ಚಿತ್ರೀಕರಣಕ್ಕೆ ಪೂರ್ವದಲ್ಲಿ ನಟ ರಿಷಬ್ ಶೆಟ್ಟಿ ದಂಪತಿ ಆಂಜನೇಯ ಸ್ವಾಮಿಗೆ ಪೂಜೆ
ಗಂಗಾವತಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಹನುಮ ಜನಿಸಿದ ಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಖ್ಯಾತ ನಟ ರಿಷಬ್ ಶೆಟ್ಟಿ ನಟಿಸಲಿರುವ ಜೈ ಹನುಮಾನ್ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು.
ಕಾಂತಾರ ನಟ ರಿಷಬ್ ಶೆಟ್ಟಿ ಜೈ ಹನುಮಾನ್ ಚಿತ್ರದ ನಾಯಕ ನಟರಾಗಿದ್ದು, ಚಿತ್ರದ ನಿರ್ದೇಶಕ ಪ್ರಶಾಂತ ವರ್ಮಾ ಅವರ ಚಿತ್ರಕ್ಕೆ ಮೈತ್ರಿ ಮೂವೀಸ್ ಅವರ ನವೀನ್ ಯರನೇನಿ, ರವಿಶಂಕರ್ ನಿರ್ಮಾಪಕರಾಗಿದ್ದಾರೆ. ಚಿತ್ರೀಕರಣಕ್ಕೆ ಪೂರ್ವದಲ್ಲಿ ನಟ ರಿಷಬ್ ಶೆಟ್ಟಿ ದಂಪತಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು.ಎರಡು ತಿಂಗಳ ಹಿಂದೆ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದ ವೇಳೆ ನಟ ರಿಷಬ್ ಶೆಟ್ಟಿ ಅವರು ಜೈ ಹನುಮಾನ್ ಚಿತ್ರೀಕರಣ ಪ್ರಾರಂಭಿಸುವ ನಿರ್ಧಾರ ಕೈಗೊಂಡಿದ್ದರು. ಹನುಮ ಜನಿಸಿದ ಸ್ಥಳ ಪುಣ್ಯಭೂಮಿಯಾಗಿದ್ದು, ಇಲ್ಲಿಂದ ಚಿತ್ರೀಕರಣಗೊಂಡ ಎಲ್ಲ ಚಿತ್ರಗಳು ಯಶಸ್ವಿಗೊಂಡಿರುವ ಹಿನ್ನೆಲೆ ಮತ್ತು ಅಂಜನೇಯ ಜನ್ಮಸ್ಥಳ, ರಾಮಾಯಣ ಇತಿಹಾಸ, ಪಂಪಾಸರೋವರ ಸೇರಿದಂತೆ ಐತಿಹಾಸಿಕ ಸ್ಥಳಗಳು ಇಲ್ಲಿರುವುದರಿಂದ ಜೈ ಹನುಮಾನ್ ಚಿತ್ರದ ಚಿತ್ರೀಕರಣಕ್ಕೆ ಮುಹೂರ್ತ ನಿಗದಿಪಡಿಸಿ ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಅಂಜನಾದ್ರಿ ದೇವಸ್ಥಾನ ಸಮಿತಿಯಿಂದ ರಿಷಬ್ ಶೆಟ್ಟಿ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು.ನೂಕುನುಗ್ಗಲು: ಹೊಸಪೇಟೆಯಿಂದ ಅಂಜನಾದ್ರಿಗೆ ಆಗಮಿಸಿದ ಕಾಂತಾರ ಚಿತ್ರದ ನಟ ರಿಷಬ್ ಶೆಟ್ಟಿ ಅವರನ್ನು ನೋಡಲು ಅಭಿಮಾನಿಗಳು ನೂಕುನುಗ್ಗಲು ನಡೆಸಿದರು. ರಾಂಪುರ ಮಾರ್ಗವಾಗಿ ವೇದಪಾಠ ಶಾಲೆಯ ಮೂಲಕ ಅಂಜನಾದ್ರಿ ಬೆಟ್ಟ ಹತ್ತಿದ ನಟನಿಗೆ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.