ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ಜಾಮರ್‌ ಅಳವಡಿಕೆಯಿಂದ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ತಲೆದೋರಿರುವುದನ್ನು ವಿರೋಧಿಸಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ನೇತೃತ್ವದಲ್ಲಿ ಶನಿವಾರ ಜೈಲು ಆವರಣ ಎದುರು ಪ್ರತಿಭಟನೆ ನಡೆಯಿತು. ಈ ವೇಳೆ ಜೈಲಿನ ಒಳಗೆ ತೆರಳಿ ಜಾಮರ್‌ ಕಿತ್ತೆಸೆಯುವುದಾಗಿ ಘೋಷಿಸಿ ಜೈಲ್‌ಭರೋಗೆ ಯತ್ನಿಸಿದ ಶಾಸಕ ವೇದವ್ಯಾಸ್‌ ಕಾಮತ್‌ ಮತ್ತಿತರರನ್ನು ಪೊಲೀಸರು ಆರಂಭದಲ್ಲೇ ತಡೆದು, ವಶಕ್ಕೆ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಮಂಗಳೂರು

ಇದಕ್ಕೂ ಮೊದಲು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವೇದವ್ಯಾಸ್‌ ಕಾಮತ್‌, ಜೈಲ್‌ನಲ್ಲಿ ಏಕಾಏಕಿ 5ಜಿ ಜಾಮರ್‌ ಅಳವಡಿಕೆಯಿಂದ ಸುತ್ತಮುತ್ತಲಿನ ಆರು ವಾರ್ಡ್‌ನಲ್ಲಿರುವ ವ್ಯಾಪಾರ ಕೇಂದ್ರ, ಕಚೇರಿಗಳಲ್ಲದೆ, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಜೈಲು ವಿಭಾಗದ ಡಿಜಿ, ಗೃಹ ಸಚಿವರು, ಜೈಲು ಸೂಪರಿಂಡೆಂಟ್‌ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸಮಸ್ಯೆ ಬಗೆಹರಿದಿಲ್ಲ. ಜೈಲು ಅಧಿಕಾರಿಗಳು ಸರಿಯಿದ್ದರೆ ಜೈಲಿಗೆ ಜಾಮರ್‌ ಅಗತ್ಯವೇಕೆ? ಜಾಮರ್‌ನಿಂದ ಉಂಟಾದ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ಅಲ್ಲದೆ ಜೈಲನ್ನು ಇಲ್ಲಿಂದ ಮುಡಿಪಿಗೆ ಸ್ಥಳಾಂತರಿಸಬೇಕು ಎಂದರು.

ಜಾಮರ್‌ ಸಮಸ್ಯೆಯನ್ನು ವಿರೋಧಿಸಿ ಶಾಸಕ ವೇದವ್ಯಾಸ ಕಾಮತ್‌, ಮುಖಂಡರಾದ ಸುಧೀರ್‌ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ ಮತ್ತಿತರರು ಮೊಬೈಲ್‌ಗಳನ್ನು ನೆಲಕ್ಕೆ ಬಡಿದು ಜಾಮರ್‌ ಸಮಸ್ಯೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮುಡಾ ಮಾಜಿ ಅಧ್ಯಕ್ಷ ರವಿಶಂಕರ್‌ ಮಿಜಾರು, ಮಾಜಿ ಮೇಯರ್‌ ದಿವಾಕರ ಪಾಂಡೇಶ್ವರ, ಬಿಜೆಪಿ ದಕ್ಷಿಣ ಕ್ಷೇತ್ರದ ಅಧ್ಯಕ್ಷ ರಮೇಶ್‌ ಕಂಡೆಟ್ಟು, ಮೀನುಗಾರ ಮುಖಂಡ ನಿತಿನ್‌ ಕುಮಾರ್‌, ಮಾಜಿ ಉಪಮೇಯರ್‌ ಪೂರ್ಣಿಮಾ, ಮುಖಂಡರಾದ ರಾಧಾಕೃಷ್ಣ, ವಿಜಯ ಕುಮಾರ್‌, ಲೀಲಾವತಿ, ರಮೇಶ್‌ ಹೆಗ್ಡೆ, ಅಕ್ಷಿತ್‌ ಕೊಟ್ಟಾರಿ ಮತ್ತಿತರರು ಇದ್ದರು.