಿಗೆ, ತಮಟೆ, ಜಾಂಜ್ ಮೇಳ, ಡೊಳ್ಳು, ಕರಡಿ ಮಜಲು. ಹೀಗೆ ಹತ್ತಾರು ನಾದಗಳಿಂದು ಹೊರಸೂಸುತ್ತಿದ್ದ ಸದ್ದಿಗೆ ಸೇರಿದ್ದ ಸಾವಿರಾರು ಸಂಖ್ಯೆಯ ಜನರು ಕುಣಿದು ಕುಪ್ಪಳಿಸಿದರು. ಮೆರವಣಿಗೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಲಗೆ ಬಾರಿಸುವ ಮೂಲಕ ಚಾಲನೆ ನೀಡಿದರು. ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ 50ಕ್ಕೂ ಅಧಿಕ ಜಗ್ಗಲಗಿ ಮೇಳ, ಸಾವಿರಕ್ಕೂ ಅಧಿಕ ವಾದ್ಯಮೇಳ ಕಲಾವಿದರು, 400ಕ್ಕೂ ಅಧಿಕ ಜಗ್ಗಲಗಿಗಳು, 50ಕ್ಕೂ ಅಧಿಕ ವಿವಿಧ ವಾದ್ಯಮೇಳಗಳು ಪಾಲ್ಗೊಂಡಿದ್ದವು.

ಮಹಾರಾಷ್ಟ್ರ ಈಚಲಕರಂಜಿಯ ಜೀವಿಕಾ ಇವೆಂಟ್ಸ್‌ನ 50 ಜನರ ತಂಡ, ಹುಬ್ಬಳ್ಳಿ ನ್ಯೂ ಆಲ್ ಮ್ಯೂಸಿಕಲ್‌ ಸ್ಟಾಪ್ ತಾಷಾರಾಮ್ ಡೋಲ್‌ ಕಮ್ ಹಾಗೂ ಸುಪರ್ ಕಿಂಗ್ ನಾಸಿಕ ಡೋಳ ತಂಡದ 40 ಸದಸ್ಯರು, ಉಡುಪಿ ಕಾಡು ಬೆಟ್ಟ ಪ್ರದೇಶದಿಂದ ಹುಲಿ ಕುಣಿತ, ಹನುಮಾನ, ನಂದಿ, ನಾಗಾಸಾಧುಗಳೊಂದಿಗೆ, ವೇಷಧಾರಿಗಳಾದ ಪರಮೇಶ್ವರ ನರಸಿಂಹ ಸೇರಿದಂತೆ 1 ಸಾವಿರಕ್ಕೂ ಅಧಿಕ ಕಲಾವಿದರು ಪಾಲ್ಗೊಳ್ಳುವ ಮೂಲಕ ಜಗ್ಗಲಗಿ ಹಬ್ಬಕ್ಕೆ ಹೊಸ ಮೆರಗು ತಂದವು.

ಅದ್ಧೂರಿ ಮೆರವಣಿಗೆ:


ಮೂರುಸಾವಿರ ಮಠದಿಂದ ಮೆರವಣಿಗೆ ಆರಂಭವಾಗಿ ಎಸ್.ಟಿ. ಭಂಡಾರಿ ರಸ್ತೆ, ವಿಕ್ಟೋರಿಯಾ ರಸ್ತೆ, ಕೊಪ್ಪಿಕರ್ ರಸ್ತೆ, ಬಾನಿ ಓಣಿ, ಶಕ್ತಿ ರಸ್ತೆ, ಸ್ಟೇಷನ್ ರಸ್ತೆ, ಗಣೇಶಪೇಟ್ ವೃತ್ತ, ಮರಾಠಗಲ್ಲಿ, ಬ್ರಾಡ್‌ವೇ, ದುರ್ಗದಬೈಲ್, ಬೆಳಗಾವಿ ಗಲ್ಲಿ, ಪೆಂಡಾರ್ ಗಲ್ಲಿ, ತುಳಜಾಭವಾನಿ ವೃತ್ತದ ಮೂಲಕ ಮರಳಿ ಮೂರುಸಾವಿರ ಮಠಕ್ಕೆ ಆಗಮಿಸಿ ಸಮಾರೋಪಗೊಂಡಿತು.

ವಿಶೇಷತೆ ಅಡಗಿವೆ:

ಜಗ್ಗಲಗಿ ಹಬ್ಬಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಭಾರತೀಯ ಸಂಪ್ರದಾಯದಲ್ಲಿ ಹೋಳಿ ಹಬ್ಬ ಮತ್ತು ಯುಗಾದಿ ಹಬ್ಬ ಸೇರಿದಂತೆ ಎಲ್ಲ ಹಬ್ಬಗಳಿಗೂ ತನ್ನದೇಯಾದ ವಿಶೇಷತೆ ಅಡಗಿದೆ. ಹಿಂದೂ ಕ್ಯಾಲೆಂಡರ್‌ನಲ್ಲಿ ಹೋಳಿ ಹಬ್ಬವು ವರ್ಷದ ಕೊನೆಯ ಹಬ್ಬವಾಗಿ ಆಚರಿಸಲಾಗುತ್ತದೆ. ಆಯಾ ಕಾಲಕ್ಕೆ ತಕ್ಕಂತೆ ಪೂರ್ವಜರು ಹಬ್ಬಗಳನ್ನು ಆಚರಣೆಗೆ ತಂದಿದ್ದು, ಅವುಗಳನ್ನು ಉಳಿಸಿ-ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಹಿಂದೂಗಳ ಮೇಲಿದೆ. ಮರೆಯಾಗುತ್ತಿರುವ ಜಗ್ಗಲಗಿಯಂತಹ ಕಲೆಗಳನ್ನು ಶಾಸಕ ಮಹೇಶ ಟೆಂಗಿನಕಾಯಿ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.

ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಮಾತನಾಡಿ, ಹಿಂದೂ ಸಮಾಜವನ್ನು ಒಗ್ಗೂಡಿಸುವ ಜತೆಗೆ ಏಕತೆ ಸಂದೇಶದ ಕಡೆಗೆ ಕೊಂಡೊಯ್ಯುವಲ್ಲಿ ಹಬ್ಬಗಳು ಸಹಕಾರಿಯಾಗಿವೆ ಎಂದು ಹೇಳಿದರು.

ಶಾಸಕ, ಕಾರ್ಯಕ್ರಮದ ಆಯೋಜಕ ಮಹೇಶ ಟೆಂಗಿನಕಾಯಿ ಪ್ರಾಸ್ತಾವಿಕ ಮಾತನಾಡಿದರು. ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀ, ಮಣಕವಾಡದ ಅಭಿನವ ಮೃತ್ಯುಂಜಯ ಶ್ರೀ ಆಶೀರ್ವಚನ ನೀಡಿದರು. ನವಲಗುಂದ ಗವಿಮಠದ ಬಸವಲಿಂಗ ಶ್ರೀ, ರುದ್ರಾಕ್ಷಿ ಮಠದ ಬಸವಲಿಂಗ ಶ್ರೀ, ಮಲ್ಲಿಕಾರ್ಜುನ ಶ್ರೀ, ರಾಯನಾಳ ವಿರಕ್ತಮಠದ ಅಭಿನವ ರೇವಣಸಿದ್ದೇಶ್ವರ ಶ್ರೀ, ಮೇಯರ್‌ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚೌಹಾಣ, ಮಾಜಿ ಶಾಸಕ ಅಶೋಕ ಕಾಟವೆ, ಮುಖಂಡರಾದ ತಿಪ್ಪಣ್ಣ ಮಜ್ಜಗಿ, ಲಿಂಗರಾಜ ಪಾಟೀಲ ಸೇರಿದಂತೆ ಹಲವರಿದ್ದರು.