ಸಾರಾಂಶ
ಜೈನ ಸಮುದಾಯ ಸೇವೆ, ತ್ಯಾಗದ ಪರಿಪೂರ್ಣತೆಯೊಂದಿಗೆ ಮಹಿಳಾ ಸನ್ಯಾಸತ್ವ ಸ್ವೀಕಾರಕ್ಕೆ ಅವಕಾಶ ನೀಡಿದೆ. ಈ ಸಮುದಾಯ ಪರಿಶುದ್ಧ ಆಚರಣೆ ಮತ್ತು ಕಟ್ಟುನಿಟ್ಟಿನ ವ್ರತಗಳಿಂದ ಕೂಡಿದೆ ಎಂದು ಹಾರನಹಳ್ಳಿ ಕೋಡಿಮಠ ಮಹಾ ಸಂಸ್ಥಾನ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು. ಅರಸೀಕೆರೆಯ ಅಷ್ಟಪ್ರಕಾರಿ ಮಹಾಪೂಜೆ, ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಅಷ್ಟಪ್ರಕಾರಿ ಮಹಾಪೂಜೆ, ಧಾರ್ಮಿಕ ಸಭೆ
ಅರಸೀಕೆರೆ: ವಿಶ್ವಕ್ಕೆ ಶಾಂತಿ ಮಂತ್ರ ಸಾರಿದ ಜೈನ ಸಮುದಾಯ ಸೇವೆ, ತ್ಯಾಗದ ಪರಿಪೂರ್ಣತೆಯೊಂದಿಗೆ ಮಹಿಳಾ ಸನ್ಯಾಸತ್ವ ಸ್ವೀಕಾರಕ್ಕೆ ಅವಕಾಶ ನೀಡಿದೆ. ಈ ಸಮುದಾಯ ಪರಿಶುದ್ಧ ಆಚರಣೆ ಮತ್ತು ಕಟ್ಟುನಿಟ್ಟಿನ ವ್ರತಗಳಿಂದ ಕೂಡಿದೆ ಎಂದು ಹಾರನಹಳ್ಳಿ ಕೋಡಿಮಠ ಮಹಾ ಸಂಸ್ಥಾನ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.ನಗರದ ಹೊರವಲಯದಲ್ಲಿರುವ ಜಾಜೂರು ಗ್ರಾಮದ ವಿಜಯನಗರ ಬಡಾವಣೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಸಂಕಟಮೋಚನ ಪಾರ್ಶ್ವ ಭೈರವ ಧಾಮ ಹಾಗೂ ಶ್ರೀ ಶಾಂತಿ ಗುರುದೇವರ ಭವ್ಯ ಮಂದಿರದಲ್ಲಿ ನಡೆದ ವಿಶ್ವ ಶಾಂತಿ ಮತ್ತು ಲೋಕ ಕಲ್ಯಾಣಾರ್ಥವಾಗಿ ನಡೆದ ರಾಷ್ಟ್ರೀಯ ಮಟ್ಟದ ಗುರು ಭಕ್ತಿ ಕಾರ್ಯಕ್ರಮದ ಅಷ್ಟಪ್ರಕಾರಿ ಮಹಾಪೂಜೆ, ಧಾರ್ಮಿಕ ಸಭೆ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯನ ಜೀವನದಲ್ಲಿ ದೈಹಿಕ ಮತ್ತು ಮಾನಸಿಕ ಸಾಧನೆ ಮಾಡಬೇಕಾದಲ್ಲಿ ಕಠಿಣ ವ್ರತಗಳನ್ನು ಆಚರಿಸಿದಾಗ ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ. ಧರ್ಮಾಚರಣೆ ಮತ್ತು ತತ್ವ ಆದರ್ಶಗಳ ಆಚರಣೆ ಕ್ಷೀಣಿಸುತ್ತಿರುವ ಪ್ರಸ್ತುತ ದಿನಗಳಲ್ಲಿ ಅರಸೀಕೆರೆ ಸಮೀಪ ಶ್ರೀ ಸಂಕಟಮೋಚನ ಪಾರ್ಶ್ವ ಭೈರವ ಧಾಮ ಹಾಗೂ ಶ್ರೀ ಶಾಂತಿ ಗುರುದೇವರ ಭವ್ಯ ಮಂದಿರ ನಿರ್ಮಾಣವು ಪೂರ್ಣಗೊಂಡ ನಂತರ ವಿಶೇಷ ಧಾರ್ಮಿಕ ಕ್ಷೇತ್ರವಾಗಿ ಹೊರಹೊಮ್ಮಲಿದೆ. ಶಾಂತಿ ಮತ್ತು ಸಹಬಾಳ್ವೆಯನ್ನು ರೂಢಿಸಿಕೊಳ್ಳಲು ಎಲ್ಲರೂ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಬೇಕು ಎಂದು ಹೇಳಿದರು.ಸಮಾರಂಭಕ್ಕೂ ಮುನ್ನ ನಗರದ ಯಜಮಾನ್ ರಂಗೇಗೌಡರ ಬೀದಿಯಲ್ಲಿರುವ ಶ್ರೀ ವಾಸು ಪೂಜ್ಯ ಸ್ವಾಮಿ ಜೈನ ದೇವಾಲಯದಿಂದ ವಿವಿಧ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಸಾಂಪ್ರದಾಯಿಕ ವೇಷಭೂಷಣ, ಪೂರ್ಣಕುಂಭ ಸ್ವಾಗತದೊಂದಿಗೆ, ಹೆಣ್ಣು ಮಕ್ಕಳ ಬೈಕ್ ರ‍್ಯಾಲಿ ಮತ್ತು ಅಲಂಕೃತ ಕುದುರೆ ಸವಾರಿಗೆ ಮೆರಗನ್ನು ನೀಡಿತು.
ರಾತ್ರಿ ಏಕ್ ಶ್ಯಾಮ್ ಗುರು ಶಾಂತಿ ಕೇ ನಾಮ್ ಶೀರ್ಷಿಕೆಯಡಿ ಛತ್ತೀಸ್‌ಗಢದ ರಾಷ್ಟ್ರೀಯ ಸಂಗೀತಕಾರ ಭವೇಶ್ ಕುಮಾರ್ ಬೈದ್ ಹಾಗೂ ಪ್ರಸನ್ನ ಕುಮಾರ್ ತಂಡದಿಂದ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಜಯಪುರಿ ಶಿಲ್ಪಿ ವೀರೇಂದ್ರ ಕುಮಾರ್ ಶರ್ಮ ಗುರುಗಳ ಮೂರ್ತಿ ಪ್ರತಿಮೆಯನ್ನು ಪ್ರಾತ್ಯಕ್ಷಿಕೆಯಾಗಿ ನಿರ್ಮಾಣ ಮಾಡಿದ್ದು ನೂರಾರು ಭಕ್ತರ ಮನ ಸೂರೆಗೊಂಡಿತು.ಕಾರ್ಯಕ್ರಮಕ್ಕೆ ಕರ್ನಾಟಕ ಸೇರಿ ಹೊರ ರಾಜ್ಯಗಳಿಂದ ನೂರಾರು ಜೈನ ಸಮುದಾಯದವರು ಆಗಮಿಸಿ ಭಾಗವಹಿಸಿದ್ದರು.
ರಾಜ್ಯ ಜೈನ ಸಮಾಜದ ಅಧ್ಯಕ್ಷ ಚೇತನ್ ಪ್ರಕಾಶ್ ಡೊಂಗ್ರವಾಲ್, ಶ್ರೀ ಸಂಕಟಮೋಚನ ಪಾರ್ಶ್ವಭೈರವ ಧಾಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಶೋಕ್ ಸುರಾನಾ, ಬೆಂಗಳೂರು ಉದ್ಯಮಿ ರಮೇಶ್ ಕುಮಾರ್ ಜಿ.ಹರಣ್, ನಹಾರ್ ಭವನ್, ಕುಮಾರ್ ಪಾಲ್ ಸಿಸೋದಿಯ, ಪ್ರಕಾಶ್ ಚಂದ್ ರಾಥೋಡ್, ಮುಂಬೈನ ಗುರು ಭಕ್ತರಾದ ಭರತ್ ಕುಮಾರ್ ಕೊಠಾರಿ, ಉದಯ್ ಸಿಂಗ್ವಿ, ಮಹಾವೀರ್ ಚೂತರ್, ಪ್ರಸನ್ನಕುಮಾರ್, ಪರಸ್ ಮಲ್ ಮೆಹ್ತಾ, ಮಹಾವೀರ್ ಬೋಹರಾ, ಚೇತನ್ ಪ್ರಕಾಶ್, ಚೇತನ್ ಮೆಹ್ತಾ, ಚೇತನ್ ಜೈನ್, ವಿಕಾಸ್ ಮೆಹತಾ ಇದ್ದರು.