ತಾಲೂಕಿನ ಕೊರ್ಲಹಳ್ಳಿಯ ಆದರ್ಶ ವಿದ್ಯಾಲಯದ 6ನೇ ತರಗತಿ ವಿದ್ಯಾರ್ಥಿನಿ, ಕಲಕೇರಿ ಗ್ರಾಮದ ಜಾಹ್ನವಿ ಮೌನೇಶ ಬಡಿಗೇರ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಅತಿ ಕಡಿಮೆ ಸಮಯದಲ್ಲಿ ತರಕಾರಿ ಕತ್ತರಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರು ದಾಖಲಿಸಿ ಗಮನಾರ್ಹ ಸಾಧನೆ ಮಾಡಿದ್ದಾಳೆ.
ಕನ್ನಡಪ್ರಭ ವಾರ್ತೆ ಮುಂಡರಗಿ
ತಾಲೂಕಿನ ಕೊರ್ಲಹಳ್ಳಿಯ ಆದರ್ಶ ವಿದ್ಯಾಲಯದ 6ನೇ ತರಗತಿ ವಿದ್ಯಾರ್ಥಿನಿ, ಕಲಕೇರಿ ಗ್ರಾಮದ ಜಾಹ್ನವಿ ಮೌನೇಶ ಬಡಿಗೇರ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಅತಿ ಕಡಿಮೆ ಸಮಯದಲ್ಲಿ ತರಕಾರಿ ಕತ್ತರಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರು ದಾಖಲಿಸಿ ಗಮನಾರ್ಹ ಸಾಧನೆ ಮಾಡಿದ್ದಾಳೆ.ನಾಲ್ಕು ತಿಂಗಳುಗಳ ಕಾಲ ಆನ್‌ಲೈನ್ ಮೂಲಕ ಪ್ರಾಚೀನ ಗಾಂಧಾರಿ ವಿದ್ಯೆಯ ತರಬೇತಿ ಪಡೆದಿದ್ದ ಜಾಹ್ನವಿ, 2026ರ ಆ. 12ರಂದು ಜೂಮ್ ಆನ್‌ಲೈನ್ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಳು. ಸ್ಪರ್ಧೆಯಲ್ಲಿ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕೇವಲ 4 ನಿಮಿಷ 23 ಸೆಕೆಂಡುಗಳಲ್ಲಿ ಅರ್ಧ ಕಿಲೋ ಗ್ರಾಂ ತರಕಾರಿಗಳನ್ನು ನಿಖರವಾಗಿ ಕತ್ತರಿಸಿ ಈ ಅಪರೂಪದ ದಾಖಲೆ ಬರೆದಿದ್ದಾಳೆ.
ಬಾಲಕಿ ಜಾಹ್ನವಿಯನ್ನು ಮುಂಡರಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬಿಇಒ ಗಂಗಾಧರ ಅಣ್ಣಿಗೇರಿ ಸನ್ಮಾನಿಸಿದರು.ಈ ವೇಳೆ ಮಾತನಾಡಿದ ಅವರು, ನಮ್ಮ ಮುಂಡರಗಿ ತಾಲೂಕಿನ ಸರ್ಕಾರಿ ಶಾಲಾ ವಿದ್ಯಾರ್ಥಿನಿ ಇಂತಹ ಅಪರೂಪದ ಕಲೆ ಪ್ರದರ್ಶಿಸಿ ರಾಷ್ಟ್ರ ಮಟ್ಟದಲ್ಲಿ ತಾಲೂಕಿಗೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ. ಕೇವಲ ಪಠ್ಯದ ಓದು-ಬರಹಕ್ಕೆ ಸೀಮಿತವಾಗದೆ, ಭಾರತೀಯ ಪರಂಪರೆಯ ಗಾಂಧಾರಿ ವಿದ್ಯೆಯನ್ನು ಕಲಿಸಿ ಬಾಲಕಿಯ ಪ್ರತಿಭೆ ಪ್ರೋತ್ಸಾಹಿಸಿದ ಪಾಲಕರ ಕಾರ್ಯ ಶ್ಲಾಘನೀಯ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಇಲಾಖೆಯ ಜೊತೆಗೆ ಪೋಷಕರ ಸಹಕಾರವೂ ಅತ್ಯಗತ್ಯ ಎಂದರು.
ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯಿನಿ ಹಂಸವಾಣಿ.ಕೆ.ಆರ್, ಸಮಸ್ತ ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸನ್ಮಾನ ಸಮಾರಂಭದಲ್ಲಿ ಶಿಕ್ಷಣ ಸಂಯೋಜಕ ಮನೋಹರ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.